ಇಂದು ಪೊಲೀಸ್ ಹುತಾತ್ಮರ ದಿನ; ವರ್ಷ ಪೂರ್ತಿ ಸಮಾಜಕ್ಕಾಗಿ ದುಡಿಯುವ ಹೆಮ್ಮೆ ಪೊಲೀಸ್ ಇಲಾಖೆಯದ್ದು...

Police Martyrs Day
Published on
ಮೌಲಾಲಿ ಕೆ. ಆಲಗೂರ ಬೋರಗಿ, ಹೆಡ್​​ಕಾನ್​ಸ್ಟೇಬಲ್, ಬೆಂಗಳೂರು

ಅಕ್ಟೋಬರ್ 21 ಪೊಲೀಸ್ ಹುತಾತ್ಮರ ದಿನ. ಈ ದಿನವಾದರೂ ನಾವು ಪೊಲೀಸರ ಕಾರ್ಯ ದಕ್ಷತೆ, ಪ್ರಾಮಾಣಿಕತೆ, ಕಾಯಕ ನಿಷ್ಠೆ, ಕರ್ತವ್ಯ ಪ್ರಜ್ಞೆ, ತ್ಯಾಗ, ಬಲಿದಾನ, ನಿಸ್ವಾರ್ಥ ಸೇವೆ ಸ್ಮರಿಸಲೇ ಬೇಕು. ನಿತ್ಯವೂ ನಮ್ಮ ಮತ್ತು ಸಮಾಜದ ಒಳಿತಿಗಾಗಿ ಸಂವಿಧಾನದ ಧ್ಯೇಯೋದ್ಧೇಶಗಳನ್ನು ಎತ್ತಿಹಿಡಿದು, ಕಾನೂನು ಸುವ್ಯವಸ್ಥೆ ಕಾಪಾಡುತ್ತಾ, ಸರ್ವ ಜನತೆಗೂ ಶಾಂತಿ ಬೋಧಿಸುತ್ತಾ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ನೊಂದವರ ಧ್ವನಿಯಾಗಿ ಸೇವೆಗೈಯ್ಯುತ್ತಾ, ವರ್ಷದ 365 ದಿನಗಳು, ದಿನದ 24 ಗಂಟೆಗಳ ಕಾಲ ನಿರಂತರ ಸಾರ್ವಜನಿಕರಿಗಾಯೇ ದುಡಿಯುವ ಏಕೈಕ ಸರ್ಕಾರಿ ಇಲಾಖೆ ಎಂದರೆ ಅದು ನಮ್ಮ ಪೊಲೀಸ್ ಇಲಾಖೆ.

ಪೊಲೀಸ್ ಇಲಾಖೆಯಿಲ್ಲದೆ ಸಮಾಜದಲ್ಲಿ ನೆಮ್ಮದಿಯ ಜೀವನ ನಡೆಸುತ್ತೇವೆ ಎಂದು ಊಹಿಸಲು ಯಾರಿಂದಲೂ ಸಾಧ್ಯವಿಲ್ಲ. ಸಮಾಜ ಇಂದು ದುಷ್ಟ, ಮಾನವೀಯತೆ ಮರೆತ ಮನುಷ್ಯರಿಂದ ತುಂಬಿದೆ. ಹಣ, ಆಸ್ತಿ, ಅಂತಸ್ತಿಗಾಗಿ ಏನು ಬೇಕಾದರೂ ಮಾಡುತ್ತಾರೆ. ಇಂತಹ ಮೃಗತ್ವದ ಜನರನ್ನು ಪುಂಡ, ಪೋಕರಿಗಳನ್ನು ಮಟ್ಟಹಾಕುವಲ್ಲಿ ಪೊಲೀಸರ ಪಾತ್ರವಿದೆ. ಅನ್ಯಾಯ, ಅಧರ್ಮ, ಕೊಲೆ, ಸುಲಿಗೆಯಂತಹ ಅಪರಾಧ ಕೃತ್ಯಗಳನ್ನು ಭೇದಿಸುತ್ತಾ, ಪೊಲೀಸ್ ಇಲಾಖೆ ಸಮಾಜದ ನೆಮ್ಮದಿ ಕಾಪಾಡುತ್ತಿದೆ.

ಜನರ ರಕ್ಷಣೆ ಮಾಡುವ ಆರಕ್ಷಕರ ಅಲ್ಪ ತಪ್ಪನ್ನೇ ಸಾಮಾಜಿಕ ಜಾಲತಾಣಗಳಲ್ಲಿ ಬಿಂಬಿಸಿ, ಟೀಕಿಸುವ ನಾವುಗಳು ಅವರ ಸತ್ಕಾರ್ಯ, ಸಹನೆ, ತಾಳ್ಮೆ, ಕಾಯಕ ನಿಷ್ಠೆ, ಸಮ ಪ್ರಜ್ಞೆ, ಕರ್ತವ್ಯ ಬದ್ದತೆ ಮರೆತು ಅವರನ್ನು ತೆಗಳುತ್ತಲೇ ಇರುತ್ತೇವೆ. ಹಬ್ಬ- ಹರಿದಿನ, ಜಾತ್ರೆ, ಹೋರಾಟ, ಪ್ರತಿಭಟನೆ, ಸಾವು - ನೋವು, ಅಹಿತಕರ ಘಟನೆಗಳು ಸಂಭವಿಸಿದಾಗಲೂ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿರುತ್ತಾರೆ.

