

ಶಿವಮೊಗ್ಗ: ನಗರದಲ್ಲಿ ಹಿಂದು ಮಹಾಸಭಾ ಗಣೇಶ ಮೂರ್ತಿ ಶಾಂತಿಯುತವಾಗಿ ವಿಸರ್ಜನೆಗೊಂಡ ಬೆನ್ನಲ್ಲೆ ಅಶೋಕ ರಸ್ತೆಯ ಓಂ ಗಣಪತಿ ವಿಸರ್ಜನಾ ಮೆರವಣಿಗೆಗೆ ಶಿವಮೊಗ್ಗ ಸಜ್ಜಾಗಿದೆ. ಸೆ.11ರಂದು ಮಧ್ಯಾಹ್ನ ಓಂ ಗಣಪತಿಯ ರಾಜಬೀದಿ ಉತ್ಸವ ಆರಂಭಗೊಳ್ಳಲಿದ್ದು ಭಕ್ತರ ಜಯಘೋಷದ ನಡುವೆ ತಡರಾತ್ರಿ ತುಂಗೆಯ ಮಡಿಲು ಸೇರಲಿದೆ.
ಈಗಾಗಲೇ ಅಶೋಕ ರಸ್ತೆಯ ಯುವಕರ ಸೇವಾ ಸಂಘವು 11 ದಿನಗಳ ಪ್ರತಿಷ್ಠಾಪನೆ ವೇಳೆ ಸತ್ಯನಾರಾಯಣ ಪೂಜೆ, ಗಣಹೋಮ, ಸಾಮೂಹಿಕ ಅನ್ನಸಂತರ್ಪಣೆ ಹಾಗೂ ವಿಘ್ನೇಶ್ವರನಿಗೆ ಮಹಾಮಂಗಳಾರತಿ ಸೇರಿ ವಿವಿಧ ಪೂಜಾಕೈಂಕರ್ಯಗಳನ್ನು ನೆರವೇರಿಸಿದ್ದು ಅದ್ದೂರಿ ರಾಜಬೀದಿ ಉತ್ಸವಕ್ಕೆ ತಯಾರಿ ಮಾಡಿಕೊಂಡಿದೆ.
ಅಶೋಕ ರಸ್ತೆಯಿಂದ ಮಧ್ಯಾಹ್ನ 12ಕ್ಕೆ ಓಂ ಗಣಪತಿ ರಾಜಬೀದಿ ಉತ್ಸವ ಆರಂಭಗೊಳ್ಳಲಿದ್ದು, ಎಸ್‌ಪಿಎಂ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿಬಜಾರ್ ಮುಖ್ಯರಸ್ತೆ, ಶಿವಪ್ಪ ನಾಯಕ ವೃತ್ತ, ಬಿ.ಎಚ್.ರಸ್ತೆ, ಕರ್ನಾಟಕ ಸಂಘ, ಪೊಲೀಸ್ ಕಾರ್ನರ್ ಮುಖಾಂತರವಾಗಿ ಪುನಃ ಅಶೋಕ ರಸ್ತೆ ಸೇರಿಕೊಳ್ಳಲಿದೆ. ಕೋಟೆ ರಸ್ತೆಯ ಆಂಜನೇಯಸ್ವಾಮಿ ದೇವಸ್ಥಾನ ಮುಖಾಂತರ ತುಂಗಾ ನದಿಯ ಕೋರ್ಪಲಯ್ಯ ಮಂಟಪದ ಬಳಿ ವಿಸರ್ಜನೆಗೊಳ್ಳಲಿದೆ.
ಹಿಂದು ಮಹಾಸಭಾ ಗಣಪತಿಯನ್ನು ಅತ್ಯಂತ ಯಶಸ್ವಿಯಾಗಿ ವಿಸರ್ಜನೆ ಮಾಡಲಾಗಿದ್ದು, ಓಂ ಗಣಪತಿ ವಿಸರ್ಜನೆ ಸಂಬಂಧ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗುತ್ತಿದೆ. ಮೆರವಣಿಗೆ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ, ಡ್ರೋಣ್ ಕ್ಯಾಮೆರಾಗಳ ಕಣ್ಗಾವಲು ಇರಲಿದೆ. ಜಿಲ್ಲೆಯ ಹಾಲಿ 1,800 ಸಿಬ್ಬಂದಿ ಸೇರಿದಂತೆ ಎರಡೂ ಸಾವಿರಕ್ಕೂ ಅಧಿಕ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ.