ಕರೊನಾ ಲಸಿಕೆ ಬಳಕೆಗೆ ಓಕೆ: ಭಾರತದಲ್ಲಿ ಕೋವಿಶೀಲ್ಡ್ ತುರ್ತು ಬಳಕೆಗೆ ಸಿಕ್ಕಿತು ಹಸಿರು ನಿಶಾನೆ

Covisheeld
Published on

ನವದೆಹಲಿ: ಹೊಸ ರೂಪದೊಂದಿಗೆ ಲಗ್ಗೆ ಇಟ್ಟಿರುವ ಕರೊನಾ ಮಹಾಮಾರಿಗೆ ಇಡೀ ದೇಶ ಬೆಚ್ಚಿರುವ ಸಂದರ್ಭದಲ್ಲೇ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹೊಸ ವರ್ಷದ ಕೊಡುಗೆಯಾಗಿ ಭಾರತೀಯರಿಗೆ ಸಿಹಿ ಸುದ್ದಿ ಪ್ರಕಟಿಸಿದೆ. ಕೋವಿಡ್ -19 ತುರ್ತು ಚಿಕಿತ್ಸೆಗಾಗಿ ಆಕ್ಸ್​ಫರ್ಡ್-ಅಸ್ಟ್ರಾಜೆನಿಕಾ ಕಂಪನಿಯ ಕೊವಿಶೀಲ್ಡ್ ಲಸಿಕೆ ಬಳಸುವಂತೆ ಕೇಂದ್ರ ಸರ್ಕಾರ ರಚಿಸಿದ್ದ ವಿಶೇಷ ತಜ್ಞರ ಸಮಿತಿ ಶಿಫಾರಸು ಮಾಡಿದೆ. ಡಿಸಿಜಿಐ (ಭಾರತೀಯ ಔಷಧಗಳ ಮಹಾ ನಿಯಂತ್ರಕ) ಸಮ್ಮತಿ ದೊರೆತ ಬಳಿಕ ಲಸಿಕೆ ಬಳಕೆಗೆ ಮುಕ್ತವಾಗಲಿದೆ.

ರೂಪಾಂತರಿ ಕರೊನಾ ಸೋಂಕಿತರ ಪ್ರಕರಣ ದೇಶದಲ್ಲಿ ಹೆಚ್ಚುತ್ತಿರುವ ಬೆನ್ನಲ್ಲೇ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡುವಂತೆ ಆಕ್ಸ್​ಫರ್ಡ್-ಅಸ್ಟ್ರಾಜೆನಿಕಾ ಮತ್ತು ಭಾರತ್ ಬಯೋಟೆಕ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದವು. ಈ ಸಂಬಂಧ ಕೇಂದ್ರೀಯ ಔಷಧಗಳ ಮಾನಕ ನಿಯಂತ್ರಣ ಸಂಸ್ಥೆ (ಸಿಡಿಎಸ್​ಸಿಒ) ನೇಮಿಸಿದ್ದ ವಿಷಯ ತಜ್ಞರ ಸಮಿತಿ ಶುಕ್ರವಾರ ಸಭೆ ನಡೆಸಿ ಲಸಿಕೆ ಬಳಕೆಗೆ ಸಮ್ಮತಿ ನೀಡಿತು. ಜಗತ್ತಿನ ಅತಿ ದೊಡ್ಡ ಲಸಿಕೆ ತಯಾರಿಕೆ ಸಂಸ್ಥೆ, ಪುಣೆ ಮೂಲದ ಭಾರತೀಯ ಸೆರಂ (ಎಸ್​ಐಐ) ಸಲ್ಲಿಸಿದ್ದ ದತ್ತಾಂಶಗಳನ್ನು ಪರಿಶೀಲಿಸಿದ ಬಳಿಕ ಸಮಿತಿ ಅನುಮೋದನೆ ನೀಡಿದೆ.

