

ಬೆಂಗಳೂರು: ಕರೊನಾಗೆ ಲಸಿಕೆ ಸಿಗುತ್ತಿದ್ದಂತೆ ಮೊದಲ ಆದ್ಯತೆಯಾಗಿ ಕರೊನಾ ವಾರಿಯರ್ಸ್ಗೇ ಅದನ್ನು ನೀಡಲಾಗುವುದು. ಬಳಿಕ ಆದ್ಯತೆಯ ಮೇರೆಗೆ ಇತರರಿಗೆ ನೀಡಲಾಗುವುದು ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಸಚಿವರೂ ಆಗಿರುವ ಡಾ.ಕೆ. ಸುಧಾಕರ್ ಹೇಳಿದ್ದಾರೆ.
ಕೋವಿಡ್-19 ಲಸಿಕೆಯನ್ನು ಪರಿಚಯಿಸಲು ಭಾರತ ಸರ್ಕಾರ ಮುಂದಾಗಿದ್ದು, ಆ ನಿಟ್ಟಿನಲ್ಲಿ ಪೂರ್ವಸಿದ್ಧತೆಗಳನ್ನು ಹಮ್ಮಿಕೊಳ್ಳಲಾಗಿದೆ. ಲಸಿಕೆಯ ವಿವರ ಹಾಗೂ ಕೋವಿಡ್-19 ಲಸಿಕೆ ಪರಿಚಯದ ದಿನಾಂಕವನ್ನು ಕೇಂದ್ರ ಸರ್ಕಾರವೇ ತಿಳಿಸಲಿದೆ. ಆದರೆ ಆರಂಭಿಕ ಹಂತದಲ್ಲಿ ಲಸಿಕೆಯ ಮೊದಲ ಫಲಾನುಭವಿಗಳಾಗಿ ಸರ್ಕಾರಿ ಹಾಗೂ ಖಾಸಗಿ ಆರೋಗ್ಯ ಕೇಂದ್ರಗಳ ಕಾರ್ಯಕರ್ತರಿರುತ್ತಾರೆ. ನಂತರ ಆದ್ಯತೆ ಮೇರೆಗೆ ಇತರರನ್ನು ಪರಿಗಣಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ನೀಡಿದ ಮಾರ್ಗಸೂಚಿ ಹಾಗೂ ಕಾರ್ಯತಂತ್ರಗಳ ಪ್ರಕಾರ ಆರೋಗ್ಯ ಕಾರ್ಯಕರ್ತರ ಸಿದ್ಧತೆ, ಚಟುವಟಿಕೆಗಳು ಹಾಗೂ ದತ್ತಾಂಶ ಸಂಗ್ರಹಣೆಯನ್ನು ರಾಜ್ಯದಲ್ಲಿ ಈಗಾಗಲೇ ಪ್ರಾರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.