

ಶಿವಮೊಗ್ಗ: ಶ್ರೀ ಶಂಕರನಾರಾಯಣ ಕಾಶಿ ಟ್ರಸ್ಟ್‌ನಿಂದ ಜಿಲ್ಲಾಮಟ್ಟದ ಸವಾಲಾತ್ಮಕ ಸುಗಮ ಸಂಗೀತ (ಭಾವಗೀತೆ) ಗಾಯನ ಸ್ಪರ್ಧೆಯನ್ನು ನ.18ರಂದು ಮಥುರಾ ಪ್ಯಾರಡೈಸ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಗುರುಗುಹ ಸಂಗೀತ ವಿದ್ಯಾಲಯದ ಪ್ರಾಚಾರ್ಯ ಎಚ್.ಎಸ್.ನಾಗರಾಜ್ ಹೇಳಿದರು.
ಸುಗಮ ಸಂಗೀತ ಕ್ಷೇತ್ರದಲ್ಲಿ ಪ್ರತಿಭಾವಂತ ಯುವ ಕಲಾವಿದರಿದ್ದರೂ ಅವರಲ್ಲಿ ಬಹುಪಾಲು ಯುವಕರಿಗೆ ತಾವು ಹಾಡಲಿರುವ ಕವನ ಮತ್ತು ಅದರ ಕವಿಯ ಕುರಿತು ಅರಿವಿಲ್ಲ. ಅದಕ್ಕಾಗಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಶಂಕರನಾರಾಯಣ ಕಾಶಿ ಹೆಸರಿನಲ್ಲಿ ಹಾಗೂ ಪ್ರಸ್ತುತ ಮಥುರಾ ಪ್ಯಾರಡೈಸ್‌ನ 25ನೇ ವರ್ಷದ ಸಂಭ್ರಮಾಚರಣೆಯ ಧ್ಯೋತಕವಾಗಿ ಸ್ಪರ್ಧೆ ನಡೆಸಲು ಸಂಸ್ಥೆ ನಿಶ್ಚಯಿಸಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕುವೆಂಪು, ದ.ರಾ.ಬೇಂದ್ರೆ, ಜಿ.ಎಸ್.ಶಿವರುದ್ರಪ್ಪ, ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ, ಕೆ.ಎಸ್.ನಿಸಾರ್ ಅಹಮ್ಮದ್, ಬಿ.ಆರ್.ಲಕ್ಷ್ಮಣ್‌ರಾವ್, ಈ ಕವಿಗಳಲ್ಲಿ ಮೂವರು ಕವಿಗಳ ಒಂದೊಂದು ಕವನ ಆಯ್ದು ಅದರಲ್ಲಿ ತೀರ್ಪುಗಾರರು ತಿಳಿಸಿದ ಒಂದನ್ನು ಹಾಡಬೇಕು. ಪ್ರತಿ ಸ್ಪರ್ಧಿಗೂ 12 ನಿಮಿಷದ ಸಮಯಾವಕಾಶದಲ್ಲಿ ಕವನ ಕುರಿತು ಕವಿಹೃದಯ, ಕವನ ಅಂತರಾಳ ಭಾಗದಲ್ಲಿ ಮಾತನಾಡಿ, ನಂತರ ಕವನ ಹಾಡಬೇಕು ಎಂದರು.
ಸ್ಪರ್ಧೆಗೆ ಯಾವುದೇ ಶುಲ್ಕವಿಲ್ಲ. ವಾಟ್ಸಾಪ್ ಮೂಲಕವು ದೊರೆತ ಅರ್ಜಿಯನ್ನು ಭರ್ತಿ ಮಾಡಿ ಸ್ಪರ್ಧಿಗಳು ನ.14ರೊಳಗೆ ಮಥುರಾ ಪ್ಯಾರಡೈಸ್‌ನಲ್ಲಿ ನೀಡಿ ಸ್ವೀಕೃತಿ ಪಡೆಯಬಹುದು. ಸ್ಪರ್ಧೆಗೆ ಯಾವುದೇ ವಾದ್ಯ ಸಹಕಾರವಿಲ್ಲ, ಶೃತಿ ವಾದ್ಯ ಬಳಸಬಹುದು. ಶಿವಮೊಗ್ಗಕ್ಕೆ ಹೊರಗಿನಿಂದ ಬಂದ ಬಹುಮಾನಿತರಿಗೆ ಪ್ರಯಾಣ ಭತ್ಯೆ ನೀಡಲಾಗುತ್ತದೆ. ಮಾಹಿತಿಗೆ ಮೊ: 9448241149, 9480915777ಗೆ ಸಂಪರ್ಕಿಸಬಹುದು ಎಂದರು. ಪ್ರಮುಖರಾದ ನಿರ್ಮಲಾ ಕಾಶಿ, ಎನ್.ಗೋಪಿನಾಥ್, ರವಿಕುಮಾರ್, ಸಂಯುಕ್ತ ಸುದ್ದಿಗೋಷ್ಠಿಯಲ್ಲಿದ್ದರು.