8 ತಿಂಗಳು, 30 ಕೋಟಿ ಗುರಿ: ಜಗತ್ತಿನಲ್ಲೇ ಕರೊನಾ ಸೋಂಕಿತರಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಮುಂದಿನ ಆರರಿಂದ ಎಂಟು ತಿಂಗಳಲ್ಲಿ 30 ಕೋಟಿ ಜನರಿಗೆ ಕೊವಿಡ್-19 ಲಸಿಕೆ

ನೀಡಲು ಸರ್ಕಾರ ಉದ್ದೇಶಿಸಿದೆ. ಅಗ್ಗದ ಆಕ್ಸ್​ಫರ್ಡ್ ಲಸಿಕೆ ಅದರ ದೊಡ್ಡ ಆಶಾವಾದವಾಗಿದೆ. ಸೆರಂನೊಂದಿಗೆ ಭಾರತ ಸರ್ಕಾರ ಇನ್ನೂ ಅಧಿಕೃತ ಒಪ್ಪಂದ ಮಾಡಿಕೊಂಡಿಲ್ಲ. ಆದರೆ, ದೇಶೀಯ ಮಾರುಕಟ್ಟೆಗೆ ತನ್ನ ಮೊದಲ ಆದ್ಯತೆಯೆಂದು ಸಂಸ್ಥೆ ಸ್ಪಷ್ಟಪಡಿಸಿದೆ. ನಂತರ ರಫ್ತಿಗೆ ಗಮನ ನೀಡಲಿದೆ.

ಅಭಿವೃದ್ಧಿ-ತಯಾರಿ: ಆಕ್ಸ್​ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿರುವ ಕೊವಿಶೀಲ್ಡ್ ಲಸಿಕೆಯನ್ನು ಅಸ್ಟ್ರಾಜೆನಿಕಾ ಕಂಪನಿ ಮಾನವ ಬಳಕೆಗಾಗಿ ಉತ್ಪಾದಿಸುತ್ತಿದೆ. ಬ್ರಿಟನ್ ಈಗಾಗಲೇ ಈ ಲಸಿಕೆಗೆ ಅನುಮೋದನೆ ನೀಡಿದೆ.

ಶೇ. 70.4 ಪರಿಣಾಮ

ಲಭ್ಯವಿರುವ ಮಧ್ಯಂತರ ದತ್ತಾಂಶಗಳ ಪ್ರಕಾರ, ಸೋಂಕಿನ ಲಕ್ಷಣ ಹೊಂದಿದವರ ಚಿಕಿತ್ಸೆಯಲ್ಲಿ ಕೊವಿಶೀಲ್ಡ್ ಲಸಿಕೆ ಶೇಕಡ 70.4 ಪರಿಣಾಮ ಬೀರುತ್ತದೆ. ಇನ್ನೆರಡು ಪ್ರಮುಖ ಲಸಿಕೆಗಳಾದ ಫೈಜರ್-ಬಯೋಎನ್​ಟೆಕ್ ಮತ್ತು ಮಾಡರ್ನಾ ಲಸಿಕೆಗಳು ಅನುಕ್ರಮವಾಗಿ ಶೇ. 95 ಮತ್ತು ಶೇ. 94.5 ಪರಿಣಾಮ ಹೊಂದಿವೆ.

ಯಾರಿಗೆ ಲಭ್ಯ?

  • ಮುಂಚೂಣಿ ಆರೋಗ್ಯ ಕಾರ್ಯಕರ್ತರು, ವೃದ್ಧರಿಗೆ ಮೊದಲ ಹಂತದಲ್ಲಿ ಆದ್ಯತೆ ಮೇರೆಗೆ ಲಸಿಕೆ ಹಾಕಲಾಗುತ್ತದೆ
  • 29,000 ಲಸಿಕಾ ಪಾಯಿಂಟ್​ಗಳಿಗೆ ಲಸಿಕೆ ಸರಬರಾಜು ಮಾಡಲು 31 ಕೇಂದ್ರಗಳನ್ನು ಸ್ಥಾಪಿಸಲಾಗಿದೆ

ಭಾರತದ ಅಂಕಿಸಂಖ್ಯೆ ಒಟ್ಟು ಸೋಂಕಿತರು- 1,02,88158 ಚೇತರಿಕೆ- 98,83,813 ಸಕ್ರಿಯ ಪ್ರಕರಣ- 2.54 ಲಕ್ಷ ಒಟ್ಟು ಮೃತರು- 1,49,032 ಎಲ್ಲೆಲ್ಲಿದೆ ಅನುಮತಿ

  • ಬ್ರಿಟನ್, ಅರ್ಜೆಂಟಿನಾದಲ್ಲಿ ಈಗಾಗಲೇ ಆಸ್ಟ್ರಾಜೆನಿಕಾ,
  • ಆಕ್ಸ್​ಫರ್ಡ್​ನ ಕೋವಿಶೀಲ್ಡ್ ಲಸಿಕೆಯ ತುರ್ತು ಬಳಕೆಗೆ ಅನುಮತಿ ದೊರೆತಿದೆ.

ಎಷ್ಟಿರಬಹುದು ಬೆಲೆ?

ಭಾರತ ಸರ್ಕಾರಕ್ಕೆ ಕೊವಿಶೀಲ್ಡ್ ಲಸಿಕೆಯ ಪ್ರತಿ ಡೋಸ್ ಬೆಲೆ 220 ರೂಪಾಯಿ (3 ಡಾಲರ್). ಇತರ ಎಲ್ಲ ವೆಚ್ಚ ಸೇರಿ ಒಬ್ಬ ವ್ಯಕ್ತಿಗೆ ಲಸಿಕೆ ಹಾಕಲು ಒಟ್ಟು 440 ರೂ. (6 ಡಾಲರ್) ತಗಲುತ್ತದೆ. ಖಾಸಗಿ ಮಾರುಕಟ್ಟೆಯಲ್ಲಾದರೆ ತಲಾ ಡೋಸ್ ಬೆಲೆ 700-800 ರೂ.ಆಗುತ್ತದೆ.

ಅನುಕೂಲಗಳೇನು?

ಹೆಚ್ಚಿನ ಫ್ರೀಜಿಂಗ್ ಅಗತ್ಯ ಇಲ್ಲದಿರುವುದರಿಂದ ಸಾಮೂಹಿಕ ಲಸಿಕೆ ಕಾರ್ಯಕ್ರಮದ ಗುರಿ ಹೊಂದಿರುವ ಭಾರತಕ್ಕೆ ಕೊವಿಶೀಲ್ಡ್ ಲಸಿಕೆಯೇ ಹೆಚ್ಚು ಅಪ್ಯಾಯಮಾನವಾಗಲಿದೆ. ಲಸಿಕೆಯ ಉತ್ಪಾದನೆ ವೆಚ್ಚ ಕೂಡ ಕಡಿಮೆ. ಇದು ಬಡ ದೇಶಗಳಲ್ಲಿ ಆಶಾವಾದ ಮೂಡಿಸಿದೆ.

ಎಲ್ಲರಿಗೂ ಲಸಿಕೆ ಉಚಿತವಿಲ್ಲ

ಲಸಿಕೆ ನೀಡಿಕೆ ವೆಚ್ಚಕ್ಕೆ ಸಂಬಂಧಿಸಿದಂತೆ ಸರ್ಕಾರ ಶುಕ್ರವಾರ ಮಹತ್ವದ ಸ್ಪಷ್ಟನೆ ನೀಡಿದೆ. ಆದ್ಯತೆ ವಿಭಾಗದಲ್ಲಿ ಬರುವ 30 ಕೋಟಿ ಜನರ ಲಸಿಕಾ ವೆಚ್ಚವನ್ನು ಮಾತ್ರ ಸರ್ಕಾರ ಭರಿಸಲಿದೆ. ದೇಶದ ಎಲ್ಲರಿಗೂ ಉಚಿತವಾಗಿ ನೀಡಲಾಗದೆಂದು ನೀತಿ ಆಯೋಗದ ಸದಸ್ಯ ಹಾಗೂ ರಾಷ್ಟ್ರೀಯ ಕೊವಿಡ್-19 ಕಾರ್ಯ ಪಡೆ ಮುಖ್ಯಸ್ಥ ವಿನೋದ್ ಪೌಲ್ ಹೇಳಿದ್ದಾರೆ.

ಐದು ಕೋಟಿ ಡೋಸ್

ಅಸ್ಟ್ರಾಜೆನಿಕಾ ಲಸಿಕೆಯ ಸ್ಥಳೀಯ ಉತ್ಪಾದಕರಾದ ಭಾರತೀಯ ಸೆರಂ ಸಂಸ್ಥೆ (ಎಸ್​ಐಐ) ಬಳಿ ಈಗಾಗಲೇ ಲಸಿಕೆಯ 5 ಕೋಟಿ ಡೋಸ್ ಸಂಗ್ರಹವಿದೆ. ಶೈತ್ಯಾಗಾರದಿಂದ ಲಸಿಕೆಯನ್ನು ಎಲ್ಲ ರಾಜ್ಯಗಳಿಗೆ ಸಾಗಿಸುವ ಕೆಲಸ ಶನಿವಾರವೇ ಆರಂಭವಾಗಬಹುದೆನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net