ಅಧಿಕಾರಿಗಳು, ವೈದ್ಯರಿಂದಲೇ ರೆಮ್​ಡಿ​ಸಿವಿರ್ ದಂಧೆ

remdesivir
Published on
  • ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

ಕೋವಿಡ್-19 ಸೋಂಕಿತರಿಗೆ ಚಿಕಿತ್ಸೆ ನೀಡಲು ರೆಮ್​ಡಿ​ಸಿವಿರ್ ಚುಚ್ಚುಮದ್ದು ಹೆಚ್ಚು ಉಪಯುಕ್ತ ಎಂಬುದನ್ನೇ ಕೆಲವರು ಬಂಡವಾಳ ಮಾಡಿಕೊಂಡು ಕಾಳಸಂತೆ ದಂಧೆ ನಡೆಸುತ್ತಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರ ಎಚ್ಚರ ವಹಿಸಿದರೂ ಕೆಲ ಅಧಿಕಾರಿಗಳು ಮತ್ತು ವೈದ್ಯರ ನೆರಳಲ್ಲೇ ದಂಧೆ ನಡೆಯುತ್ತಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಕೇಳಿಬರುತ್ತಿವೆ.

ಕರೊನಾ ಸೋಂಕು ದೃಢವಾಗಿ ಆರೋಗ್ಯ ಗಂಭೀರವಾಗಿದ್ದರೆ ಅಂತಹ ರೋಗಿಗೆ ರೆಮ್​ಡಿ​ಸಿವಿರ್ ಚುಚ್ಚುಮದ್ದನ್ನು ಬಹುತೇಕ ವೈದ್ಯರು ನೀಡುತ್ತಾರೆ. ಇದನ್ನು ಅರಿತ ಕೆಲವರು ಆರಂಭದಲ್ಲೇ ಕೃತಕ ಬೇಡಿಕೆ ಸೃಷ್ಟಿಸಿ ಕಾಳಸಂತೆಯಲ್ಲಿ 10 ರಿಂದ 15 ಸಾವಿರ ರೂ.ವರೆಗೂ ಮಾರಾಟಕ್ಕೆ ಇಳಿದಿದ್ದಾರೆ. ಕೆಲವೆಡೆ ಆರೋಗ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿ ಕೆಲವರನ್ನು ವಶಕ್ಕೆ ಪಡೆದಿದ್ದಾರೆ.

ದಂಧೆ ಬಗ್ಗೆ ತಿಳಿದ ಸರ್ಕಾರ ಉತ್ಪಾದನಾ ಕಂಪನಿಯಿಂದ ನೇರವಾಗಿ ಚುಚ್ಚುಮದ್ದನ್ನು ಖರೀದಿಸಿ ತಾನೇ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಪೂರೈಕೆ ಮಾಡುತ್ತಿದೆ. ಆದರೂ ರೆಮ್​ಡಿ​ಸಿವಿರ್ ಚುಚ್ಚುಮದ್ದು ಕಾಳಸಂತೆ ದಂಧೆ ಮಾತ್ರ ನಿಂತಿಲ್ಲ. ಈಗಲೂ ಕೋವಿಡ್ ಸೋಂಕಿತರಿಗೆ ರೆಮ್​ಸಿವಿರ್ ಚುಚ್ಚುಮದ್ದು ಸಿಗುತ್ತಿಲ್ಲ. ಹಣ ಇದ್ದವರಿಗೆ ಕಾಳಸಂತೆಯಲ್ಲಿ ಸುಲಭವಾಗಿ ಲಭ್ಯವಾಗುತ್ತಿದೆ. 1 ಚುಚ್ಚುಮದ್ದು ಅಂದಾಜು 2,600 ರೂ. ಇರಬೇಕು. ಸರ್ಕಾರ ಇದೀಗ 860 ರೂ. ನಿಗದಿ ಮಾಡಿದೆ. ಆದರೆ, ಕಾಳಸಂತೆಯಲ್ಲಿ 10ರಿಂದ 15 ಸಾವಿರ ರೂ. ವರೆಗೂ ಮಾರಾಟವಾಗುತ್ತಿದ್ದು, ಇದಕ್ಕೆ ಸರ್ಕಾರಿ ಅಧಿಕಾರಿ ಮತ್ತು ಕೆಲ ಖಾಸಗಿ, ಸರ್ಕಾರಿ ವೈದ್ಯರು ಕಾರಣ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಸೋಂಕಿತರ ಹೆಸರಲ್ಲಿ ಬುಕ್

ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು, ಔಷಧ ನಿಯಂತ್ರಣ ಮಂಡಳಿಗೆ ಸೋಂಕಿತರ ಮಾಹಿತಿ ನೀಡಿ ಅಗತ್ಯ ಇರುವಷ್ಟು ಚುಚ್ಚುಮದ್ದು ಪಡೆಯಬಹುದು. ಇದೇ ರೀತಿ ಪಡೆಯುತ್ತಿದ್ದರೂ ಎಲ್ಲ ಸೋಂಕಿತರಿಗೆ ಕೊಡುವ ಅಗತ್ಯ ಇಲ್ಲದ ಕಾರಣ ಕೆಲವರಿಗೆ ಕೊಟ್ಟು ಉಳಿಕೆಯನ್ನು ಕಾಳಸಂತೆಗೆ ನೀಡಲಾಗುತ್ತಿದೆ ಎನ್ನಲಾಗಿದೆ. ಸರ್ಕಾರಕ್ಕೆ ಮಾತ್ರ ಎಲ್ಲ ಸೋಂಕಿತರಿಗೆ ರೆಮ್​ಸಿವಿರ್ ಚುಚ್ಚುಮದ್ದು ಬಳಕೆ ಮಾಡಿರುವುದಾಗಿ ಲೆಕ್ಕ ನೀಡಲಾಗುತ್ತಿದೆ. ಇದರಲ್ಲಿ ಔಷಧ ನಿಯಂತ್ರಣ ಮಂಡಳಿ ಅಧಿಕಾರಿಗಳು ಮತ್ತು ಕೆಲ ವೈದ್ಯರು ಸಾಥ್ ನೀಡಿದ್ದಾರೆ ಎಂಬ ಆರೋಪಗಳಿವೆ.

