ಜೆಜೆಎಂ ಬೇಡವೆಂದು ಅಧಿಕಾರಿಗಳ ಪತ್ರ

araga
ಆರಗ ಜ್ಞಾನೇಂದ್ರ ನಿಧಿಗೆ ಹೋಬಳಿಗೆ ಸಂಬಂಧಿಸಿ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ತಾರಾ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
Published on

ಶಿವಮೊಗ್ಗ: ಜನರಿಗೆ ಶುದ್ಧ ಕುಡಿಯುವ ನೀರು ನೀಡಬೇಕೆಂಬ ಉದ್ದೇಶದಿಂದ ಜಲಜೀವನ್ ಮಿಷನ್ ಯೋಜನೆ ಜಾರಿಗೆ ತರಲಾಗಿದೆ. ಆದರೆ ಅಧಿಕಾರಿಗಳು ಜಲಾಶಯದಿಂದ ನೇರವಾಗಿ ನೀಡುತ್ತೇವೆ. ಜೆಜೆಎಂ ಬೇಡ ಎಂದು ಪತ್ರ ಬರೆದಿದ್ದಾರೆ. ಇದನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಆರಗ ಜ್ಞಾನೇಂದ್ರ ಆಕ್ರೋಶ ವ್ಯಕ್ತಪಡಿಸಿದರು.

ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಿಧಿಗೆ ಹೋಬಳಿಗೆ ಸಂಬಂಧಿಸಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಕುಡಿಯುವ ನೀರಿನ ಯೋಜನೆ ಮುಗಿದಿದೆ ಎಂದು ಕೆಲವರು ವರದಿ ನೀಡಿದ್ದಾರೆ. ಆದರೆ ವಾಸ್ತವದಲ್ಲಿ ಯೋಜನೆ ಮುಗಿದೇ ಇಲ್ಲ. ಸಂಪೂರ್ಣವಾಗಿ ಮುಕ್ತಾಯವಾಗದ ಯೋಜನೆಗಳನ್ನು ಪಿಡಿಒಗಳು ಪಂಚಾಯಿತಿಗೆ ಹಸ್ತಾಂತರ ಮಾಡಿಕೊಳ್ಳುವ ಅವಶ್ಯಕತೆಯೇ ಇಲ್ಲ ಎಂದರು.

ಜಲಜೀವನ್ ಮಿಷನ್ ಯೋಜನೆ ಪ್ರಧಾನಿ ಮೋದಿ ಅವರ ಅತ್ಯುನ್ನತ ಕನಸು. ಪ್ರತಿ ವ್ಯಕ್ತಿಗೂ ಶುದ್ಧ ಕುಡಿಯುವ ನೀರು ಪೂರೈಸಲು ಹಣ ನೀಡಿದ್ದಾರೆ. ಆದರೆ ಹಳೇ ಪೈಪ್‌ಲೈನ್‌ಗಳಿಗೆ ಹೊಸದಾಗಿ ಬಿಲ್ ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಇನ್ನು ಮುಂದೆ ಇಷ್ಟು ಪ್ರಮಾಣದ ಹಣ ಬರುವುದಿಲ್ಲ. ಕೆಲವು ಕಡೆ ನಾನೇ ಬಂದು ಸ್ಥಳ ಪರಿಶೀಲನೆ ಮಾಡುತ್ತೇನೆ. ಇಂಜಿನಿಯರ್‌ಗಳು, ಅಧಿಕಾರಿಗಳ ಲೋಪ ಕಂಡುಬಂದರೆ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

ಬಡವರಿಗೆ ಹಕ್ಕುಪತ್ರ ಕೊಡಿಸಲು ನಾನು ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸುವುದೊಂದೇ ಬಾಕಿ. 94ಸಿ ಹಾಗೂ 94 ಡಿ ಮೂಲಕ ಅರ್ಜಿ ಸಲ್ಲಿಸುವ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವುದು ಯಾವಾಗ ಎಂಬುದನ್ನು ಕಂದಾಯ ಅಧಿಕಾರಿಗಳೇ ಹೇಳಬೇಕು ಎಂದು ಆರಗ ಜ್ಞಾನೇಂದ್ರ ಕಿಡಿಕಾರಿದರು.

ಒಂದು ವೇಳೆ ಹಕ್ಕುಪತ್ರ ನೀಡುವುದೇ ಇಲ್ಲ ಎಂದು ನಿಧರ್ರಿಸಿದ್ದರೆ ಅದನ್ನೂ ಹೇಳಿಬಿಡಿ. ಎರಡು ವರ್ಷದಿಂದ ಇದೇ ವಿಚಾರ ಹೇಳಿ ನನಗೂ ಸಾಕಾಗಿದೆ. ಓರ್ವ ಗುಮಾಸ್ತ ತೀರ್ಥಹಳ್ಳಿಗೆ ಬರುತ್ತಾನೆ. ಆತ ಹಸಿದ ಹುಲಿ ರೀತಿ. ಎಲ್ಲದಕ್ಕೂ ರೇಟ್ ನಿಗದಿ ಮಾಡಿ ಬೋರ್ಡ್ ಹಾಕಿಕೊಳ್ಳುವುದೊಂದು ಬಾಕಿಯಿದೆ ಎಂದು ಭ್ರಷ್ಟ ಅಧಿಕಾರಿಗಳಿಗೆ ಚಾಟಿ ಬೀಸಿದರು.

ತಾಪಂ ಇಒ ಎನ್.ತಾರಾ, ಲೋಕೋಪಯೋಗಿ, ಗ್ರಾಮೀಣ ಕುಡಿಯುವ ನೀರು ಮುಂತಾದ ಇಲಾಖೆ ಇಂಜಿನಿಯರ್‌ಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net