ಅಹಿತಕರ ಘಟನೆಗಳಾದರೆ ಅಧಿಕಾರಿಗಳೆ ಹೊಣೆ

WhatsApp Image 2024-12-23 at 5.02.34 PM
Published on

ಬೆಂಗಳೂರು: ರಾಜಧಾನಿಯಲ್ಲಿ ಕ್ರಿಸ್‌ಮಸ್ ಮತ್ತು ವರ್ಷಾಚರಣೆ ವೇಳೆ ಅಹಿತಕರ ಘಟನೆಗಳು ಸಂಭವಿಸಿದರೆ ಆಯಾ ಡಿಸಿಪಿ, ಎಸಿಪಿ ಮತ್ತು ಇನ್‌ಸ್ಪೆಕ್ಟರ್‌ಗಳನ್ನೇ ನೇರ ಹೊಣೆ ಮಾಡಬೇಕಾಗುತ್ತದೆ. ಹೀಗಾಗಿ, ಅಗತ್ಯ ಮುನ್ನೆಚ್ಚರಿಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಸೂಚಿಸಿದ್ದಾರೆ.

ಇನ್‌ೆಂಟ್ರಿ ರಸ್ತೆಯ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸೋಮವಾರ ಡಿಜಿ-ಐಜಿಪಿ ಡಾ. ಅಲೋಕ್ ಮೋಹನ್ ಮತ್ತು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಒಳಗೊಂಡ ಹಿರಿಯ ಅಧಿಕಾರಿಗಳ ಜತೆ ಗೃಹಸಚಿವರು ಸಭೆ ನಡೆಸಿದರು.

ಈ ವೇಳೆ ಮಾತನಾಡಿದ ಡಾ.ಪರಮೇಶ್ವರ್, ಈ ಬಾರಿ ಬೆಂಗಳೂರಿನಲ್ಲಿ 7 ಲಕ್ಷ ಮಂದಿ ಹೊಸ ವರ್ಷಾಚರಣೆಗೆ ಸೇರುವ ನಿರೀಕ್ಷೆ ಇದೆ. ಹೀಗಾಗಿ ಯಾವುದೇ ಅಹಿತರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಬೇಕು. ಬೆಂಗಳೂರು ವಿಶ್ವದ ಗಮನ ಸೆಳೆಯುವ ನಗರ ಆಗಿರುವುದರಿಂದ ಬಂದೋಬಸ್ತ್ ಬಗ್ಗೆ ನಿರ್ಲಕ್ಷ್ಯವಹಿಸಬಾರದು. ಗುಪ್ತಚರ ಇಲಾಖೆಯೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು. ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಗಳಲ್ಲಿ ಆಚರಣೆಗೆ ಯಾವುದೇ ನಿರ್ಬಂಧ ಇಲ್ಲ. ಮೆಟ್ರೋ ವ್ಯವಸ್ಥೆ, ಓಲಾ, ಊಬರ್ ವ್ಯವಸ್ಥೆ ಬಗ್ಗೆ ಪರಿಶೀಲಿಸಲಾಗಿದೆ. ಸಂಭ್ರಮಾಚರಣೆ ನೆಪದಲ್ಲಿ ತೊಂದರೆ ಮಾಡುವ ಕಿಡಿಗೇಡಿಗಳ ಮೇಲೆ ನಿಗಾವಹಿಸಿ ಕ್ರಮ ಜರುಗಿಸಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಸಭೆಯಲ್ಲಿ ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಮತ್ತು ಎಲ್ಲ ವಿಭಾಗದ ಡಿಸಿಪಿ ಮತ್ತು ಎಸಿಪಿಗಳು ಉಪಸ್ಥಿತರಿದ್ದರು.

ಅಧಿಕಾರಿ, ಸಿಬ್ಬಂದಿಗಿಲ್ಲ ರಜೆ

ಅಗತ್ಯ ಬಂದೋಬಸ್ತ್ ಹಿನ್ನಲೆಯಲ್ಲಿ ನಗರದ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ರಜೆ ನೀಡುವುದು ಬೇಡ. ತೀರ ಅಗತ್ಯತೆ ಮತ್ತು ಅನಿವಾರ್ಯತೆ ಇದ್ದವರಿಗೆ ರಜೆ ನೀಡಿ ಎಂದು ಡಾ.ಪರಮೇಶ್ವರ್ ಸೂಚಿಸಿದರು. ಬಿಬಿಎಂಪಿ, ಬಿಎಂಟಿಸಿ, ಬಿಎಂಆರ್‌ಸಿಎಲ್, ಆರೋಗ್ಯ ಮತ್ತು ಅಗ್ನಿಶಾಮಕ ಇಲಾಖೆಯ ನೆರವು ಪಡೆದುಕೊಳ್ಳಬೇಕು. ಅಗ್ನಿ ಅವಘಡಗಳು ಸಂಭವಿಸದಂತೆ ಮುನ್ನಚ್ಚರಿಕೆ ವಹಿಸಬೇಕು. ಡ್ರಂಕ್ ಆ್ಯಂಡ್ ಡ್ರೈವ್, ಬೈಕ್ ವ್ಹೀಲಿಂಗ್ ಮಾಡುವ ಕಿಡಿಗೇಡಿಗಳು ಹಾಗೂ ಹಳೇ ಪ್ರಕರಣಗಳ ಆರೋಪಿಗಳ ಮೇಲೆ ನಿಗಾ ಇರಿಸಬೇಕೆಂದು ಸಲಹೆ ನೀಡಿದರು.

ಕ್ರಿಸ್‌ಮಸ್ ಮತ್ತು ವರ್ಷಾಚರಣೆ ನಗರದಲ್ಲಿ ಜೋರಾಗಿರುತ್ತದೆ. ಈ ಹಿಂದೆ ಕೆಲವು ಅಹಿತಕರ ಘಟನೆಗಳು ನಡೆದಿವೆ. ಹೀಗಾಗಿ ಈ ಬಾರಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ.

-ಡಾ. ಜಿ. ಪರಮೇಶ್ವರ್, ಗೃಹ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net