ಕೋರ್ಟ್ ಕೇಸ್‌ಗಳನ್ನು ನಿಭಾಯಿಸದೇ ಇದ್ದರೆ ಅಧಿಕಾರಿಗಳೆ ಹೊಣೆ

NS Bosaraju MLC Aicc Sercetary
Published on

ಬೆಂಗಳೂರು: ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಸಮರ್ಪಕವಾಗಿ ನಿಭಾಯಿಸದೇ ಇದ್ದಲ್ಲಿ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿಸುವ ನಿಟ್ಟಿನಲ್ಲಿ ಸುತ್ತೋಲೆ ಹೊರಡಿಸುವಂತೆ ಸಣ್ಣ ನೀರಾವರಿ ಇಲಾಖೆ ಸಚಿವ ಎನ್.ಎಸ್. ಬೋಸರಾಜು ಸೂಚನೆ ನೀಡಿದರು.

ವಿಕಾಸಸೌಧದಲ್ಲಿ ಹಲವಾರು ವರ್ಷಗಳಿಂದ ವಿವಿಧ ನ್ಯಾಯಾಲಯಗಳಲ್ಲಿ ಇತ್ಯರ್ಥವಾಗದೇ ಇರುವಂತಹ ಅನೇಕ ಪ್ರಕರಣಗಳ ಬಗ್ಗೆ ಅಡ್ವೋಕೇಟ್ ಜನರಲ್ ಅವರೊಂದಿಗೆ ಸಭೆ ನಡೆಸಿ ಚರ್ಚಿಸಿದರು.

ರೈತರಿಗೆ ಅನ್ಯಾಯವಾಗದಂತೆ ಹಾಗೂ ಸರ್ಕಾರಕ್ಕೆ ಹೊರೆ ಆಗದಂತೆ ಈ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ಅಡ್ವೋಕೇಟ್ ಜನರಲ್ ಅವರಿಂದ ಸಲಹೆಯನ್ನು ಪಡೆದುಕೊಳ್ಳಲಾಯಿತು.

ಭೂಸ್ವಾಧೀನ ಪ್ರಕರಣಗಳ ಹೆಚ್ಚು

ಸಣ್ಣ ನೀರಾವರಿ ಇಲಾಖೆಯಲ್ಲಿ ಭೂಸ್ವಾಧೀನ ಪ್ರಕರಣಗಳು ಹೆಚ್ಚಾಗಿ ಬಾಕಿಯಿವೆ. ಕೆಲವು ಪ್ರಕರಣಗಳಲ್ಲಿ ಸರಿಯಾದ ದಾಖಲೆ ಸಲ್ಲಿಸದೇ ಇರುವ ಕಾರಣ ಹೆಚ್ಚುವರಿ ಹಣ ನೀಡುವ ಪರಿಸ್ಥಿತಿ ಎದುರಾಗಿದೆ. ಈ ಪ್ರಕರಣಗಳಲ್ಲಿ ಸರಿಯಾದ ಸಮಯದಲ್ಲಿ ದಾಖಲೆ ಸಲ್ಲಿಸದೇ ಅಧಿಕಾರಿಗಳು ನಿರ್ಲಕ್ಷವಹಿಸಿರುವುದು ಕಂಡುಬಂದಿದೆ. ಇಂತಹ ಉದಾಸೀನ ಧೋರಣೆಯಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಹೊರೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ನ್ಯಾಯಾಲಯದಲ್ಲಿನ ಪ್ರಕರಣಗಳ ಬಗ್ಗೆ ಉದಾಸೀನ ತೋರಿಸುವ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಸುತ್ತೋಲ್ನೆ ಹೊರಡಿಸುವಂತೆ ನೀರಾವರಿ ಇಲಾಖೆ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದರು.

ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚನೆ

ಹೊಸ ಯೋಜನೆಗಳನ್ನು ಪ್ರಾರಂಭಿಸುವ ಸಮಯದಲ್ಲಿ ಭೂಸ್ವಾಧೀನ ಪ್ರಕ್ರಿಯೆಯನ್ನು ಮುಗಿಸಲು ಆದ್ಯತೆ ನೀಡಬೇಕು. ಒನ್ ಟೈಮ್ ಸೆಟ್ಲಮೆಂಟ್ ಗೇ ಆದ್ಯತೆ ನೀಡಬೇಕು ಹಾಗೂ ಪ್ರಕರಣಗಳು ನ್ಯಾಯಾಲಯಕ್ಕೆ ಹೋಗದಂತೆ ರೈತರಿಗೆ ಶೀಘ್ರದಲ್ಲಿ ಹಣ ಪಾವತಿಸಬೇಕು ಎಂದು ತಾಕೀತು ಮಾಡಿದರು.

ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ರಾಘವನ್, ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ದಿ ಪ್ರಾಧಿಕಾರದ ನಿರ್ದೇಶಕ ಬಿ.ಕೆ. ಪವಿತ್ರ ಮತ್ತಿತರ ಅಧಿಕಾರಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net