

ಗೋವಿಂದರಾಜು ಚಿನ್ನಕುರ್ಚಿ
ಬಡ ಮತ್ತು ಮಧ್ಯಮ ವರ್ಗದವರಿಗೆ ಸೂರು ಕಲ್ಪಿಸುವ ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ) (ಗ್ರಾಮೀಣ) ಅನುಷ್ಠಾನ ವೇಳೆ ನಕಲಿ ದಾಖಲೆ ನೀಡಿ ನೋಡಲ್ ಅಧಿಕಾರಿಗಳು ಕೋಟ್ಯಂತರ ರೂ. ಲಪಟಾಯಿಸಿರುವುದು ಬೆಳಕಿಗೆ ಬಂದಿದೆ.
ಕೋಲಾರ ಮತ್ತು ಹಾಸನ ಜಿಲ್ಲೆಯಲ್ಲಿ ಅಕ್ರಮ ನಡೆದಿರುವುದು ಗೊತ್ತಾಗಿದ್ದು, ಜಿಲ್ಲಾ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಎಚ್ಚರಿಕೆವಹಿಸುವಂತೆ ರಾಜೀವ್ ಗಾಂಧಿ ವಸತಿ ನಿಗಮ ಕಟ್ಟಾಜ್ಞೆ ಮಾಡಿದೆ.
ಮನೆ ನಿರ್ಮಾಣಕ್ಕೆ ಎಸ್‌ಸಿ/ಎಸ್‌ಟಿಗಳಿಗೆ 1.75 ಲಕ್ಷ ರೂ. ಮತ್ತು ಸಾಮಾನ್ಯ ವರ್ಗಕ್ಕೆ ಶೇ.1.20 ಲಕ್ಷ ರೂ. ಅನುದಾನ ನೀಡಲಾಗುತ್ತದೆ. ಯೋಜನೆ ಅನುಷ್ಠಾನದ ಜವಾಬ್ದಾರಿ ತಾಲೂಕು ಮತ್ತು ಜಿಲ್ಲಾ ಪಂಚಾಯತ್‌ಗೆ ವಹಿಸಿದ್ದು, ತಲಾ 2 ಲಾಗಿನ್‌ಗಳನ್ನು ಒದಗಿಸಲಾಗಿದೆ.
ಲಾಗಿನ್‌ನಲ್ಲಿ ಮನೆ ಮಂಜೂರಾತಿ, ಆಧಾರ್ ಅಪ್‌ಡೇಟ್, ಜಿಯೋ ಟ್ಯಾಗ್, ಮನೆ ಛಾಯಚಿತ್ರ, ಮರಣ ಹೊಂದಿದ ಲಾನುಭವಿ ವಾರಸುದಾರರಿಗೆ ಮನೆ ವರ್ಗಾವಣೆ, ಆಧಾರ್ ಜತೆಗೆ ಲಾನುಭವಿಗಳ ಹೆಸರು ತಾಳೆ ಮಾಡಿ ಮಂಜೂರಾತಿ ಆದೇಶ ಪತ್ರ ಸೃಜಿಸಲಾಗುತ್ತದೆ. ಇದಕ್ಕಾಗಿ ನೋಡಲ್ ಅಧಿಕಾರಿಗಳನ್ನು ನೇಮಿಸಿದ್ದು, ಸಿಇಒ, ಇಒ ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ತರಬೇತಿ ನೀಡಬೇಕು. ಆದರೆ, ಅಧಿಕಾರಿಗಳಿಗೆ ತರಬೇತಿ ನೀಡದೆ ಮತ್ತು ಅವರ ಮೊಬೈಲ್ ನಂಬರ್, ಇಮೇಲ್ ನಮೂದು ಮಾಡದೆ ನೋಡಲ್ ಅಧಿಕಾರಿಗಳು ದುರ್ಬಳಕ್ಕೆ ಮಾಡಿಕೊಂಡಿದ್ದಾರೆ. ಖಾಲಿ ಸೈಟ್‌ಗಳನ್ನು ಜಿಯೋ ಟ್ಯಾಗ್ ಪೋಟೋ ಅಪ್‌ಲೋಡ್ ಮಾಡಿ ಮೊದಲ ಹಂತದ 30 ಸಾವಿರ ರೂ. ಬ್ಯಾಂಕ್ ಖಾತೆಗೆ ಜಮೆ ಮಾಡಿಕೊಂಡು ವಂಚಿಸಿದ್ದರು. ಇದಲ್ಲದೆ, ಒಂದೇ ಮನೆಯನ್ನು ಬೇರೆ ಬೇರೆ ಆಯಾಮದಲ್ಲಿ ಪೋಟೋ ತೆಗೆದು ಹಲವು ಲಾನುಭವಿಗಳ ಅರ್ಜಿಗೆ ಅಪ್‌ಲೋಡ್ ಮಾಡಿ ಅನುದಾನ ಮಂಜೂರು ಮಾಡಿಸಿಕೊಂಡು ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.
