ಅಪಘಾತದಲ್ಲಿ ಬಾಗಲಕೋಟೆ ವೃದ್ಧೆ ಸಾವು: ಪೊಲೀಸ್​ ತನಿಖೆಯಲ್ಲಿ ಮೊಮ್ಮಗನ ಕರಾಳ ಮುಖ ಬಯಲು

Car Accident
Published on

ಬಾಗಲಕೋಟೆ: ಬೈಕ್​ಗೆ ಕಾರು ಡಿಕ್ಕಿಯಾಗಿ ವೃದ್ಧೆಯೊಬ್ಬರು ಮೃತಪಟ್ಟ ಪ್ರಕರಣ ಇದೀಗ ಸ್ಫೋಟಕ ತಿರುವು ಪಡೆದುಕೊಂಡಿದೆ. ಇದು ಕೇವಲ ಅಪಘಾತವಲ್ಲ, ಉದ್ದೇಶಪೂರ್ವಕವಾಗಿಯೇ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿದೆ ಎಂಬುದು ಪೊಲೀಸ್​ ತನಿಖೆಯ ವೇಳೆ ಬಯಲಾಗಿದೆ.

ಚಿಕ್ಕೂರು ಕ್ರಾಸ್ ಬಳಿ ಆಗಸ್ಟ್​ 20ರ ರಾತ್ರಿ 8 ಗಂಟೆ ಸುಮಾರಿಗೆ ಅಪಘಾತ ನಡೆದಿತ್ತು. ಅಜ್ಜಿಯನ್ನು ಕೊಲೆ ಮಾಡಲೆಂದೇ ಮೊಮ್ಮಗ (ಮಗನ ಮಗ) ಕಾರಿನಿಂದ ಡಿಕ್ಕಿ ಹೊಡೆಸಿರುವುದು ಬೆಳಕಿಗೆ ಬಂದಿದೆ. ತಾಯವ್ವ ಅರಕೇರಿ (68) ಕೊಲೆಯಾದ ವೃದ್ದೆ. ಮೊಮ್ಮಗ ದುಂಡಪ್ಪ ಅರಕೇರಿ (25) ಕೊಲೆ ಆರೋಪಿ.

ವೃದ್ಧೆ ಹಾಗೂ ಮೊಮ್ಮಗ ಬಾಗಲಕೋಟೆ ತಾಲೂಕಿನ ಖಜ್ಜಿಡೋಣಿ ಗ್ರಾಮದವರು. ಜಮೀನು, ಬೋರ್​ವೆಲ್​ ಮೋಟಾರು ವಿವಾದ ಕೋರ್ಟಿನಲ್ಲಿತ್ತು. ವಿಚಾರಣೆ ನಡೆಸಿದ ಕೋರ್ಟ್​, ತಾಯವ್ವ ಪರ ತೀರ್ಪು ನೀಡಿತ್ತು. ಆದರೂ ದುಂಡಪ್ಪ ತನ್ನ ಅಜ್ಜಿಗೆ ಬೋರ್​ವೆಲ್​ ಮೋಟಾರು ವೈರ್ ಕೊಟ್ಟಿರಲಿಲ್ಲ. ಹೀಗಾಗಿ ಮೊಮ್ಮಗನ ವಿರುದ್ಧ ಮುಧೋಳ ಲೋಕಾಪುರ ಠಾಣೆಗೆ ತಾಯವ್ವ ದೂರು ನೀಡಿದ್ದರು.

ಬಳಿಕ ಪೊಲೀಸರು ಗುಂಡಪ್ಪನನ್ನು‌ ಕರೆದು ಅಜ್ಜಿಗೆ ಮೋಟಾರು ವೈರ್ ಕೊಡಲು ಹೇಳಿದ್ದರು. ಪೊಲೀಸರ ಎದುರು ಒಪ್ಪಿಕೊಂಡಿದ್ದ ದುಂಡಪ್ಪ, ತನ್ನ ಅಜ್ಜಿ ತಾಯವ್ವ ಹಾಗೂ ಆಕೆಯ ಮತ್ತೊಬ್ಬ ಮಗ ಬೈಕ್​ನಲ್ಲಿ ಊರಿಗೆ ಬರುವಾಗ ಕಾರಿನಲ್ಲಿ ಹಿಂಬಾಲಿಸಿ, ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ.

ಆಗಸ್ಟ್​ 20ರಂದು ಚಿಕ್ಕೂರು ಕ್ರಾಸ್ ಬಳಿ ಈ ಘಟನೆ ನಡೆದಿತ್ತು. ತಕ್ಷಣ ವೃದ್ಧೆ ತಾಯವ್ವಳನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗಸ್ಟ್​ 28ರಂದು ಚಿಕಿತ್ಸೆ ಫಲಿಸದೆ ತಾಯವ್ವ ಕೊನೆಯುಸಿರೆಳೆದರು. ಅಪಘಾತದಲ್ಲಿ‌ ಸಂಶಯ ವ್ಯಕ್ತಪಡಿಸಿ, ಸೆಪ್ಟೆಂಬರ್ 5 ರಂದು ತಾಯವ್ವನ ಸಂಬಂಧಿಕ ಮಂಜುನಾಥ ಉದಗಟ್ಟಿ ದೂರು ನೀಡಿದ್ದರು.

ಲೋಕಾಪುರ ಠಾಣೆಗೆ ದುಂಡಪ್ಪನ ವಿರುದ್ಧ ದೂರು ಸಲ್ಲಿಸಿದ್ದರು. ಬಳಿಕ ದುಂಡಪ್ಪನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸತ್ಯ ಬಾಯಿಬಿಟ್ಟಿದ್ದಾನೆ. ತಾನೇ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಸದ್ಯ ದುಂಡಪ್ಪನನ್ನು ಲೋಕಾಪುರ ಠಾಣಾ ಪೊಲೀಸರು ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net