

ಕರಿದ ಪದಾರ್ಥಗಳನ್ನು ಅತಿಯಾಗಿ ಅಥವಾ ನಿರಂತರವಾಗಿ ಸೇವಿಸುವುದರಿಂದ ಹೃದ್ರೋಗ, ಮೆದುಳಿನ ತೊಂದರೆಗಳು ಮುಂತಾದವು ಉಂಟಾಗಬಹುದು. ಏಕೆಂದರೆ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗಿ ರಕ್ತನಾಳಗಳಲ್ಲಿ ತಡೆ ಉಂಟಾಗುವ ಸಾಧ್ಯತೆ ತುಂಬಾ ಜಾಸ್ತಿ. ಪದೇ ಪದೇ ಇವುಗಳ ಸೇವನೆ ಮಾಡುವುದು ತೂಕ ಹೆಚ್ಚಾಗಲು ಅದರಲ್ಲೂ ವಿಶೇಷವಾಗಿ ಹೊಟ್ಟೆಯಲ್ಲಿ ಕೊಬ್ಬು ತುಂಬಿಕೊಳ್ಳಲು ಕಾರಣವಾಗುತ್ತದೆ. ಮಧುಮೇಹ, ಅಧಿಕ ರಕ್ತದೊತ್ತಡದಂತಹ ಕಾಯಿಲೆಗಳಿಗೂ ಇದು ಕಾರಣವಾಗಬಹುದು. ದೇಹದಲ್ಲಿ ಉರಿಯೂತ ಮತ್ತು ಆಕ್ಸಿಡೇಟಿವ್ ಸ್ಟ್ರೆಸ್ ಹೆಚ್ಚಾಗಿ ದೀರ್ಘಕಾಲಿನ ಸಮಸ್ಯೆಗಳು ಅದರಲ್ಲೂ ವಿಶೇಷವಾಗಿ ಕ್ಯಾನ್ಸರ್ನಂತಹ ತೊಂದರೆಗಳು ಸುಲಭವಾಗಿ ಬರುತ್ತವೆ. ಅದರಲ್ಲೂ ಕೆಟ್ಟ, ರಾಸಾಯನಿಕ ಯುಕ್ತ ಎಣ್ಣೆಗಳನ್ನು ಬಳಸಿ ಕರಿದ ಪದಾರ್ಥಗಳು ಅಥವಾ ಪ್ಯಾಕ್ಡ್, ಬೀದಿಬದಿಯಲ್ಲಿ ತಯಾರಿಸಿದ ಪದಾರ್ಥಗಳು ಅತಿ ದೊಡ್ಡ ಪ್ರಮಾಣದಲ್ಲಿ ತೊಂದರೆಗಳಿಗೆ ಕಾರಣವಾಗುತ್ತವೆ. ಆದರೆ ಕರಿದ ಪದಾರ್ಥಗಳನ್ನು ಸೇವಿಸಿದ ತಕ್ಷಣ ಆರೋಗ್ಯ ಹಾಳಾಗುತ್ತದೆ ಎಂದಾಗಲೀ ಅಥವಾ ಯಾವತ್ತೂ ಕರಿದ ಪದಾರ್ಥ
ಗಳನ್ನು ಸೇವಿಸಬಾರದು ಎಂದಾಗಲೀ ಆರೋಗ್ಯ ಶಾಸ್ತ್ರ ಹೇಳುವುದಿಲ್ಲ. ಯಾವುದರಲ್ಲಿ ಕರಿಯುತ್ತೇವೆ? ಯಾವ ಪ್ರಮಾಣದಲ್ಲಿ ಮತ್ತು ಹೇಗೆ ಸೇವಿಸುತ್ತೇವೆ ಎಂಬುದು ಅತ್ಯಂತ ಮುಖ್ಯವಾದದು. ಕಾಯಿಸುತ್ತಿದ್ದಂತೆಯೇ ಹೊಗೆಯಾಗಿ ಪರಿವರ್ತಿತವಾಗದ ಅಂದರೆ ಹೆಚ್ಚು ಹೆಚ್ಚು ಉಷ್ಣತೆಯನ್ನು ತಡೆದುಕೊಳ್ಳುವ ಸಾಮರ್ಥ್ಯ ಇರುವ ಎಣ್ಣೆ ಕರಿಯಲು ಹೆಚ್ಚು ಸೂಕ್ತವಾದದ್ದು. ಈ ವಿಷಯದಲ್ಲಿ ರಿಫೈನ್ಡ್ ಎಣ್ಣೆಗಳು ಒಳ್ಳೆಯದೆಂದು ಹೇಳಬಹುದಾದರೂ ಬೇರೆ ಬೇರೆ ಕಾರಣಗಳಿಂದ ಅವು ಆರೋಗ್ಯಕ್ಕೆ ಒಳ್ಳೆಯವಲ್ಲ. ಹಾಗಾಗಿ ಈ ವಿಷಯದಲ್ಲಿ ಅತ್ಯಂತ ಸೂಕ್ತವಾದವುಗಳೆಂದರೆ ತುಪ್ಪ ಮತ್ತು ಕೊಬ್ಬರಿ ಎಣ್ಣೆ. ಸುಮಾರು 250 ಡಿಗ್ರಿ ಸೆಲ್ಸಿಯಸ್ ತಾಪಮಾನದವರೆಗೆ ಕೂಡ ತುಪ್ಪ ಹೊಗೆಯಾಡುವುದಿಲ್ಲ. ಇದರಿಂದಾಗಿ ಅದು ತನ್ನ ಗುಣವನ್ನು ಸುಲಭವಾಗಿ ಕಳೆದುಕೊಳ್ಳುವುದಿಲ್ಲ ಮತ್ತು ಆರೋಗ್ಯಕ್ಕೆ ಕೆಟ್ಟದ್ದನ್ನು ಉಂಟುಮಾಡುವುದಿಲ್ಲ. ಆದರೆ ನಾವು ಬಳಸುವ ತುಪ್ಪ ಶುದ್ಧವಾಗಿರಬೇಕಷ್ಟೇ. ಕೊಬ್ಬರಿ ಎಣ್ಣೆ ಕೂಡ ಸುಮಾರು 200 ಡಿಗ್ರಿ ಸೆಲ್ಸಿಯಸ್ವರೆಗೆ ಹೊಗೆಯಾಡುವುದಿಲ್ಲ. ಹಾಗಾಗಿ ಇದು ಕೂಡಾ ಅನುಕೂಲಕರವೇ. ಜೊತೆಗೆ, ತುಪ್ಪದಲ್ಲಿ ಒಳ್ಳೆಯ ಪ್ರಮಾಣದಲ್ಲಿ ವಿಟಮಿನ್ ಎ, ಡಿ, ಇ, ಕೆ ಮತ್ತು ಶಾರ್ಟ್ ಚೈನ್ ಫ್ಯಾಟಿ ಆಸಿಡ್ಗಳು ಹೇರಳವಾಗಿವೆ. ಇವುಗಳಿಂದಾಗಿ ದೇಹದಲ್ಲಿ ಉರಿಯೂತದ ಪ್ರಮಾಣ ಕಡಿಮೆಯಾಗುತ್ತದೆ ಮತ್ತು ಕರುಳಿಗೆ ಶಕ್ತಿ ಸಿಗುತ್ತದೆ. ಕೊಬ್ಬರಿ ಎಣ್ಣೆಯಲ್ಲಿ ಕೂಡ ಮೀಡಿಯಂ ಚೈನ್ ಫ್ಯಾಟಿ ಆಸಿಡ್ಗಳು ಹೇರಳವಾಗಿದ್ದು ದೇಹಕ್ಕೆ ಒಳ್ಳೆಯ ಶಕ್ತಿಯನ್ನು ಕೊಡುತ್ತವೆ. ಲಾರಿಕ್ ಆಸಿಡ್ನಂತಹ ಉತ್ತಮವಾದ ಪೋಷಕಾಂಶಗಳು ಕೂಡಾ ಇವೆ.
ತುಪ್ಪ ಮತ್ತು ಕೊಬ್ಬರಿ ಎಣ್ಣೆಗಳ ಬಗ್ಗೆ ಹೃದಯದ ಆರೋಗ್ಯಕ್ಕೆ ಹಾನಿಕರವೆಂದು ತಪ್ಪು ಅಭಿಪ್ರಾಯವಿದೆ. ಆದರೆ ಇವುಗಳ ಮಿತಿ ಅರಿತ ಸೇವನೆಯಿಂದ ಹೃದಯದ ಆರೋಗ್ಯಕ್ಕೆ ಒಳ್ಳೆಯದೇ ಆಗುತ್ತದೆ. ಹೀಗೆ ಕರಿದ ಪದಾರ್ಥಗಳನ್ನು ಖಂಡಿತವಾಗಿಯೂ ಆರೋಗ್ಯವಂತರು ಸೇವಿಸಬಹುದು ಎಂದು ಆಯುರ್ವೆದ ಹೇಳುತ್ತದೆ. ಆದರೆ ನಿತ್ಯವೂ ಇವುಗಳ ಸೇವನೆ ಸರಿಯಲ್ಲ. ಮಧ್ಯಾಹ್ನದ ಊಟದ ಸಮಯದಲ್ಲಿ ಅಥವಾ ಹೊಟ್ಟೆ ಚೆನ್ನಾಗಿ ಹಸಿದಿರುವಾಗ ಇವುಗಳನ್ನು ಸೇವಿಸಬಹುದು. ರಾತ್ರಿ ಮಾತ್ರ ಇವುಗಳ ಸೇವನೆ ಬೇಡವೇ ಬೇಡ. ಇವುಗಳನ್ನು ಸೇವಿಸುವ ಸಂದರ್ಭದಲ್ಲಿ ಕೊತ್ತಂಬರಿ ಬೀಜ, ಜೀರಿಗೆ, ಶುಂಠಿ, ಓಂ ಕಾಳು ಮುಂತಾದವುಗಳನ್ನು ಬಳಸಿ ತಯಾರಿಸಿದ ಕಷಾಯವನ್ನು ಕುಡಿಯುವುದು ಒಳ್ಳೆಯದು. ಅದರಲ್ಲೂ ಕರಿದ ಪದಾರ್ಥಗಳ ಸೇವನೆಯಾದ ತಕ್ಷಣ ಇಂತಹ ಬಿಸಿ ಕಷಾಯ ಅಥವಾ ಬಿಸಿ ಬಿಸಿ ನೀರಿನ ಸೇವನೆ ಆ ಪದಾರ್ಥಗಳಿಂದ ಆಗಬಹುದಾದ ಅಜೀರ್ಣ, ಕಫ, ತಲೆಭಾರ ಮುಂತಾದ ಸಮಸ್ಯೆಗಳನ್ನುತಪ್ಪಿಸುತ್ತದೆ.
(ಪ್ರತಿಕ್ರಿಯಿಸಿ: vvsudina@mail.com)