

ಭುವನೇಶ್ವರ: ಒಡಿಶಾದ ಉಪಮುಖ್ಯಮಂತ್ರಿ ಪ್ರವತಿ ಪರಿದಾ ಅವರು ರಾಜ್ಯ ಸರ್ಕಾರಿ ಮತ್ತು ಖಾಸಗಿ ವಲಯದ ಮಹಿಳಾ ಉದ್ಯೋಗಿಗಳಿಗೆ ಒಂದು ದಿನದ ವೇತನ ಸಹಿತ ಮುಟ್ಟಿನ ರಜೆಯನ್ನು ಗುರುವಾರ ಘೋಷಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಸ್ತುವಾರಿಯೂ ಆಗಿರುವ ಪರಿದಾ ಅವರು ಕಟಕ್ನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಈ ಘೋಷಣೆ ಮಾಡಿದ್ದಾರೆ.
ಮಹಿಳಾ ಉದ್ಯೋಗಿಗಳು ಮುಟ್ಟಾದ ಮೊದಲ ಅಥವಾ ಎರಡನೇ ದಿನದಂದು ವೇತನ ಸಹಿತ ರಜೆ ತೆಗೆದುಕೊಳ್ಳಬಹುದು. ಅದಗ್ಯೂ ರಜೆ ತೆಗೆದುಕೊಳ್ಳುವುದು ಅವರವ ಐಚ್ಛಿಗೆ ಬಿಟ್ಟಿದೆ ಎಂದರು.
ಕೀನ್ಯಾದ ನೈರೋಬಿಯಲ್ಲಿ ನಡೆದ ಯನೈಟೆಡ್ ನೇಷನ್ಸ್ ಸಿವಿಲ್ ಸೊಸೈಟಿ ಕಾನ್ಫರೆನ್ಸ್-2024ರಲ್ಲಿ ಭಾಗವಹಿಸಿದ್ದ ಒಡಿಶಾದ ಮಹಿಳಾ ಕಾರ್ಯಕರ್ತೆ ರಂಜಿತಾ ಪ್ರಿಯದರ್ಶಿನಿ ಅವರು ಮುಟ್ಟಾದ ದಿನಗಳಲ್ಲಿ ಮಹಿಳೆಯರಿಗೆ ವೇತನ ಸಹಿತ ರಜೆ ನೀಡುವ ಬಗ್ಗೆ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಎಲ್ಲ ಪ್ರತಿನಿಧಿಗಳ ಗಮನ ಸೆಳೆದಿದ್ದರು. ಪ್ರಪಂಚದಾದ್ಯಂತ ಮಹಿಳೆಯರು ತಮ್ಮ ಮುಟ್ಟಿನ ಸಮಯದಲ್ಲಿ ದೈಹಿಕ ನೋವಿನಿಂದ ಬಳಲುತ್ತಿದ್ದಾರೆ ಎಂದು ಅವರು ವಾದಿಸಿದರು.