

ನವದೆಹಲಿ: ಚೀನಾದ ಮಧ್ಯ ಹುಬೈ ಪ್ರಾಂತ್ಯದಲ್ಲಿ ಬುಧವಾರ ಒಂದೇ ದಿನ ಕನಿಷ್ಟ 254 ಮಂದಿ ಕೊರೊನಾ ವೈರಸ್ಗೆ ಬಲಿಯಾಗಿದ್ದಾರೆ.
ಮಧ್ಯ ಹುಬೈ ಪ್ರಾಂತ್ಯದಲ್ಲಿ ತುರ್ತುಪರಿಸ್ಥಿತಿ ಘೋಷಿಸಲಾಗಿದೆ. ಅಲ್ಲದೆ ವೈರಸ್ ಹರಡುವುದನ್ನು ನಿಯಂತ್ರಿಸಲು ವಿಫಲರಾದ ಹುಬೈ ಪ್ರಾಂತ್ಯದ ಉನ್ನತ ಅಧಿಕಾರಿಯನ್ನು ಸರ್ಕಾರ ವಜಾಗೊಳಿಸಿದೆ.
ಇದುವರೆಗೆ ಸಂಭವಿಸಿದ ಸಾವುಗಳಲ್ಲಿ ಬುಧವಾರ ಸಂಭವಿಸಿದ ಸಾವು ಅಧಿಕವಾಗಿದೆ. ಎಲ್ಲ ಕಟ್ಟಡಗಳನ್ನು ಮುಚ್ಚಲಾಗಿದೆ. ಜನರನ್ನು ಹೊರಗೆ ಬರದಂತೆ ತಡೆಯಲಾಗಿದೆ. ವೈರಸ್ ನಿಯಂತ್ರಣಕ್ಕಾಗಿ ನಿಯೋಜಿತರಾಗಿರುವವರನ್ನು ಮಾತ್ರ ಮನೆಯಿಂದ ಹೊರಗೆ ಬರುವಂತೆ ಸರ್ಕಾರ ಸೂಚಿಸಿದೆ.
ಹುಬೈ ಪ್ರಾಂತ್ಯ ಹಾಗೂ ರಾಜಧಾನಿ ವುಹಾನ್ನಲ್ಲಿ ಬುಧವಾರ ಅಂದಾಜು 15,152 ಹೊಸ ರೋಗಿಗಳು ಪತ್ತೆಯಾಗಿದ್ದಾರೆ. ಇವರಲ್ಲಿ 13,332 ಮಂದಿಯಲ್ಲಿ ವೈರಸ್ ಪತ್ತೆಯಾಗಿದೆ. ಮಾರಕ ವೈರಸ್ಗೆ ವಿಶ್ವಸಂಸ್ಥೆ Covid-19. ಎಂದು ನಾಮಕರಣ ಮಾಡಿದೆ.
ಇಡೀ ಚೀನಾದಲ್ಲಿ ಬುಧವಾರ ಅಂದಾಜು 60 ಸಾವಿರ ಮಂದಿ Covid-19. ಕ್ಕೆ ತುತ್ತಾಗಿದ್ದಾರೆ. ಅಲ್ಲದೆ ಪ್ರತಿದಿನ ವೈರಸ್ ತೀವ್ರವಾಗಿ ಹರಡುತ್ತಿದೆ.
ಬುಧವಾರ ಆಸ್ಪತ್ರೆಯಿಂದ ಅಂದಾಜು 3,441 ರೋಗಿಗಳನ್ನು ಬಿಡುಗಡೆ ಮಾಡಲಾಗಿದೆ. ಇವರಲ್ಲಿ ವೈರಸ್ ಪತ್ತೆಯಾಗಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆಯಾದರೂ ಇವರು ಆರೋಗ್ಯ ಕಾರ್ಯಕರ್ತರು ನಿಗಾ ವಹಿಸಲಿದ್ದಾರೆ. ಆಸ್ಪತ್ರೆಗೆ ದಾಖಲಾದ 33,693 ರೋಗಿಗಳಲ್ಲಿ, 5,647 ಮಂದಿ ರೋಗಿಗಳ ಸ್ಥಿತಿ ಗಂಭೀರವಾಗಿದೆ ಎಂದು ಸರ್ಕಾರ ತಿಳಿಸಿದೆ. (ಏಜೆನ್ಸೀಸ್)