

ಶಿವಮೊಗ್ಗ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆ, ರಾಷ್ಟ್ರೀಯ ಶಿಕ್ಷಣ ಸಮಿತಿ(ಎನ್‌ಇಎಸ್), ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯ ಸಹಯೋಗದೊಂದಿಗೆ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ಎರಡು ಚಿತ್ರಗಳ ಅವಲೋಕನ, ಸಂವಾದ, ಸನ್ಮಾನ ಹಾಗೂ ಬಿಂಬಬಿಂಬನ ಪುಸ್ತಕ ಬಿಡುಗಡೆ ಕಾರ್ಯಕ್ರಮ ಸೆ.13 ಮತ್ತು 14ರಂದು ಶಿವಮೊಗ್ಗದಲ್ಲಿ ನಡೆಯಲಿದೆ ಎಂದು ಸಿನಿಮೊಗೆ-ಶಿವಮೊಗ್ಗ ಚಿತ್ರ ಸಮಾಜದ ಸಂಚಾಲಕ ಎಚ್.ಯು.ವೈದ್ಯನಾಥ್ ಹೇಳಿದರು.
13ರಂದು ಬೆಳಗ್ಗೆ 10ಕ್ಕೆ ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದ ಎಸ್.ವಿ.ಕೃಷ್ಣಮೂರ್ತಿರಾವ್ ಸಭಾಂಗಣದಲ್ಲಿ 2024-25ನೇ ಸಾಂಸ್ಕೃತಿಕ ಕಾರ್ಯಕ್ರಮಗಳ ಅಡಿಯಲ್ಲಿ ಗಿರೀಶ್ ಕಾಸರವಳ್ಳಿ ಅವರ ಕೂರ್ಮಾವತಾರ, ಕನಸೆಂಬೋ ಕುದುರೆ ಏರಿ ಚಿತ್ರಗಳ ಪ್ರದರ್ಶನ ನಡೆಯಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಎನ್‌ಇಎಸ್ ಅಧ್ಯಕ್ಷ ಜಿ.ಎಸ್.ನಾರಾಯಣರಾವ್ ಮೊದಲ ದಿನದ ಕಾರ್ಯಕ್ರಮ ಉದ್ಘಾಟಿಸಲಿದ್ದು, ರಾಷ್ಟ್ರೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಸ್.ಕೆ.ಚಿದಾನಂದ ಅಧ್ಯಕ್ಷತೆ ವಹಿಸಿವರು. ಕೂರ್ವಾವತಾರ ಚಿತ್ರದ ಗಾಂಧಿ ಪಾತ್ರಧಾರಿ ಶಿಕಾರಿಪುರ ಕೃಷ್ಣಮೂರ್ತಿ, ಎನ್‌ಇಎಸ್ ಆಡಳಿತಾಧಿಕಾರಿ ಎ.ಎನ್.ರಾಮಚಂದ್ರ, ಮೈತ್ರಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಶಾಲಿನಿ, ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಜಿ.ಮಧು, ಅಲ್- ಮೊಹ್ಮದ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಸೋಮಶೇಖರ್, ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ. ಈ.ಲಾವಣ್ಯ, ವಿಶ್ರಾಂತ ಪ್ರಾಚಾರ್ಯ ಡಾ. ಎಚ್.ಎಸ್.ನಾಗಭೂಷಣ ಭಾಗವಹಿಸುವರು ಎಂದರು.
14ರಂದು ಸಂಜೆ 4ಕ್ಕೆ ಪತ್ರಿಕಾಭವನದಲ್ಲಿ ಗಿರೀಶ್ ಕಾಸರವಳ್ಳಿ ಅವರ ಎರಡೂ ಚಲನಚಿತ್ರಗಳ ಕುರಿತು ಸಂವಾದ ನಡೆಯಲಿದ್ದು, ಹಿರಿಯ ರಂಗಕರ್ಮಿ ಕೆ.ಜಿ.ಕೃಷ್ಣ ಮೂರ್ತಿ ಸಂವಾದಕ್ಕೆ ಚಾಲನೆ ನೀಡುವರು. ನಿವೃತ್ತ ಡಿಜಿಪಿ ಡಾ. ಡಿ.ವಿ.ಗುರುಪ್ರಸಾದ್, ಪತ್ರಕರ್ತ ಎನ್.ರವಿಕುಮಾರ್, ನಿರ್ದೇಶಕ ಗಿರೀಶ್ ಕಾಸರವಳ್ಳಿ, ಲೇಖಕ ಗೋಪಾಲಕೃಷ್ಣ ಪೈ ಪಾಲ್ಗೊಳ್ಳಲಿದ್ದು, ಸಂವಾದವನ್ನು ಪ್ರಾಚಾರ್ಯ ಡಾ.ಕೆ. ಚಿದಾನಂದ ನಡೆಸಿಕೊಡುವರು ಎಂದರು.
ಸಂವಾದದ ನಂತರ ಸಂಜೆ 6ಕ್ಕೆ ಗಿರೀಶ್ ಕಾಸರವಳ್ಳಿ-ಗೋಪಾಲಕೃಷ್ಣ ಪೈ ಅವರ ಬಿಂಬ ಬಿಂಬನ ಕೃತಿಯನ್ನು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಬಿಡುಗಡೆಗೊಳಿಸುವರು. ಪುಸ್ತಕ ಕುರಿತು ಡಾ. ರಾಜೇಂದ್ರ ಚೆನ್ನಿ ಮಾತನಾಡುವರು. ಎಂಎಲ್‌ಸಿ, ಸಿನಿಮೊಗೆ-ಶಿವಮೊಗ್ಗ ಚಿತ್ರ ಸಮಾಜದ ಅಧ್ಯಕ್ಷ ಡಿ.ಎಸ್.ಅರುಣ್ ಅಧ್ಯಕ್ಷತೆ ವಹಿಸುವರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಕೆ.ವಿ.ಶಿವಕುಮಾರ್ ಉಪಸ್ಥಿತರಿರುವರು ಎಂದರು. ಡಾ. ಎಚ್.ಎಸ್.ನಾಗಭೂಷಣ, ಜಿ.ವಿಜಯ್‌ಕುಮಾರ್, ಚೇತನ್‌ಕುಮಾರ್, ಸಹನಾ ಚೇತನ್, ಆನಂದ್ ಸುದ್ದಿಗೋಷ್ಠಿಯಲ್ಲಿದ್ದರು.