

ಮುಂಬೈ: ಜನನಿಬಿಡ ರಸ್ತೆಯಲ್ಲಿ ಓಲಾ ಕ್ಯಾಬ್ ಚಾಲಕನೋರ್ವ (Ola Cab Driver) ಆಮ್ಲೆಟ್ (Omelette) ಮಾಡುತ್ತಿರುವ ವಿಡಿಯೋವನ್ನು ನೋಡಿಕೊಂಡು ವಾಹನ ಚಲಾಯಿಸಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚಾಲಕನ ನಡೆ ಪರ-ವಿರೋಧದ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ, ಡ್ರೈವಿಂಗ್ ಮಾಡುವಾದ ಓಲಾ ಚಾಲಕನೋರ್ವ ತನ್ನ ಮೊಬೈಲ್ನಲ್ಲಿ ಲೊಕೇಷನ್ನ ಬದಲಾಗಿ ಯೂಟ್ಯೂಬ್ನಲ್ಲಿ ಆಮ್ಲೆಟ್ ಮಾಡುತ್ತಿರುವ ವಿಡಿಯೋವನ್ನು ನೋಡಿಕೊಂಡು ಚಲಾಯಿಸುತ್ತಿರುವುದನ್ನು ನೋಡಬಹುದಾಗಿದೆ. ತನ್ನ ವಾಹನದಲ್ಲಿದ್ದ ಪ್ಯಾಸೆಂಜರ್ ಇದರ ವಿಡಿಯೋವನ್ನು ಮಾಡುತ್ತಿದ್ದಾರೆ ಎಂದು ಅರಿಯದ ಚಾಲಕ ತನ್ನ ಪಾಡಿಗೆ ತಾನು ವಿಡಿಯೋ ನೋಡಿಕೊಂಡು ಕಾರು ಚಲಾಯಿಸುತ್ತಿರುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.
ಇತ್ತ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ಪೊಲೀಸರು ಮಾಹಿತಿಯನ್ನು ಹಂಚಿಕೊಳ್ಳುವಂತೆ ಸವಾರನಿಗೆ ಸೂಚಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು ಚಾಲಕನ ಅಜಾಗರೂಕತೆಗೆ ಕಿಡಿಕಾರಿದ್ದಾರೆ. ಇದಲ್ಲದೆ ಓಲಾ ಸಂಸ್ಥೆಯ ಸ್ಕೂಟರ್ಗಳ ವಿರುದ್ಧವೂ ನೆಟ್ಟಿಗರು ವಾಗ್ದಾಳಿ ನಡೆಸಿದ್ದು, ಚಾಲಕನ ನಡೆಯನ್ನು ಖಂಡಿಸಿ ಸಂಸ್ಥೆಯ ವಿರುದ್ಧ ಹೌಹಾರಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಮುಂದಿನ ದಿನಗಳಲ್ಲಿ ಪೊಲೀಸರು ಯಾವ ಕ್ರಮ ಜರುಗಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.