ಬಿಸಿಲು, ಮಳೆ, ಚಳಿ, ಗಾಳಿ, ಹಗಲು-ರಾತ್ರಿ ಯಾವುದಕ್ಕೂ ಹೆದರದೆ ಜೊತೆಗೆ ನಿಲ್ಲುವ ಜೀವ ಅದು ನಮ್ಮ ಜನಸ್ನೇಹಿ ಪೊಲೀಸ್ ಇಲಾಖೆ. ಇಂತಹ ಶಕ್ತಿಯುತ, ಸಧೃಡ, ಸಮರ್ಥ ಪೊಲೀಸ್ ಇಲಾಖೆ ಇರುವುದರಿಂದಲೇ ಭಯೋತ್ಪಾದನೆ, ನಕ್ಸಲೈಟ್, ವೀರಪ್ಪನ್ ಹತ್ಯೆ, ಕೋಮು ಸಂಘರ್ಷ, ದರೋಡೆ, ಕಳ್ಳತನದಂತಹ ನೂರಾರು ಅಪರಾಧ ಪ್ರಕರಣಗಳನ್ನು ಬೇಧಿಸಲು ಸಾಧ್ಯವಾಗಿದೆ. ಕಾನೂನು ಬಾಹಿರ ಕೃತ್ಯಗಳನ್ನು ತಡೆಯಲು ಪೊಲೀಸರು ಪಟ್ಟ ಕಷ್ಟ, ನೋವು, ಯಾತನೆ ದೇವರೆ ಬಲ್ಲ. ಸಮಾಜದ ದುಷ್ಟ ಶಕ್ತಿಗಳನ್ನು ಮಟ್ಟ ಹಾಕಲು ಸಾವಿರಾರು ಜನ ಪೊಲೀಸರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ.

ಇತ್ತೀಚೆಗೆ ಬೆಂಗಳೂರಿನ ಶಿವಾಜಿನಗರದ ಪಿಎಸ್ಐಗಳಾದ ಅವಿನಾಶ್, ದೀಕ್ಷಿತ್, ಕಾನ್ಸ್‌ಟೇಬಲ್ ಅನಿಲ್ ಮುಳಿಕ ಒಳಗೊಂಡ ತಂಡ, ಗಾಂಜಾ ಮಾರಾಟ ಮತ್ತು ಸಾಗಾಣಿಕೆ ಮಾಡುತ್ತಿರುವ ಅಪರಾಧಿಗಳನ್ನು ಬಂಧಿಸಲು ತೆರಳಿದ್ದ ವೇಳೆ ಅಪಘಾತಕ್ಕಿಡಾಗಿ ಚಿಕ್ಕ ವಯಸ್ಸಿನಲ್ಲಿಯೇ ಪ್ರಾಣ ತ್ಯಾಗ ಮಾಡಿದ್ದಾರೆ.

ಕರೊನಾ ಸಮಯದಲ್ಲಿ ಇಡೀ ಜಗತ್ತೇ ಮನೆ ಒಳಗೆ ಕುಳಿತರೆ ಪೊಲೀಸರು ಮಾತ್ರ ಸಾವಿನ ಹಂಗು ತೊರೆದು ರಸ್ತೆಗಿಳಿದು ಸಮಾಜದ ರಕ್ಷಣೆ ಮಾಡಿದ್ದಾರೆ. ಕೋವಿಡ್ -19 ಸಮಯದಲ್ಲಿ ನೂರಾರು ಆರಕ್ಷಕರು ನಮ್ಮನ್ನು ಬದುಕಿಸಿ ಅವರು ತಮ್ಮ ಪ್ರಾಣ ಸಮರ್ಪಣೆ ಮಾಡಿದ್ದಾರೆ. ಇಂತಹ ಧೈರ್ಯವಂತಿಕೆ, ಎದೆಗಾರಿಕೆಯ ಪೊಲೀಸ್ ಇಲಾಖೆಗೆ ನಾವು ಇಂದು ಗೌರವ ಸಲ್ಲಿಸಲೇ ಬೇಕಲ್ಲವೇ.? ದಿನದ 24 ಗಂಟೆ ನಮಗಾಗಿ ನಮ್ಮ ಒಳಿತಿಗಾಗಿ, ಸಮಾಜದ ಕಲ್ಯಾಣಕ್ಕಾಗಿ, ಕಾನೂನಿನ ರಕ್ಷಕರಾಗಿ ಸೇವೆಗೈದು ನಮ್ಮನ್ನಗಲಿದ ವೀರ, ಧೀರ ಹೆಮ್ಮೆಯ ಪೊಲೀಸ್ ಯೋಧರೆ ನಿಮಗಿದು ವಂದನೆ, ಅಭಿನಂದನೆ, ಗೌರವದ ಮಹಾಸ್ಮರಣೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net