

ಹುಣಸೂರು: ತಾಲೂಕಿನ ಬಿಳಿಕೆರೆ ಹೋಬಳಿ ಆಯರಹಳ್ಳಿ-ತೆಂಕಲಕೊಪ್ಪಲು ಗ್ರಾಮದ ಶ್ರೀ ಸಿದ್ಧೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಆಯೋಜಿಸಿದ್ದ ಓಕುಳಿ ಹಬ್ಬ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಸುಮಾರು 11 ವರ್ಷಗಳ ಬಳಿಕ ಆಯೋಜನೆಗೊಂಡಿದ್ದ ಹಬ್ಬದಲ್ಲಿ ಯುವಕರು ಸಂಭ್ರಮದಿಂದ ಪಾಲ್ಗೊಂಡರು. ಬೆಳಗ್ಗೆ ಸಿದ್ಧೇಶ್ವರ ಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯಗಳು ಸಂಪನ್ನಗೊಂಡ ನಂತರ ಮಧ್ಯಾಹ್ನ 1 ಗಂಟೆಗೆ ಗ್ರಾಮದ ನೂರಾರು ಮಹಿಳೆಯರು ಗ್ರಾಮದ ನದಿಯಿಂದ ಬಿಂದಿಗೆ ಮೂಲಕ ನೀರು ತಂದು ದೇವಾಲಯದ ಮುಂಭಾಗವಿರುವ ಓಕುಳಿಹೊಂಡಕ್ಕೆ ನೀರು ತುಂಬಿಸಿದರು. ಅರ್ಚಕರು ಓಕುಳಿ ಹೊಂಡಕ್ಕೆ ಪೂಜೆ ಸಲ್ಲಿಸಿದ ನಂತರ ಓಕುಳಿ ಹೊಂಡದ ನೀರನ್ನು ನೆರೆದ ಭಕ್ತರ ಮೇಲೆ ಎರಚುವ ಮೂಲಕ ಓಕುಳಿ ಹಬ್ಬಕ್ಕೆ ಚಾಲನೆ ನೀಡಿದರು. ಇದೇ ಸಮಯವನ್ನು ಕಾಯುತ್ತಿದ್ದ ಯುವಸಮೂಹ ಓಕುಳಿ ಹೊಂಡದತ್ತ ನುಗ್ಗಿ ನೀರನ್ನು ಎರಚಿಕೊಳ್ಳುವ ಮೂಲಕ ಕ್ಷಣಮಾತ್ರದಲ್ಲಿ ಬಣ್ಣಬಣ್ಣದ ನೀರಿನೊಂದಿಗೆ ಓಕುಳಿಯಾಡಿಕೊಂಡು ಸಂಭ್ರಮಿಸಿದರು.
ಓಕುಳಿಹಬ್ಬದಲ್ಲಿ ಆಯರನಹಳ್ಳಿ ಗ್ರಾಮದ ಮುಖಂಡರು ಹಾಗೂ ಕೆ.ಆರ್.ನಗರ ತಾಲೂಕಿನ ಕೆಲವು ಗ್ರಾಮಗಳು ಸೇರಿದಂತೆ ಸುತ್ತಮುತ್ತಲ 20ಕ್ಕೂ ಹೆಚ್ಚು ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು. ಜೂ.4ರ ರಾತ್ರಿ ಸಿದ್ದೇಶ್ವರ ಸ್ವಾಮಿಯ ಭವ್ಯ ಮೆರವಣಿಗೆ ಆಯೋಜನೆಗೊಂಡಿದೆ.