

ತೀರ್ಥಹಳ್ಳಿ: ಹಿಂದಿನ ಪುರಸಭೆಯ ಆಡಳಿತದಲ್ಲಿ ಅರ್ಹ ಲಾನುಭವಿಗಳಿಗೆ ನೀಡಲಾಗಿದ್ದ ನಿವೇಶನಗಳ ವಿತರಣೆಯಲ್ಲಿ ಭ್ರಷ್ಟಾಚಾರ ನಡೆದಿದೆ. ಇನ್ನುಳಿದ ನಿವೇಶನಗಳಿಗೆ ಸೇಲ್ ಸರ್ಟಿಫಿಕೇಟ್ ಮಾಡಿಕೊಡುವ ವಿಚಾರದಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಮುನ್ನ ವಿಶೇಷ ಸಭೆ ಕರೆದು ತೀರ್ಮಾನ ಕೈಗೊಳ್ಳುವುದು ಸೂಕ್ತ ಎಂದು ಶಾಸಕ ಆರಗ ಜ್ಞಾನೇಂದ್ರ ತಿಳಿಸಿದರು.
ಪಪಂ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಪಟ್ಟಣ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಹಿಂದಿನ ಪುರಸಭೆ ಆಡಳಿತದಲ್ಲಿ ನೀಡಲಾಗಿದ್ದ ನಿವೇಶನಗಳಿಗೆ ಸೇಲ್ ಸರ್ಟಿಫಿಕೇಟ್ ನೀಡುವ ಕುರಿತಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಕುರಿತು ಮಾತನಾಡಿ, ಅರ್ಹರಾದವರಿಗೆ ಮಾತ್ರ ಅಪ್‌ಸೆಟ್ ಬೆಲೆಯ ಈ ನಿವೇಶನಗಳು ಸಿಗುವಂತಾಗಬೇಕು. ಕೆಲವು ಶ್ರೀಮಂತರು ಕೂಡ ಈ ಪಟ್ಟಿಯಲ್ಲಿದ್ದು, ಅಂಥವರಿಗೆ ಯಾವ ಕಾರಣಕ್ಕೂ ನಿವೇಶನಗಳನ್ನು ಪಡೆಯಲು ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.
ವಿಷಯ ಪ್ರಸ್ತಾಪಿಸಿದ ಅಧ್ಯಕ್ಷರು, ಪಟ್ಟಣ ಪಂಚಾಯತಿ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ಷರತ್ತಿನಂತೆ ಬಹುತೇಕರು ನಿವೇಶನ ಮಂಜೂರು ಮಾಡಿಸಿಕೊಂಡಿದ್ದಾರೆ. ಅನಿವಾರ್ಯ ಕಾರಣಗಳಿಂದ ಸೇಲ್ ಸರ್ಟಿಫಿಕೇಟ್ ಮಾಡಿಸಿಕೊಳ್ಳದಿರುವವರಿಗೆ ಅನುಕೂಲವಾಗುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ವಿಚಾರದಲ್ಲಿ ಸದಸ್ಯರ ಅಭಿಪ್ರಾಯ ಕೇಳಿದರು. ಈ ವೇಳೆ ಪರ, ವಿರೋಧ ಚರ್ಚೆ ನಡೆಯಿತು.
