ಹಿರೀಸಾವೆ: ಇಲ್ಲಿನ ಅಮ್ಮಕುಟೀರ ಬಳಿ ಶನಿವಾರ ಚಲಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಉರುಳಿಬಿದ್ದು, ಒಬ್ಬ ಮೃತಪಟ್ಟು, ಇನ್ನೊಬ್ಬ ಗಾಯಗೊಂಡಿದ್ದಾನೆ.
ಬೈಕ್ ಚಾಲನೆ ಮಾಡುತ್ತಿದ್ದ ನಾಗಮಂಗಲ ತಾಲೂಕಿನ ಎಂ.ಕೋಡಿಹಳ್ಳಿ ಗ್ರಾಮದ ಹನುಮಂತೇಗೌಡ (54) ಮೃತರು. ಬೈಕ್ ಹಿಂಬದಿ ಸವಾರ ತುರುವೆಕೆರೆ ತಾಲೂಕು ಬಿಗ್ಗೇನಹಳ್ಳಿ ಶಾಂತಕುಮಾರ್ ಗಾಯಗೊಂಡಿದ್ದಾರೆ.
ಚನ್ನರಾಯಪಟ್ಟಣದಿಂದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬರುತ್ತಿದ್ದಾಗ, ಹಿರೀಸಾವೆಯ ಅಮ್ಮಕುಟೀರ ಬಳಿ ನಾಯಿ ಅಡ್ಡ ಬಂದಾಗ, ಬೈಕ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಹಳ್ಳಕ್ಕೆ ಉರುಳಿ ಬಿದ್ದಿದೆ. ಮೃತ ಹನುಮಂತೇಗೌಡ ಮತ್ತು ಶಾಂತಕುಮಾರ್ ಅವರು ಹಿರೀಸಾವೆ ಹೋಬಳಿ ಬ್ಯಾಡರಹಳ್ಳಿ ಗ್ರಾಮದ ಅಳಿಯಂದಿರು ಎಂದು ಗ್ರಾಮದ ಯೋಗೇಶ್ ತಿಳಿಸಿದರು. ಹಿರೀಸಾವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.