

ಬೆಂಗಳೂರು ಇಂಜಿನಿಯರಿಂಗ್ ಸೇರಿ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ವೇಳೆ ಆಗುವ ತಪ್ಪುಗಳಿಗೆ ಕಡಿವಾಣ ಹಾಕುವುದಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಡಿ.28ರಂದು ಸಿಇಟಿ ವಿದ್ಯಾರ್ಥಿಮಿತ್ರ ಎಂಬ ಮಾಸ್ಟರ್ ಟ್ರೈನರ್ ತರಬೇತಿ ಕಾರ್ಯಕ್ರಮ ಆಯೋಜಿಸಿದೆ.
ಅಂದು ಕೆಇಎ ಕಚೇರಿಯಲ್ಲಿ ನಡೆಯುವ ತರಬೇತಿಗೆ ಪ್ರತಿ ಜಿಲ್ಲೆಯಿಂದ ಆಯ್ದ 8 ಪದವಿಪೂರ್ವ ವಿಜ್ಞಾನ ಕಾಲೇಜಿನ ಉಪನ್ಯಾಸಕರಿಗೆ ಮಾಸ್ಟರ್ ತರಬೇತಿ ನೀಡಲಾಗುತ್ತಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ತಿಳಿಸಿದ್ದಾರೆ.
ಸಿಇಟಿ ಅರ್ಜಿ ತುಂಬುವಾಗ ಹೆಸರಿನಲ್ಲಿ ವ್ಯತ್ಯಾಸ, ತಪ್ಪು ಆರ್.ಡಿ. ಸಂಖ್ಯೆ ನಮೂದಿಸುವುದು, ಪ್ರವರ್ಗ/ಜಾತಿ ಬರೆಯುವುದು ಸೇರಿ ಹಲವಾರು ತಪ್ಪುಗಳು ಅಭ್ಯರ್ಥಿಗಳಿಂದ ಆಗುತ್ತಿವೆ. ಹೀಗೆ ಪದೇ ಪದೇ ಆಗುವ ತಪ್ಪುಗಳನ್ನು ಗಮನಿಸಿ ಪರಿಣಾಮಕಾರಿ ಪರಿಹಾರ ನೀಡುವ ಸಲುವಾಗಿ ಮಾಸ್ಟರ್ ಟ್ರೈನರ್ ತರಬೇತಿ ನೀಡಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.
ಅರ್ಜಿ ಸಲ್ಲಿಸುವಾಗ ಮಾಡುವ ತಪ್ಪುಗಳಿಂದ ಸಿಇಟಿ ಪ್ರಕ್ರಿಯೆ ವಿಳಂಬವಾಗುವ ಜೊತೆಗೆ ಸಾಕಷ್ಟು ಬಾರಿ ಅಭ್ಯರ್ಥಿಗಳಿಗೆ ಇಷ್ಟಪಟ್ಟ ಕೋರ್ಸು ಗಳಿಗೆ ಸೀಟು ಕೈತಪ್ಪುವ ಸಾಧ್ಯತೆಯೂ ಇರುತ್ತದೆ. ಕೆಲವೊಮ್ಮೆ ಇಡೀ ಪ್ರಕ್ರಿಯೆಯಿಂದ ಹೊರಬೀಳುವ ಸಾಧ್ಯತೆ ಇರುತ್ತದೆ. ಇಂತಹ ಸಮಸ್ಯೆಗಳನ್ನು ನಿವಾರಿಸುವ ಉದ್ದೇಶದಿಂದ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ತರಬೇತಿ ಪಡೆದವರು ನಂತರ ತಮ್ಮ ಜಿಲ್ಲೆಯಲ್ಲಿನ ಪ್ರತಿ ವಿಜ್ಞಾನ ಕಾಲೇಜಿನ ಇಬ್ಬರು ಅಧ್ಯಾಪಕರಿಗೆ ತರಬೇತಿ ನೀಡಲಿದ್ದಾರೆ. ಜ.10ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಅಷ್ಟರೊಳಗೆ ಎಲ್ಲ ಕಾಲೇಜುಗಳಿಗೂ ತರಬೇತಿ ಪೂರ್ಣಗೊಳಿಸಲಾಗುತ್ತದೆ ಎಂದು ಹೇಳಿದ್ದಾರೆ.