ಬಿ.ಆರ್.ರಾಘವೇಂದ್ರ ಶೆಟ್ಟಿ ಮಾತನಾಡಿ, ಈ ಬಗ್ಗೆ ಪ್ರತ್ಯೇಕವಾಗಿ ಸಭೆ ಕರೆದು ತೀರ್ಮಾನ ಕೈಗೊಳ್ಳುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಮೇರೆಗೆ ಸಭೆಯಲ್ಲಿ ಒಮ್ಮತದ ತೀರ್ಮಾನ ವ್ಯಕ್ತವಾಯಿತು. ಹುಣಸವಳ್ಳಿ ಗ್ರಾಮದಲ್ಲಿರುವ ಘನತ್ಯಾಜ್ಯ ಘಟಕದಿಂದ ತೆಗೆದಿರಿಸಿದ್ದ ಸುಮಾರು 2 ಲಕ್ಷ ರೂ. ಮೌಲ್ಯದ ಕೌ ಕ್ಯಾಚರ್ ಅನ್ನು ಆಲಬಳ್ಳಿ ದೇವಸ್ಥಾನಕ್ಕೆ ನೀಡಿರುವ ಬಗ್ಗೆ ಪ್ರಶ್ನೋತ್ತರ ಅವಧಿಯಲ್ಲಿ ಸುಮಾರು 90 ನಿಮಿಷ ಕಾಂಗ್ರೆಸ್ ಬಿಜೆಪಿ-ಕಾಂಗ್ರೆಸ್ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಮೊದಲಿಗೆ ಬಿಜೆಪಿ ಸದಸ್ಯರಾದ ಸಂದೇಶ್ ಜವಳಿ ಹಾಗೂ ರವೀಶ್‌ಭಟ್ ಕೌನ್ಸಿಲ್ ಗಮನಕ್ಕೆ ತರದೆ ಕೌ ಕ್ಯಾಚರ್‌ನ್ನು ಆಲಬಳ್ಳಿ ದೇವಸ್ಥಾನಕ್ಕೆ ನೀಡಲಾಗಿದೆ. ಪಪಂಗೆ ಸೇರಿದ ವಸ್ತುಗಳನ್ನು ಕೌನ್ಸಿಲ್ ಅನುಮತಿ ಇಲ್ಲದೆ ಪರಭಾರೆ ಮಾಡೋದಕ್ಕೆ ಅವಕಾಶವಿಲ್ಲ ಎಂದು ತಿಳಿಸಿದರು.
ಈ ಬಗ್ಗೆ ಅಧ್ಯಕ್ಷರು ನೀಡಿದ ಸಮಜಾಯಿಷಿಗೂ ಬಿಜೆಪಿ ಸದಸ್ಯರಿಂದ ವಿರೋಧ ಬಂದ ವೇಳೆ ಕಾಂಗ್ರೆಸ್ ಸದಸ್ಯ ಬಿ.ಆರ್.ರಾಘವೇಂದ್ರ ಮುಖ್ಯ ರಸ್ತೆ ಅಗಲೀಕರಣದ ವೇಳೆ ನೀವು ಚಪ್ಪಡಿ ಕಲ್ಲುಗಳನ್ನು ಬಿಜೆಪಿ ಕಚೇರಿಗೆ ಸಾಗಿಸಿದ್ದೀರಿ ಎಂದು ಆರೋಪಿಸಿದರು. ಈ ಬಗ್ಗೆ ಇಬ್ಬರು ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಸದಸ್ಯ ರತ್ನಾಕರ ಶೆಟ್ಟಿ ಮಧ್ಯಪ್ರವೇಶಿಸಿ ಕೌ ಕ್ಯಾಚರ್‌ನ್ನು ದೇವಸ್ಥಾನದಿಂದ ವಾಪಸ್ ಪಡೆದು ಅದನ್ನು ಬಾಳೇಬೈಲು ನೀರಿನ ಘಟಕದ ಬಳಿ ಅಳವಡಿಸೋಣ ಎಂದಾಗ ಈ ವಿಚಾರದ ಚರ್ಚೆ ತಿಳಿಗೊಂಡಿತು.
ಸಂಸ್ಕೃತಿ ಮಂದಿರದ ಆವರಣದಲ್ಲಿ ಕುವೆಂಪು ಹೆಸರಿನಲ್ಲಿ ಬಯಲು ರಂಗಮಂದಿರ ನಿರ್ಮಾಣ ಮಾಡಲು ಸಭೆಯಲ್ಲಿ ಒಪ್ಪಿಗೆ ನೀಡಲಾಯ್ತು. ಶಾಂತವೇರಿ ಗೋಪಾಲಗೌಡ ರಂಗಮಂದಿರದ ನಿರ್ವಹಣೆ ಕೊರತೆಯಿಂದ ಶೌಚಾಲಯ ವ್ಯವಸ್ಥೆ ಸಂಪೂರ್ಣ ಹಾಳಾಗಿದ್ದು ಮಳೆಗಾಲದಲ್ಲಿ ಕೆಲವೆಡೆ ಸೋರುತ್ತಿದೆ. ಈ ಬಗ್ಗೆ ಕೂಡಲೇ ವ್ಯವಸ್ಥೆ ಮಾಡಬೇಕು ಎಂದು ಸಂದೇಶ ಜವಳಿ ಆಗ್ರಹಿಸಿದರು.
ಪಪಂ ಉಪಾಧ್ಯಕ್ಷೆ ಗೀತಾ ರಮೇಶ್, ಮುಖ್ಯಾಧಿಕಾರಿ ಡಿ. ನಾಗರಾಜ್ ವೇದಿಕೆಯಲ್ಲಿದ್ದರು.