ಕಳ್ಳ ದಾರಿ ತೋರಿಸಿದ ವೈದ್ಯ

ಕಫ, ಹೆಚ್ಚಿನ ಜ್ವರ ಇರುವ ಕಾರಣ ರೆಮ್​ಸಿವಿರ್ ಚುಚ್ಚುಮದ್ದು ಬೇಕೆಂದು ವೈದ್ಯರು ತಿಳಿಸಿದರು. ಎಲ್ಲ ಮೆಡಿಕಲ್ ಶಾಪ್​ನಲ್ಲಿ ವಿಚಾರಿಸಿದಾಗ ಎಲ್ಲಿಯೂ ಸಿಗಲಿಲ್ಲ. ಕೊನೆಗೆ ಮಾಧ್ಯಮದಲ್ಲಿ ತಿಳಿಸಿದಂತೆ ವೈದರಿಗೆ ನೀವೇ ಸರ್ಕಾರದಿಂದ ತರಿಸಿ ಎಂದು ಪ್ರಶ್ನಿಸಿದೆ. ಆಗ ಅವರು ನಿಮ್ಮ ಹೆಸರಿನಲ್ಲಿ ಬುಕ್ ಮಾಡುತ್ತೇನೆ. ಆದರೆ ಇಂದೇ ಬರುತ್ತದೆ ಎಂಬ ನಂಬಿಕೆ ಇಲ್ಲ ಎಂದರು. ಕೊನೆಗೆ ಏನು ಮಾಡಬೇಕೆಂದು ಕೇಳಿದಾಗ ಅವರೇ ಬ್ಲಾಕ್​ವಾರ್ಕೆಟ್​ನಲ್ಲಿ ಸಿಗುತ್ತದೆ ಹೆಚ್ಚಿನ ಹಣ ಕೊಟ್ಟು ತಂದು ಕೊಡಿ ಎಂದು ಹೇಳಿ ದಾರಿ ತೋರಿಸಿದರು. ಆ ವ್ಯಕ್ತಿಗೆ ಕರೆ ಮಾಡಿದಾಗ 15 ಸಾವಿರ ರೂ. ಆಗುತ್ತೆ. ಅದರಲ್ಲಿ ವೈದ್ಯರಿಗೆ ಮತ್ತು ಡ್ರಗ್ ಕಂಟ್ರೋಲ್ ಅಧಿಕಾರಿಗೂ ಕಮಿಷನ್ ಹೋಗಲಿದೆ ಎಂದು ಹೇಳಿದ. ಕೊನೆಗೆ 15 ಸಾವಿರ ರೂ. ಕೊಟ್ಟು ಹಂತ ಹಂತವಾಗಿ 6 ಚುಚ್ಚುಮದ್ದು ಪಡೆದು ವೈದ್ಯರಿಗೆ ನೀಡಿದೆ ಎಂದು ಕೋವಿಡ್ ಸೋಂಕಿತನ ಸಂಬಂಧಿಯೊಬ್ಬರು ‘ವಿಜಯವಾಣಿ’ಗೆ ಮಾಹಿತಿ ನೀಡಿದ್ದಾರೆ.

ಕೋಟ್​

ರೆಮ್​ಸಿವಿರ್ ಚುಚ್ಚುಮದ್ದು ಸೋಂಕಿತರಿಗೆಲ್ಲ ಕೊಡುವ ಅಗತ್ಯವಿಲ್ಲ. ಯಾವ ಸೋಂಕಿತರು ಗಂಭೀರ ಸ್ಥಿತಿ ತಲುಪುತ್ತಾರೋ ಅಂತಹವರಿಗೆ ಮಾತ್ರ ಅಗತ್ಯವಿದೆ. ಮೊದಲ ದಿನ 200 ಎಂಜಿ, ಆನಂತರ 5 ದಿನ 100 ಎಂಜಿಯಂತೆ 6 ಇನ್​ಜಕ್ಷನ್ ಕೊಡಲಾಗುತ್ತದೆ.

| ಡಾ.ನಾಗರಾಜ್

ನಿರ್ದೇಶಕ, ರಾಜೀವ್ ಗಾಂಧಿ ಎದೆ ರೋಗಗಳ ಆಸ್ಪತ್ರೆ

ರೆಮ್​ಸಿವಿರ್ ತೆಗೆದುಕೊಂಡ ತಕ್ಷಣ ಕೋವಿಡ್ ವಾಸಿ ಆಗುತ್ತದೆ ಎಂದಲ್ಲ. ಅಗತ್ಯ ಇಲ್ಲದವರೂ ಔಷಧ ಪಡೆಯುತ್ತಿರುವುದರಿಂದ ಬೇಡಿಕೆ ಹೆಚ್ಚಿದೆ.

| ಡಾ.ಗಿರಿಧರ್ ಬಾಬು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net