ಪ್ರವಾಹ ಬಾಧಿತ ಪ್ರದೇಶದ ಸಾಕ್ಷಾತ್ ಸಮೀಕ್ಷೆ :ವಿಜಯೇಂದ್ರ | Loss review

bjp mla b.y.vijayendra
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ
Published on

ಬೆಂಗಳೂರು: ಎರಡು ದಿನಗಳ ಕಾಲ ಪಕ್ಷದ ರಾಜ್ಯ ನಾಯಕರು ಎಲ್ಲ ಕಾರ್ಯಕ್ರಮಗಳನ್ನು ರದ್ದುಪಡಿಸಿ ಅತಿವೃಷ್ಟಿ ಹಾಗೂ ಪ್ರವಾಹಬಾಧಿತ ಜಿಲ್ಲೆಗಳಿಗೆ ಸೋಮವಾರ ಮತ್ತು ಮಂಗಳವಾರ ಭೇಟಿ ನೀಡಿ, ವಸ್ತುಸ್ಥಿತಿ ಸಾಕ್ಷಾತ್ ಸಮೀಕ್ಷೆ ನಡೆಸಲಿದ್ದಾರೆ ಎಂದು‌ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಪಕ್ಷದ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠ ಹಾಗೂ ಜಗನ್ನಾಥ ಬಳಗ ಜಂಟಿಯಾಗಿ ತೆಲುಗು ವಿಜ್ಞಾನ ಸಮಿತಿಯ ಶ್ರೀಕೃಷ್ಣದೇವರಾಯ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ 'ಮಾಸದ ಮಾಧುರ್ಯ ನೂರರ ಸಂಭ್ರಮ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಾನು, ಛಲವಾದಿ ನಾರಾಯಣಸ್ವಾಮಿ, ಗೋವಿಂದ ಕಾರಜೋಳ ಮತ್ತಿತರರನ್ನು ಒಳಗೊಂಡ ತಂಡವು ವಿಜಯಪುರ, ಕಲಬುರಗಿ, ಯಾದಗಿರಿ ಜಿಲ್ಲೆಗಳಿಗೆ ಸೋಮವಾರ ಭೇಟಿ ನೀಡಲಿದೆ. ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದ ತಂಡ ಬೆಳಗಾವಿ, ಬಾಗಲಕೋಟೆ ಹಾಗೂ ರಾಯಚೂರು ಜಿಲ್ಲೆಗಳಿಗೆ ಸೋಮವಾರ ಅಥವಾ ಮಂಗಳವಾರ ಭೇಟಿ ನೀಡಲಿದೆ ಎಂದು ತಿಳಿಸಿದರು.

ಮಳೆ, ಪ್ರವಾಹದಿಂದ ಹಾನಿಗೀಡಾದ ಬೆಳೆಗಳು, ಮನೆಗಳನ್ನು ವೀಕ್ಷಿಸಿ ಸಂತ್ರಸ್ತರು ಹಾಗೂ ಗ್ರಾಮಸ್ಥರ ಅಹವಾಲು ಆಲಿಸುತ್ತೇವೆ. ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಪಡೆದು, ತುರ್ತು ಕ್ರಮಕ್ಕೆ ಒತ್ತಾಯಿಸಲಿದ್ದೇವೆ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.

ಸಹಿಸದ ದೇಶಗಳು

ಭಾರತ ಅಭಿವೃದ್ಧಿಯತ್ತ ದಾಪುಗಾಲು, ಆರ್ಥಿಕವಾಗಿ ಬಲಿಷ್ಠವಾಗುತ್ತಿರುವುದು ಹಲವು ದೇಶಗಳಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಹೆಚ್ಚಿನ ಸುಂಕ ವಿಧಿಸಿದ ಸವಾಲು ಎದುರಿಸಲು ಪ್ರಧಾನಿ ನರೇಂದ್ರ ಮೋದಿಯವರು ದಿಟ್ಟ ನಿರ್ಧಾರ ಕೈಗೊಂಡು, ಸ್ವದೇಶಿ ವಸ್ತುಗಳನ್ನು ಖರೀದಿಸುವ ಮೂಲಕ ಸ್ವಾವಲಂಬಿ ಹಾಗೂ 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ ಆಗಬೇಕೆಂಬ ಸಂಕಲ್ಪ ಮಾಡಿದ್ದು, ದೇಶದ ಜನರು ಕೈ ಜೋಡಿಸುವ ಅಗತ್ಯವಿದೆ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.

ಮೋದಿಯವರ ಪ್ರತಿಯೊಂದು ಮಾತು, ಚಿಂತನೆಗಳು ದೇಶದ ಜನರಲ್ಲಿ ಸಕಾರಾತ್ಮಕ ಯೋಚನೆ ಬಿತ್ತುವುದಾಗಿದೆ. ಸ್ವತಃ ಪ್ರಧಾನ ಸೇವಕ ಎಂದು ಹೇಳಿಕೊಳ್ಳುವ ಮೂಲಕ ಸೇವಾ ಮನೋಭಾವಕ್ಕೆ ಒತ್ತಾಸೆ ನೀಡಿದ್ದಾರೆ. ಮನ್ ಕಿ ಬಾತ್ ನಲ್ಲೂ ದೇಶದ ಸಾಧಕರು, ಸಕಾರಾತ್ಮಕ ಚಿಂತನೆಗಳನ್ನು ನಿರಂತರವಾಗಿ ಹಂಚಿಕೊಳ್ಳುತ್ತಾ ಬಂದಿದ್ದಾರೆ ಎಂದರು.

ಪ್ರಧಾನಿಯವರ ಕರೆಗೆ ಸ್ಪಂದಿಸಿ, ಅ.2ರಂದು ಗಾಂಧಿ ಜಯಂತಿಯಂದು ಹೆಚ್ಚೆಚ್ಚು ಖಾದಿ ವಸ್ತುಗಳು, ಉತ್ಪನ್ನಗಳನ್ನು ಖರೀದಿಸಬೇಕು. ಆತ್ಮನಿರ್ಭರ್ ಭಾರತದ ಸಂಕಲ್ಪದೆಡೆ ಹೆಜ್ಜೆಯಿಡಬೇಕು ಎಂದು ಕೋರಿದರು.

ರಾಜಕೀಯ ಜಂಜಡ, ದೈನಂದಿನ ಬದುಕಿನ ಮಧ್ಯೆ ಮನೋಲ್ಲಾಸ ಹೆಚ್ಚಿಸಿಕೊಳ್ಳಲು, ಹುಮ್ಮಸ್ಸು ಹೆಚ್ಚಿಸಿಕೊಂಡು ಮತ್ತಷ್ಟು ಶ್ರದ್ಧೆಯಿಂದ ಕೆಲಸ ಮಾಡುವುದಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವಾಗುತ್ತವೆ ಎಂದ ಬಿ.ವೈ.ವಿಜಯೇಂದ್ರ, ಮಾಸದ ಮಾಧುರ್ಯ ಕಾರ್ಯಕ್ರಮ ಹಾಗೂ ಸಂಘಟಕರ ಪರಿಶ್ರಮವನ್ನು ಶ್ಲಾಘಿಸಿದರು.

ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಪಕ್ಷ ಮುಖ್ಯ ಸಚೇತಕ ಎನ್.ರವಿಕುಮಾರ್, ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ನಟಿಯರಾದ ಶ್ರುತಿ, ತಾರಾ ಅನೂರಾಧ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net