

ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ ವರುಣನ ಆರ್ಭಟದಿಂದ ಅವಾಂತರ ಸೃಷ್ಟಿಯಾಗಿದ್ದು, ನಿಮಿಷಗಳ ಅಂತರದಲ್ಲಿ ಮಹಿಳೆಯರಿಬ್ಬರು ತೆರೆದ ಮ್ಯಾನ್ ಹೋಲ್ಗೆ ಬಿದ್ದಿರುವ ಘಟನೆ ಮುಂಬೈನ ಭಂಡೂಪ್ ಏರಿಯಾದಲ್ಲಿ ನಡೆದಿದ್ದು, ಅದೃಷ್ಟವಶಾತ್ ಇಬ್ಬರು ಸಹ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿರುವಂತೆ ಭಾರಿ ಮಳೆಯಿಂದ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು, ಪುಟ್ಪಾತ್ ಮೇಲೆ ನಡೆದು ಹೋಗುತ್ತಿದ್ದ ಮಹಿಳೆಯರು ಒಬ್ಬರ ಹಿಂದಂತೆ ಒಬ್ಬರು ನಿಮಿಷಗಳ ಅಂತರದಲ್ಲಿ ಮ್ಯಾನ್ ಹೋಲ್ಗೆ ಒಳಗೆ ಬೀಳುತ್ತಾರೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮುಂಬೈ ನಾಗರಿಕ ಮಂಡಳಿ ಬಿಎಂಸಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ತೆರೆದಿರುವ ಮ್ಯಾನ್ ಹೋಲ್ಗಳನ್ನು ಮುಚ್ಚುವಂತೆ ಆಗ್ರಹಿಸಿದ್ದಾರೆ.
ಮುಂಗಾರು ಪೂರ್ವ ಮಳೆಗೂ ಮುನ್ನ ಮ್ಯಾನ್ ಹೋಲ್ಗಳ ದುರಸ್ಥಿ ಕಾರ್ಯ ನಗರದಲ್ಲಿ ನಡೆಯುತ್ತಿತ್ತು. ಆದರೆ, ನಿನ್ನೆ ಸುರಿದ ಮಳೆಯಿಂದಾಗಿ ನಗರದಲ್ಲಿ ಈ ಅವಾಂತರ ಸೃಷ್ಟಿಯಾಗಿದೆ. ಘಟನೆ ಬೆನ್ನಲ್ಲೇ ಎಚ್ಚೆತ್ತಿರುವ ಬಿಎಂಸಿ, ಮ್ಯಾನ್ ಹೋಲ್ಗಳನ್ನು ಮುಚ್ಚಲು ಸೂಚನೆ ನೀಡಿದೆ. (ಏಜೆನ್ಸೀಸ್)