ಎಲ್ಲೆಲ್ಲಿ ಅಕ್ರಮ ಬೆಳಕಿಗೆ
-ಕೋಲಾರ ಜಿಲ್ಲೆ ಹರಟಿ ಗ್ರಾಪಂನಲ್ಲಿ ಎಸ್‌ಸಿ/ಎಸ್‌ಟಿ ವರ್ಗದವರಿಗೆ 56 ಮನೆಗಳು, ಸಾಮಾನ್ಯ ವರ್ಗಕ್ಕೆ 23 ಮನೆಗಳ ಮಂಜೂರಾತಿಯಲ್ಲಿ ವಂಚನೆ.
-ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ 190 ಲಾನುಭವಿಗಳ ಹೆಸರಿನಲ್ಲಿ 2 ಕೋಟಿ ರೂ. ವಂಚನೆ. ಈ ಬಗ್ಗೆ ಪ್ರತ್ಯೇಕ ಎರಡು ಎ್ಐಆರ್ ದಾಖಲಾಗಿವೆ.
ಅಕ್ರಮ ತಡೆಗೆ ಸೂಚನೆ
-ಮನೆ ಮಂಜೂರಾತಿ ಸಂಬಂಧಿಸಿದ ದಾಖಲೆಗಳನ್ನು ಲಾನುಭವಿಗಳಿಂದ ಪಡೆದು ಕಡತವನ್ನು ಗ್ರಾಮ ಪಂಚಾಯಿತಿಯಲ್ಲಿ ಕಡ್ಡಾಯವಾಗಿ ನಿರ್ವಹಿಸುವುದು
-ತಾಲೂಕು ಪಂಚಾಯಿತಿ ಇಒ, ಜಿಲ್ಲಾ ಪಂಚಾಯತ್ ವಸತಿ ಯೋಜನೆ ಅನುಷ್ಠಾನ ಸಂಬಂಧಿಸಿದ ಲಾಗಿನ್ ಐಡಿಯನ್ನು ಖುದ್ದು ಬಳಸುವುದು ಮತ್ತು ನಿಗಾ ವಹಿಸಬೇಕು
-ಸಿಇಒ, ಮುಖ್ಯ ಲೆಕ್ಕಾಧಿಕಾರಿಗಳು ಅನುದಾನ ಬಿಡುಗಡೆಗೆ ಸಂಬಂಧಿಸಿದಂತೆ ಆದೇಶ ಪ್ರತಿ, ಹಣ ವರ್ಗಾವಣೆ ಆದೇಶಗಳನ್ನು ಮಂಜೂರಾತಿ ನೀಡಲಾದ ಲಾನುಭವಿಗಳ ಪಟ್ಟಿಯೊಂದಿಗೆ ಹೊಂದಾಣಿಕೆ ಆಗುತ್ತಿರುವ ಬಗ್ಗೆ ಪರಿಶೀಲನೆ ನಡೆಸಬೇಕು. ಡಾಂಗಲ್ ಬಳಕೆ ಮೇಲೆ ನಿಗಾ ವಹಿಸಿ
-ಲಾನುಭವಿಯ ಮನೆ ನಿರ್ಮಾಣದ ಜಿಯೋ ಟ್ಯಾಗ್ ಮಾಡಲಾದ ಮತ್ತು ಛಾಯಾಚಿತ್ರಗಳನ್ನು ಪರಿಶೀಲಿಸಿ ಅನುದಾನ ಬಿಡುಗಡೆ ಕ್ರಮ ವಹಿಸಿ
-ಜಿಯೋ ಟ್ಯಾಗ್ ಮತ್ತು ಛಾಯಾ ಚಿತ್ರಗಳನ್ನು ಪರಿಶೀಲನೆ ನಡೆಸಿ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಅರ್ಹವಲ್ಲದ ಪ್ರಕರಣಗಳನ್ನು ತಿರಸ್ಕರಿಸುವುದು, ಸಂಬಂಧಪಟ್ಟ ಗ್ರಾಮ ಪಂಚಾಯಿತಿಗೆ ನೋಟಿಸ್ ಜಾರಿ ಮಾಡಿ ಎಚ್ಚರಿಕೆ ನೀಡಿ.