ಅಶುದ್ಧ ನೀರು ಪೂರೈಕೆಗೆ ಅಧಿಕಾರಿಗಳೇ ಕಾರಣ: ಕೆಬಿಪಿ

kbp
ಕೆ.ಬಿ.ಪ್ರಸನ್ನಕುಮಾರ್, ಮಾಜಿ ಶಾಸಕ
Published on

ಶಿವಮೊಗ್ಗ: ನೀರು ಶುದ್ಧೀಕರಣ ಘಟಕದಲ್ಲಿನ ಲೋಪದಿಂದ ನಗರದಲ್ಲಿ ಮಣ್ಣು ಮಿಶ್ರಿತ ನೀರು ಪೂರೈಕೆಯಾಗುತ್ತಿದೆ. ನೀರು ಸರಬರಾಜು ಮಂಡಳಿ ಹಾಗೂ ಪಾಲಿಕೆ ಅಧಿಕಾರಿಗಳು ನೆಪ ಹೇಳುತ್ತ ಕಾಲ ಕಳೆಯುತ್ತಿದ್ದಾರೆ ಎಂದು ಮಾಜಿ ಶಾಸಕ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

ಗಂಗಾ ಸ್ನಾನ ತುಂಗಾ ಪಾನ ಎಂಬ ನಾಣ್ಣುಡಿಯನ್ನು ಸುಳ್ಳು ಮಾಡಲು ನೀರು ಸರಬರಾಜು ಮಂಡಳಿ ಅಧಿಕಾರಿಗಳು ನಿರ್ಧರಿಸಿದಂತಿದೆ ತೀವ್ರ ಮಳೆಯಿಂದ ನೀರಿನೊಂದಿಗೆ ಕೆಸರು ಬೆರೆತು ಈ ರೀತಿ ಆಗುತ್ತಿದೆ. ಸಾರ್ವಜನಿಕರು ನೀರನ್ನು ಕುದಿಸಿ ಕುಡಿಯಬೇಕು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಶಿವಮೊಗ್ಗ ನಗರ ಇದಕ್ಕಿಂತಲೂ ಅಧಿಕ ಮಳೆಯನ್ನು ಕಂಡಿದೆ. ಶುದ್ಧೀಕರಣದ ಯಾವ ಮಾನದಂಡಗಳನ್ನೂ ಪಾಲಿಸದಿರುವುದೇ ಸಮಸ್ಯೆಯ ಮೂಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು.
ನಿಗದಿತ ಪ್ರಮಾಣದಲ್ಲಿ ಕ್ಲೋರಿನ್ ಮತ್ತು ಆಲಂ ಬಳಸುತ್ತಿಲ್ಲ. ಆಯುಧಪೂಜೆ ದಿನ ಬಾಳೆಕಂದು ಮತ್ತು ಬಲೂನ್ ಕಟ್ಟಿದ್ದು ಬಿಟ್ಟರೆ ಶುದ್ಧೀಕರಣ ಘಟಕದ ಸ್ವಚ್ಛತೆ ಮಾಡಿಲ್ಲ. ಯಂತ್ರಗಳು ಕೆಟ್ಟು ನಿಂತು ಎರಡು ತಿಂಗಳಾಗಿದೆ. ಪ್ರಯೋಗಾಲಯ ನಿಷ್ಕ್ರಿಯವಾಗಿದೆ. ಅಲ್ಲಿ ನೀಡುವ ವರದಿ ಕೂಡ ನಂಬಲರ್ಹವಲ್ಲ ಎಂದು ಹೇಳಿದರು.
ನಗರದ ಎಲ್ಲ ಆಸ್ಪತ್ರೆಗಳಲ್ಲಿ ವಾಂತಿ, ಭೇದಿ, ವಿವಿಧ ಜ್ವರ, ಜಾಂಡೀಸ್ ಪ್ರಕರಣಗಳು ದಾಖಲಾಗುತ್ತಿವೆ. ಮೆಗ್ಗಾನ್‌ನಲ್ಲಿ ಕಾಲಿಡಲು ಜಾಗವಿಲ್ಲದಂತಾಗಿದೆ. ವೈದ್ಯಕೀಯ ಪರೀಕ್ಷೆಗಾಗಿ ಜನರು ಸಾವಿರಾರು ರೂ. ಖರ್ಚು ಮಾಡುತ್ತಿದ್ದಾರೆ. ಡಿಎಚ್‌ಒ ಕೂಡ ನೀರಿನ ಸಮಸ್ಯೆಯೇ ಎಲ್ಲದರ ಮೂಲ ಎನ್ನುತ್ತಿದ್ದಾರೆ ಎಂದು ತಿಳಿಸಿದರು.
ಜೆಡಿಎಸ್ ನಗರಾಧ್ಯಕ್ಷ ದೀಪಕ್ ಸಿಂಗ್, ಪ್ರಮುಖರಾದ ಸಿದ್ದಪ್ಪ, ಸಂಗಯ್ಯ, ಗೋವಿಂದರಾಜ್, ಮಂಜುನಾಥ್, ಲೋಹಿತ್, ಚಂದ್ರಶೇಖರ್ ಇತರರಿದ್ದರು.
ಮುತ್ತಿಗೆ ಹಾಕುವ ಎಚ್ಚರಿಕೆ: ಅಧಿಕಾರಿಗಳು ಜನರ ತಾಳ್ಮೆ ಪರೀಕ್ಷೆ ಮಾಡುತ್ತಿದ್ದಾರೆ. 2016ರಲ್ಲೇ 24*7 ಶುದ್ಧ ಕುಡಿಯುವ ನೀರು ಪೂರೈಕೆ ಮಾಡುತ್ತೇವೆ ಎಂದು ಜಲಮಂಡಳಿ ನೀರು ಸರಬರಾಜು ಜವಾಬ್ದಾರಿಯನ್ನು ಪಾಲಿಕೆಯಿಂದ ವಹಿಸಿಕೊಂಡಿತ್ತು. 8 ವರ್ಷ ಕಳೆದರೂ ಶೇ.50ರಷ್ಟೂ ಕಾಮಗಾರಿ ಮುಕ್ತಾಯವಾಗಿಲ್ಲ. ಶುದ್ಧ ನೀರು ಸಹ ಸಿಗುತ್ತಿಲ್ಲ. ಜನ ರೊಚ್ಚಿಗೆದ್ದರೆ ಅಧಿಕಾರಿಗಳ ಪರಿಸ್ಥಿತಿ ಹೀನಾಯವಾಗಲಿದೆ. ಜಲಮಂಡಳಿಗೆ ಹಸ್ತಾಂತರ ಮಾಡಿದಾಕ್ಷಣ ಪಾಲಿಕೆ ಜವಾಬ್ದಾರಿ ಮುಗಿಯುವುದಿಲ್ಲ. ಇದೇ ರೀತಿ ಅಶುದ್ಧ ನೀರು ಪೂರೈಕೆ ಮುಂದುವರಿದರೆ ಜೆಡಿಎಸ್‌ನಿಂದ ಜಲಮಂಡಳಿಗೆ ಮುತ್ತಿಗೆ ಹಾಕಲಾಗುವುದು ಎಂದು ಕೆ.ಬಿ.ಪ್ರಸನ್ನಕುಮಾರ್ ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net