ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪ: ಪ್ರತಾಪ್ ಸಿಂಹ, ಪುನೀತ್ ಕೆರೆಹಳ್ಳಿ ವಿರುದ್ಧ ಎಫ್‌ಐಆರ್‌ ದಾಖಲು!

police
Published on

ಬೆಂಗಳೂರು: ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ವೇಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ, ಶಾಸಕ ಹರೀಶ್‌ ಪೂಂಜಾ, ಹಿಂದೂ ಸಂಘಟನೆ ಮುಖಂಡ ಪುನೀತ್ ಕೆರೆಹಳ್ಳಿ ಸೇರಿ ಹಲವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಬಸವೇಶ್ವರ ನಗರ ಪೊಲೀಸ್ ಠಾಣೆ ಮುಂದೆ ಪ್ರತಾಪ್‌ ಸಿಂಹ ಸೇರಿದಂತೆ ಹಲವು ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದ್ದರು.

ಠಾಣೆ ಮುಂದೆ ಗುಂಪುಗೂಡಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪುನೀತ್‌ ಕೆರೆಹಳ್ಳಿ A1, ಪ್ರತಾಪ್‌ ಸಿಂಹ A2, ಹರೀಶ್ ಪೂಂಜಾ A3 ಆರೋಪಿಗಳು ಎಂದು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ.

ಪುನೀತ್‌ ಕೆರೆಹಳ್ಳಿ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಪ್ರತಾಪ್‌ ಸಿಂಹ, ಶಾಸಕ ಹರೀಶ್‌ ಪೂಂಜಾ ನೇತೃತ್ವದಲ್ಲಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆ ಕಾರ್ಯಕರ್ತರು ಬಸವೇಶ್ವರ ನಗರ ಪೊಲೀಸ್‌ ಠಾಣೆ ಮುಂದೆ ಇಂದು ಪ್ರತಿಭಟನೆ ನಡೆಸಿದರು.

ಮಾಂಸ ಸಾಗಾಟಕ್ಕೆ ತಡೆ ಪ್ರಕರಣದಲ್ಲಿ ಬಂಧನವಾಗಿದ್ದ ಪುನೀತ್‌ ಕೆರೆಹಳ್ಳಿಗೆ ಲಾಕಪ್‌ನಲ್ಲಿ ಬಟ್ಟೆ ಬಿಚ್ಚಿಸಿ ಪೊಲೀಸರು ಹಿಂಸೆ ನೀಡಿದ್ದಾರೆ. ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ವೇಳೆ ಒತ್ತಾಯಿಸಿದ್ದರು.

ಈ ಕುರಿತು ಮಾಜಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ಕಾಟನ್​ಪೇಟೆ ಪೊಲೀಸ್ ಠಾಣೆಯಲ್ಲಿ ಪುನೀತ್ ಕೆರೆಹಳ್ಳಿ ಮೇಲೆ ಎಸಿಪಿ ಚಂದನ್ ಕುಮಾರ್​ ಅವರಿಂದ ಹಲ್ಲೆ ಕೇಸ್ ದಾಖಲಿಸಿದ್ದೇವೆ. ಪೊಲೀಸರೇ ಲೋಪ ಎಸಗಿದಾಗ ಅದನ್ನು ಪ್ರಶ್ನೆ ಮಾಡುವ ಹಕ್ಕು ಕೂಡ ಸಾರ್ವಜನಿಕರಿಗೆ ಇದೆ. ಇನ್ನು ಕೆಲವು ಪೊಲೀಸರು ಹೀರೋಗಳಾಗುವುದಕ್ಕೆ ಇತರ ಮಾಡುತ್ತಾರೆ. ಇಂತಹ ಘಟನೆ ಆಗಬಾರದು ಎಂದು ಮನವರಿಕೆ ಮಾಡಲು ಬಂದಿದ್ದೇವೆ. ಎಸಿಪಿ ಚಂದನ್ ಅವರ ಮೇಲೆ ನನಗೆ ಯಾವುದೇ ದ್ವೇಷ ಇಲ್ಲ ಎಂದು ಮಾತನಾಡಿದ್ದರು.

ಘಟನೆ ವೇಳೆ ಬಂದಂತಹ ಅಬ್ದುಲ್​ ರಜಾಕ್​ ಮೇಲೆ ಯಾವುದೇ ಪ್ರಕರಣ​ ದಾಖಲಿಸಲ್ಲ. ಆದರೆ, ಸಾರ್ವಜನಿಕರ ಹಿತದೃಷ್ಟಿಯಿಂದ ಅಲ್ಲಿಗೆ ಹೋದವರನ್ನ ಠಾಣೆಗೆ ಕರೆದುಕೊಂಡು ಬಂದು ಹಲ್ಲೆ ಮಾಡ್ತೀರಾ, ಅವರ ಬಟ್ಟೆ ಬಿಚ್ಚಿಸುತ್ತಿರಾ ಅಥವಾ ಇಲ್ಲಿ ಸಲಿಂಗ ಕಾಮಿಗಳು ಇದ್ದಾರಾ ಎಂದು ಪೊಲೀಸರ ವಿರುದ್ದ ಕಿಡಿಕಾರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net