ನೂರಾರು ಕೋಟಿ ರೂಪಾಯಿ ಬಂಡವಾಳ ಹೂಡಿ ತಯಾರಾದ ಸಿನಿಮಾಗಳು ಕೆಲವೊಮ್ಮೆ ಬಾಕ್ಸಾಫೀಸ್‌ನಲ್ಲಿ ಕಮಾಯಿ ಮಾಡದೆ ನೆಲಕಚ್ಚಿದ ಉದಾಹರಣೆಗಳಿವೆ. ಹಾಗೆಯೇ, ಕೆಲವೊಮ್ಮೆ ಕಡಿಮೆ ಬಜೆಟ್ ಚಿತ್ರಗಳು ನೂರಾರು ಕೋಟಿ ಗಳಿಕೆ ಮಾಡಿ, ಹುಬ್ಬೇರಿಸುವಂತೆ ಮಾಡಿದ್ದು ಇದೆ. ಅದಕ್ಕೆ ಇತ್ತೀಚಿನ ತಾಜಾ ಉದಾಹರಣೆ ಹಾಲಿವುಡ್‌ನ ಕರ್ರಿ ಬಾರ್ಕರ್ ನಿರ್ದೇಶನದ ‘ಅಬ್ಸೆಷನ್’. 8 ಕೋಟಿ ರೂ. ಬಂಡವಾಳದಲ್ಲಿ ನಿರ್ಮಾಣವಾಗಿರುವ ಈ ಚಿತ್ರ ವಿಶ್ವಾದ್ಯಂತ 421 ಕೋಟಿ ಗಳಿಕೆ ಮಾಡುವ ಮೂಲಕ ಬಾಕ್ಸಾಫೀಸ್‌ನಲ್ಲಿ ಮೈಲಿಗಲ್ಲು ಸಾಧಿಸಿದೆ. ಹಾಲಿವುಡ್ ಲೆಕ್ಕದಲ್ಲಿ ತೀರಾ ಕಡಿಮೆ ಬಜೆಟ್ ಚಿತ್ರವಿದು. ಆದರೆ ಬರೋಬ್ಬರಿ 50 ಪಟ್ಟು ಹೆಚ್ಚು ಕಲೆಕ್ಷನ್ ಮಾಡಿಕೊಳ್ಳುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ. ಸದ್ಯದಲ್ಲೇ 500 ಕೋಟಿ ರೂ. ಕ್ಲಬ್ ಸೇರುವ ಸನಿಹದಲ್ಲಿದೆ. ಮೇ 15ರಂದು ರಿಲೀಸ್ ಆದ ಈ ಸೂಪರ್ ನ್ಯಾಚುರಲ್ ಹಾರರ್ ಚಿತ್ರ ಕೇವಲ 11 ದಿನಗಳಲ್ಲಿ ಈ ಸಾಧನೆ ಮಾಡಿದೆ. ಆ ಮೂಲಕ ಕಂಟೆಂಟ್ ಚೆನ್ನಾಗಿದ್ದರೆ ಪ್ರೇಕ್ಷಕರು ಸಿನಿಮಾ ನೋಡುತ್ತಾರೆ ಎಂಬುದನ್ನು ‘ಅಬ್ಸೆಷನ್’ ಮತ್ತೊಮ್ಮೆ ಸಾಬೀತುಪಡಿಸಿದೆ. ಅಮೆರಿಕದಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಮೂರನೇ ಸಿನಿಮಾ ಇದಾಗಿದೆ. ಮೊದಲ ಎರಡು ಸ್ಥಾನದಲ್ಲಿ ಕ್ರಮವಾಗಿ ‘ಮೈಕಲ್’ ಮತ್ತು ‘ಡೆವಿಲ್ ವೇರ್ಸ್ ಪ್ರಾಡಾ 2’ ಚಿತ್ರಗಳಿವೆ. ಈ ಚಿತ್ರದಲ್ಲಿ ಮೈಕಲ್ ಜಾನ್ಸ್‌ಟನ್, ಇಂಡಿ ನವರೆಟ್ ತಾರಾಗಣದಲ್ಲಿದ್ದಾರೆ. ಥಿಯೇಟರ್‌ನಲ್ಲಿ ಬಿಡುಗಡೆಯಾಗುವ ಮುನ್ನ ಈ ಸಿನಿಮಾ ಟೊರೆಂಟೊ ಚಲನಚಿತ್ರೋತ್ಸವದಲ್ಲಿ ಪ್ರೀಮಿಯರ್ ಆಗಿ ಮೆಚ್ಚುಗೆ ಗಳಿಸಿತ್ತು. -ಏಜೆನ್ಸೀಸ್