ಒಂದು ದೇಶ, ಒಂದು ಚುನಾವಣೆ ಜಾರಿ ಕಷ್ಟ ಸಾಧ್ಯ

B S Suresh
Published on

ಕೋಲಾರ: ದೇಶದಲ್ಲಿ ಒಂದು ದೇಶ, ಒಂದು ಚುನಾವಣೆ ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದ್ದು, ಅದು ಕಷ್ಟಸಾಧ್ಯ ಎಂದು ಸಚಿವ ಬೈರತಿ ಸುರೇಶ್ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅಧಿವೇಶನದಲ್ಲಿ ಅನುಮತಿ ದೊರೆಯಬೇಕಾದರೆ ಶೇ.2/3 ಬಹುಮತ ಪಡೆಯಬೇಕಾಗುತ್ತದೆ. ಹೀಗಾಗಿ ಅದು ಜಾರಿಗೆ ಬರುವುದು ಕಷ್ಟಸಾಧ್ಯ. ಸದ್ಯ ಕೆಲವೊಂದು ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಒಂದು ವರ್ಷದಲ್ಲಿ ಮತ್ತೆ ಕೆಲ ರಾಜ್ಯಗಳಲ್ಲಿ ಚುನಾವಣೆ ಬರಲಿದೆ ಎಂದು ತಿಳಿಸಿದರು.
ನಗರಾಭಿವೃದ್ಧಿ ಇಲಾಖೆಯಿಂದ ಕೇಂದ್ರ ಸರ್ಕಾರ ಮಂಜೂರು ಮಾಡಿದ್ದ 250 ಕೋಟಿ ರೂ. ಮಾಹಿತಿ ನೀಡದೆ ವಾಪಸ್ ಪಡೆದುಕೊಂಡಿದೆ. ಕೋಲಾರ ಹೊರ ವರ್ತುಲ ರಸ್ತೆ ಅಭಿವೃದ್ಧಿಗಾಗಿ100 ಕೋಟಿ ರೂ. ಮೀಸಲಾಡಲಾಗಿತ್ತು. ಆದರೆ, ನನಗೆ ಗೊತ್ತಿಲ್ಲದೆಯೇ 250 ಕೋಟಿ ವಾಪಸ್ ಪಡೆದುಕೊಂಡಿದ್ದಾರೆ ಎಂದು ದೂರಿದರು.
ಉಸ್ತುವಾರಿ ಸಚಿವನಾಗಿ ಜಿಲ್ಲೆಯ ಜನರಿಗೆ ವರ್ತುಲ ರಸ್ತೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದೆ. ರಾಜ್ಯ ಸರ್ಕಾರದ ಅನುದಾನದಲ್ಲಿಯೇ ಕಾಮಗಾರಿ ನಡೆಸಲಾಗುವುದು. ಮುಖ್ಯಮಂತ್ರಿಗಳಿಂದ ವಿಶೇಷ ಅನುದಾನ ತಂದು ರಿಂಗ್ ರಸ್ತೆ ಅಭಿವೃದ್ಧಿಪಡಿಸಲಾಗುವುದು ಎಂದು ಭರವಸೆ ನೀಡಿದರು.
ಎತ್ತಿನಹೊಳೆ ಯೋಜನೆ ರೂಪಿಸಿರುವುದು ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗಾಗಿ. ಯೋಜನೆಗಾಗಿ ಹೆಚ್ಚುವರಿ ೮ ಸಾವಿರ ಕೋಟಿ ರೂ. ನೀಡುವುದಾಗಿ ಭರವಸೆ ನೀಡಿದ್ದಾರೆ. ಹೀಗಾಗಿ, ಖಂಡಿತವಾಗಿಯೂ ನೀರು ಬಂದೇ ಬರುತ್ತದೆ, ಅನುಮಾನವೇ ಬೇಡ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net