Odisha Cyclone: ಒಡಿಶಾದಲ್ಲಿ 'ಅರ್ನಬ್' ಚಂಡಮಾರುತದ ಅಟ್ಟಹಾಸ: 300 ಗ್ರಾಮಗಳು ನೀರುಪಾಲು, ಏರ್‌ಲಿಫ್ಟ್ ಕಾರ್ಯಾಚರಣೆ!

Cyclone 'Arnab' in Odisha
ಒಡಿಶಾದಲ್ಲಿ 'ಅರ್ನಬ್' ಚಂಡಮಾರುತದ ಭೀಕರ ಆರ್ಭಟ (ಎಐ ಚಿತ್ರ)
Published on: 
Summary

ಒಡಿಶಾ ಕರಾವಳಿಗೆ ಅಪ್ಪಳಿಸಿದ 'ಅರ್ನಬ್' ಚಂಡಮಾರುತ

ಗಂಜಾಂನ ಪಾತ್ರಾಪುರದಲ್ಲಿ ದಾಖಲೆಯ 546 ಮಿಮೀ ಮಳೆ

ನದಿ ಪ್ರವಾಹಕ್ಕೆ ದ್ವೀಪಗಳಂತಾದ 300ಕ್ಕೂ ಹೆಚ್ಚು ಹಳ್ಳಿಗಳು

Odisha Floods: ಬಂಗಾಳ ಕೊಲ್ಲಿಯಲ್ಲಿ 'ಅರ್ನಬ್' ಚಂಡಮಾರುತದ ಆರ್ಭಟಕ್ಕೆ ಒಡಿಶಾ ರಾಜ್ಯದ ದಕ್ಷಿಣ ಭಾಗ ಕಂಗಾಲಾಗಿದೆ. ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸಿದ ಈ ಚಂಡಮಾರುತದ ಪ್ರಭಾವದಿಂದ ನೆರೆಯ ಗಂಜಾಂ ಮತ್ತು ಗಜಪತಿ ಜಿಲ್ಲೆಗಳಲ್ಲಿ ದಾಖಲೆ ಮಟ್ಟದ ಭಾರಿ ಮಳೆಯಾಗಿದ್ದು, ಭೀಕರ ಪ್ರವಾಹ ಉಂಟಾಗಿದೆ.

ಗಂಜಾಂ ಜಿಲ್ಲೆಯ ಪಾತ್ರಾಪುರ ಪ್ರದೇಶದಲ್ಲಿ ಕೇವಲ 24 ಗಂಟೆಗಳ ಅಂತರದಲ್ಲಿ ಬರೋಬ್ಬರಿ 546 ಮಿಮೀ ನಷ್ಟು ದಾಖಲೆ ಮಟ್ಟದ ಭಾರಿ ಮಳೆ ಸುರಿದಿದೆ. ಇದರ ಪರಿಣಾಮವಾಗಿ ಈ ಭಾಗದ ಪ್ರಮುಖ ನದಿಗಳಾದ ಋಷಿಕುಲ್ಯಾ ಮತ್ತು ಬಹುದಾ ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದ್ದು, ಸುತ್ತಲಿನ ತಗ್ಗು ಪ್ರದೇಶಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ.

ಗ್ರಾಮಗಳ ಸಂಪರ್ಕ ಸಂಪೂರ್ಣ ಕಡಿತ

ಭಾರಿ ಮಳೆಯ ಆರ್ಭಟದಿಂದಾಗಿ ಜಿಲ್ಲೆಯ ಸರಿಸುಮಾರು 300ಕ್ಕೂ ಹೆಚ್ಚು ಹಳ್ಳಿಗಳು ನೀರಲ್ಲಿ ಮುಳುಗಿ ಸಂಪೂರ್ಣ ದ್ವೀಪಗಳಂತಾಗಿವೆ. ಪ್ರವಾಹದ ರಭಸಕ್ಕೆ ಪ್ರಮುಖ ಹೆದ್ದಾರಿಗಳು ಕೊಚ್ಚಿಹೋಗಿದ್ದು, ಇದರಿಂದ ರಸ್ತೆ ಹಾಗೂ ವಿದ್ಯುತ್ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ

ರಕ್ಷಣೆ ಮತ್ತು ಸ್ಥಳಾಂತರ

ಪರಿಸ್ಥಿತಿ ಅತ್ಯಂತ ಭೀಕರವಾಗಿರುವುದರಿಂದ, ಒಡಿಶಾ ಸರ್ಕಾರ ಹಾಗೂ ಎನ್‌ಡಿಆರ್‌ಎಫ್ (NDRF) ತಂಡಗಳು ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಿಲುಕಿದ್ದ 43,000ಕ್ಕೂ ಅಧಿಕ ಜನರನ್ನು ಸುರಕ್ಷಿತವಾಗಿ ರಕ್ಷಿಸಿ ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ.

ನೀರು ನುಗ್ಗಿ ಸಂಪರ್ಕ ಕಡಿತಗೊಂಡಿರುವ ಹಳ್ಳಿಗಳಲ್ಲಿ ಸಿಲುಕಿರುವ ಜನರನ್ನು ಸುರಕ್ಷಿತ ಸ್ಥಳಕ್ಕೆ ತರಲು ಭಾರತೀಯ ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್‌ಗಳ ಮೂಲಕ 'ಏರ್‌ಲಿಫ್ಟ್' ಮಾಡಲು ಒಡಿಶಾ ಸರ್ಕಾರ ಕಾರ್ಯಾಚರಣೆ ಕೈಗೊಂಡಿದೆ.

ಇದನ್ನು ಓದಿ: ರೈಲು ಹತ್ತುವ ಮುನ್ನ ಮೊಬೈಲ್ ಫುಲ್ ಚಾರ್ಜ್ ಮಾಡಿಕೊಳ್ಳಿ! ಇಂದಿನಿಂದ ರಾತ್ರಿ ಚಾರ್ಜಿಂಗ್ ಪಾಯಿಂಟ್ಸ್ ಆಫ್! | Railways Charging Ban

ಬೆಳೆ ಹಾಗೂ ಆಸ್ತಿ ಪಾಸ್ತಿ ಹಾನಿ

ಭಾರಿ ಮಳೆಯಿಂದಾಗಿ ನೂರಾರು ಎಕರೆ ಪ್ರದೇಶದ ಭತ್ತದ ಗದ್ದೆಗಳು ಹಾಗೂ ಇನ್ನಿತರ ಬೆಳೆಗಳು ಸಂಪೂರ್ಣ ನೀರಿನಲ್ಲಿ ಮುಳುಗಡೆಯಾಗಿದ್ದು, ರೈತರಿಗೆ ಭಾರಿ ನಷ್ಟ ಉಂಟಾಗಿದೆ. ಬೆಳೆಹಾನಿಯ ಜತೆಗೆ ಆಸ್ತಿ ಪಾಸ್ತಿಗಳಿಗೂ ತೀವ್ರ ಹಾನಿಯಾಗಿದೆ ಎಂದು ವರದಿಯಾಗಿದೆ.