

ಪಟ್ಬಾ: ಹಾಡಹಗಲೇ 16 ವರ್ಷದ ಬಾಲಕಿಯನ್ನು ದುಷ್ಕರ್ಮಿಗಳಿಬ್ಬರು ಬೈಕಿನಲ್ಲಿ ಅಪಹರಿಸಿರುವ (Kidnap) ಘಟನೆ ಬಿಹಾರದ ಪುರ್ನಿಯಾ ಜಿಲ್ಲೆಯಲ್ಲಿ ನಡೆದಿದೆ. ಬಾ;ಲಕಿ ಮಾರುಕಟ್ಟೆಯಿಂದ ಮನೆಗೆ ವಾಪಸ್ ಆಗುತ್ತಿದ್ದಾಗ ಈ ಘಟನೆ ನಡೆದಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುರಿತಾದ ಪ್ರಶ್ನೆಗಳು ಉದ್ಭವಿಸಲು ಶುರುವಾಗಿದೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ಜನನಿಬಿಡ ಪ್ರದೇಶದಲ್ಲಿ ಆರೋಪಿಗಳಿಬ್ಬರು ಬೈಕಿನಲ್ಲಿ ಬಂದು ಬಾಲಕಿಯನ್ನು ಅಪಹರಣ (Kidnap) ಮಾಡುತ್ತಿರುವುದನ್ನು ನೋಡಬಹುದಾಗಿದೆ. ಜನರು ಘಟನೆಯನ್ನು ಸುಮ್ಮನೆ ನೋಡುತ್ತ ನಿಂತಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಘಟನೆ ಕುರಿತು ಮಾತನಾಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಬಾಲಕಿ ಸುಮಾರು ಹೊತ್ತಾದರು ಮಾರುಕಟ್ಟೆಯಿಂದ ಮನೆಗೆ ಬಾರದಿರುವುದನ್ನು ಗಮನಿಸಿ ಆಕೆಯ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ಧಾರೆ. ದೂರು ದಾಖಲಿಸಿಕೊಂಡು ಮಾರುಕಟ್ಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು ಪರಿಶೀಲಿಸಿದಾಗ ಆಕೆಯನ್ನು ಅಪಹರಿಸಿರುವ (Kidnap) ವಿಚಾರ ಬೆಳಕಿಗೆ ಬಂದಿದೆ.
ಆರೋಪಿಗಳಿಬ್ಬರನ್ನು ಸುಮಿತ್ ಕುಮಾರ್ ಹಾಗೂ ಸುಜಿತ್ ಕುಮಾರ್ ಎಂದು ಗುರುತಿಸಲಾಗಿದ್ದು, ಇಬ್ಬರ ಫೋಟೋಗಳನ್ನು ಬಿಡುಗಡೆ ಮಾಡಲಾಗಿದೆ. ತನಿಖೆ ನಡೆಯುತ್ತಿದ್ದು, ಶೀಘ್ರದಲ್ಲೇ ಬಾಲಕಿಯನ್ನು ಪತ್ತೆಹಚ್ಚಯುತ್ತೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.