ಮತ್ತೆ ನಷ್ಟದ ಭೀತಿ; ಉದ್ಯಮಕ್ಕೆ ಪೂರಕ ವಾತಾವರಣ ಸೃಷ್ಟಿಯಾಗಲಿ

Editorial
Published on

ಕರೊನಾ ಎರಡನೇ ಅಲೆಯ ಆರ್ಭಟ ಜೋರಾಗಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಮರಣಪ್ರಮಾಣವೂ ಏರಿಕೆ ಆಗುತ್ತಿದೆ. ಪರಿಸ್ಥಿತಿ ತುಂಬ ಕಠಿಣವಾಗಿದ್ದು, ಇದನ್ನು ಸೂಕ್ಷ್ಮವಾಗಿ ನಿಭಾಯಿಸಬೇಕಿದೆ. ಜನರ ಪ್ರಾಣವೂ ಉಳಿಯಬೇಕು, ಜನಜೀವನವೂ ನಡೆಯಬೇಕು. ಈ ಎರಡರ ಸಮತೋಲನ ಸುಲಭವೇನಲ್ಲ. ಕಳೆದ ವರ್ಷ ವಿಧಿಸಲಾಗಿದ್ದ ಲಾಕ್​ಡೌನ್ ಭಾರಿ ನಷ್ಟ ಉಂಟು ಮಾಡಿದ್ದರಿಂದ, ಮತ್ತೆ ಲಾಕ್​ಡೌನ್ ಬೇಡ, ಸುರಕ್ಷಾ ಕ್ರಮಗಳನ್ನೇ ಇನ್ನಷ್ಟು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂಬ ಆಗ್ರಹ ಬಲಗೊಳ್ಳುತ್ತಿದೆ. ಒಂದೊಮ್ಮೆ, ಲಾಕ್​ಡೌನ್ ವಿಧಿಸಿದರೆ ಅದರಿಂದ ಆಗುವ ನಷ್ಟವನ್ನು ಸಹಿಸಿಕೊಳ್ಳುವ ಶಕ್ತಿ ಯಾವುದೇ ಸರ್ಕಾರಗಳಿಗೂ ಇಲ್ಲ. ಈಗಾಗಲೇ ಹಲವು ಯೋಜನೆಗಳ ಹಣ ಕರೊನಾ ನಿರ್ವಹಣೆಗಾಗಿ ಬಳಸಲಾಗುತ್ತಿದ್ದು, ಆರ್ಥಿಕ ಸಂಪನ್ಮೂಲ ಹೊಂದಿಸುವುದು ತ್ರಾಸದಾಯಕವಾಗಿ ಪರಿಣಮಿಸಿದೆ.

ಕರೊನಾ ತೀವ್ರತೆ ಹೆಚ್ಚುತ್ತಿದ್ದಂತೆ ಕೈಗಾರಿಕಾ ವಲಯ ಮತ್ತೆ ಇಕ್ಕಟ್ಟಿಗೆ ಸಿಲುಕಿದೆ. 2020ರ ಸೆಪ್ಟೆಂಬರ್-ಅಕ್ಟೋಬರ್ ನಂತರ ಒಂದಿಷ್ಟು ಚೇತರಿಸಿಕೊಂಡಿದ್ದ ಕೈಗಾರಿಕೆಗಳು ಉತ್ಪಾದನೆಯನ್ನು ಕ್ರಮೇಣವಾಗಿ ಹೆಚ್ಚಿಸಿದ್ದವು. ಆದರೆ, ಮಹಾರಾಷ್ಟ್ರ ಮತ್ತು ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಸೋಂಕು ಪ್ರಕರಣಗಳು ಗಣನೀಯವಾಗಿ ಹೆಚ್ಚಿರುವ ಪರಿಣಾಮ ಕಚ್ಚಾವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯ ಕಂಡುಬಂದಿದೆ. ಮುಂಬೈನ ಕಚ್ಚಾ ವಸ್ತುಗಳನ್ನೇ ಹೆಚ್ಚು ನಂಬಿಕೊಂಡಿರುವ ಕರ್ನಾಟಕ, ತಮಿಳುನಾಡು ಸೇರಿ ಅನೇಕ ಕೈಗಾರಿಕಾ ರಾಜ್ಯಗಳಿಗೆ ಸಂಕಷ್ಟ ಎದುರಾಗಿದೆ. ಇದರ ಪರಿಣಾಮ ರಾಜ್ಯದ ಕೈಗಾರಿಕಾ ಕ್ಷೇತ್ರ ಸ್ಥಗಿತಗೊಂಡು ಸಾವಿರಾರು ಕೋಟಿ ರೂಪಾಯಿ ಆದಾಯ ನಷ್ಟವಾಗುವ ಆತಂಕ ಕಾಡಲಾರಂಭಿಸಿದೆ. ಉದ್ಯಮಗಳು ಸರಿಯಾಗಿ ಕಾರ್ಯನಿರ್ವಹಣೆ ಮಾಡಬೇಕೆಂದರೆ ಕಚ್ಚಾವಸ್ತುಗಳ ಲಭ್ಯತೆ ಅತ್ಯಗತ್ಯ. ಅದರ ಪೂರೈಕೆಯಲ್ಲೇ ತೊಂದರೆಯಾದರೆ, ಕೈಗಾರಿಕಾ ಚಟುವಟಿಕೆಗಳಿಗೂ ಗ್ರಹಣ.

