ಪ್ರಿಯವಾದ ಹೂಗಳನ್ನು ಅರ್ಪಿಸಿ ಪ್ರಾರ್ಥನೆ

shiva
ಸೊರಬದ ದಂಡಾವತಿ ನದಿಕಟ್ಟೆ ದಂಡೆಯಲ್ಲಿರುವ ಚಂದ್ರಮೌಳೇಶ್ವರ ದೇವಾಲಯದಲ್ಲಿ ಸೇರಿದ್ದ ಭಕ್ತರು.
Published on

ಸೊರಬ: ಪಟ್ಟಣ ಸೇರಿ ತಾಲೂಕಿನಾದ್ಯಂತ ಶಿವನ ದೇವಸ್ಥಾನಗಳಲ್ಲಿ ಶುಕ್ರವಾರ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.

ಪಟ್ಟಣದ ಶ್ರೀ ರಂಗನಾಥ ದೇವಸ್ಥಾನ ಸಮೀಪದ ಶ್ರೀ ಉಮಾಮಹೇಶ್ವರ ದೇವರ ಸನ್ನಿಧಿಯಲ್ಲಿ ಉಮಾಮಹೇಶ್ವರ ಭಾವೆ ಫೌಂಡೇಷನ್‌ನಿಂದ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆ ವಿಶೇಷ ಪೂಜೆ, ರುದ್ರಾಭಿಷೇಕ, ಪ್ರಸಾದ ವಿತರಣೆ ನಡೆಯಿತು.
ಶಿವನಿಗೆ ಬಿಲ್ವ ಪತ್ರೆ, ಕುಂಸಲ, ಮುತುಗದ, ಪಾರಿಜಾತ, ಎಕ್ಕದ, ಗಂಟೆ, ಕಣಗಾಲ ಹೂವುಗಳನ್ನು ಅರ್ಪಿಸಿ ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಶ್ರೀ ರಂಗನಾಥ ದೇವಾಲಯದಲ್ಲಿ ಬೆಳಗ್ಗೆಯಿಂದ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿತ್ತು.
ದಂಡಾವತಿ ನದಿ ದಂಡೆಯಲ್ಲಿರುವ ಶ್ರೀ ಚಂದ್ರಮೌಳೇಶ್ವರ ದೇವಾಲಯದಲ್ಲಿ ಬ್ರಾಹ್ಮಣ ಸಮಾಜದಿಂದ 32ನೇ ವರ್ಷದ ಮಹಾ ಶಿವರಾತ್ರಿ ಆಚರಣೆ ಹಮ್ಮಿಕೊಳ್ಳಲಾಗಿತ್ತು. ಅರ್ಚಕ ವೃಂದದಿಂದ ಶತರುದ್ರಾಭಿಷೇಕ ಹಾಗೂ ವಿಶೇಷ ಪೂಜೆ, ಮಧ್ಯಾಹ್ನ ಮಹಾ ಮಂಗಳಾರತಿ ಮಾಡಿ ತೀರ್ಥ ಪ್ರಸಾದ ವಿತರಿಸಲಾಯಿತು. ಚಂದ್ರಮೌಳೇಶ್ವರ ದೇವಾಲಯದಲ್ಲಿ ನೂರಾರು ಭಕ್ತರು ಸರತಿ ಸಾಲಿನಲ್ಲಿ ಬಂದು ವಿಶೇಷ ಪೂಜೆ ಸಲ್ಲಿಸಿದರು.
ಬಸ್ ನಿಲ್ದಾಣ ಸಮೀಪದ ಕಲ್ಲೇಶ್ವರ ದೇವಸ್ಥಾನ, ಜಡೆ ಸಂಸ್ಥಾನ ಮಠ ಹಾಗೂ ಹಿರೇಮಠ, ಗೊಗ್ಗೆಹಳ್ಳಿ ಮಠ, ಬಂಕಸಾಣದ ಹೊಳೆಲಿಂಗೇಶ್ವರ, ಉರುಗನಹಳ್ಳಿಯ ಕಾಳಿಂಗೇಶ್ವರ, ಕುಪ್ಪಗಡ್ಡೆ ರಾಮೇಶ್ವರ, ಕೋಟಿಪುರದ ಕೈಠಭೇಶ್ವರ ದೇವಸ್ಥಾನ ಸೇರಿದಂತೆ ವಿವಿಧ ಶಿವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net