ನಮ್ಮಲ್ಲಿ ಕೃಷಿ ಕ್ಷೇತ್ರದ ನಂತರ ಅತಿ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುತ್ತಿರುವುದು ಕೈಗಾರಿಕೆಗಳೇ. ಹೀಗಾಗಿ ಈ ರಂಗಕ್ಕೆ ಹೊಡೆತ ಬಿದ್ದರೆ ಆರ್ಥಿಕತೆಗೆ ಪೆಟ್ಟು ಬೀಳುವ ಜತೆಗೆ ಉದ್ಯೋಗಸೃಷ್ಟಿ ಮೇಲೂ ವ್ಯತಿರಿಕ್ತ ಪರಿಣಾಮ. ಉದ್ಯಮ ವಲಯ ಯಾವೆಲ್ಲ ಸಮಸ್ಯೆಗಳನ್ನು ಅನುಭವಿಸುತ್ತದೆ ಎಂಬುದಕ್ಕೆ ಲಾಕ್​ಡೌನ್ ಮತ್ತು ಅದರ ನಂತರದ ಸ್ಥಿತಿಗಳು ಸಾಕ್ಷಿಯಾಗಿವೆ. ಆ ಅನುಭವಗಳಿಂದ ಪಾಠ ಕಲಿಯುವ ಇಚ್ಛಾಶಕ್ತಿಯನ್ನು ಸರ್ಕಾರ ಪ್ರದರ್ಶಿಸಬೇಕಿದೆ. ಬಂಡವಾಳ ಹೂಡಿಕೆಯಲ್ಲಿ ನಿರುತ್ಸಾಹದ ವಾತಾವರಣ ಇರುವಾಗ, ಇರುವ ಕೈಗಾರಿಕೆಗಳನ್ನೂ ಉಳಿಸಿಕೊಳ್ಳದಿದ್ದರೆ ಸಮಸ್ಯೆ ಖಂಡಿತ. ಈ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ. ಮುಖ್ಯವಾಗಿ, ಉದ್ಯಮಸ್ನೇಹಿ ವಾತಾವರಣವನ್ನು ಕಾಯ್ದುಕೊಳ್ಳಬೇಕು. ಕೈಗಾರಿಕೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಆದ್ಯತೆ ಮೇಲೆ ಬಗೆಹರಿಸಬೇಕು. ಮಂಜೂರಾತಿಯೋ ಅಥವಾ ತಾಂತ್ರಿಕ ಕಾರಣಕ್ಕಾಗಿಯೋ ಮೇಲಿಂದ ಮೇಲೆ ಸರ್ಕಾರಿ ಕಚೇರಿಗಳಿಗೆ ಅಲೆಯುವಂತೆ ಮಾಡಬಾರದು. ಕಚ್ಚಾವಸ್ತುಗಳ ಲಭ್ಯತೆಯನ್ನು ಖಾತ್ರಿ ಪಡಿಸಬೇಕು. ಆರ್​ಬಿಐ ಒಂದೆಡೆ ಆರ್ಥಿಕ ಚೇತರಿಕೆಗಾಗಿ ಹರಸಾಹಸ ಪಡುತ್ತಿದೆ. ಮತ್ತೊಂದೆಡೆ ಬ್ಯಾಂಕುಗಳು ಉದ್ಯಮಗಳಿಗೆ ಸಾಲ ನೀಡಲು ಹಿಂದೇಟು ಹಾಕುತ್ತಿವೆ. ಈಗಿನ ಪರಿಸ್ಥಿತಿ, ಸನ್ನಿವೇಶಕ್ಕೆ ತಕ್ಕಂತೆ ಸೂಕ್ತ ನಿರ್ಣಯಗಳನ್ನು ತಳೆಯಬೇಕು. ಈ ನಿಟ್ಟಿನಲ್ಲಿ ಬ್ಯಾಂಕುಗಳು, ಸರ್ಕಾರ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net