

ಮುಂಬೈ: ದೇಶಾದ್ಯಂತ ಕೋವಿಡ್-19 ಬಾಧಿಸುತ್ತಿರುವ ಹಿನ್ನೆಲೆಯಲ್ಲಿ ಶಾಲೆ-ಕಾಲೇಜುಗಳನ್ನು ಅನಿರ್ದಿಷ್ಟಾವಧಿಗೆ ಬಂದ್ ಮಾಡಲಾಗಿದೆ. ಹೀಗಿರುವಾಗ ಕೆಲವು ಶಾಲೆಗಳು ತಮ್ಮ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷ ನಷ್ಟವಾಗದಂತೆ ತಡೆಯಲು ಆನ್ಲೈನ್ ಶಿಕ್ಷಣಕ್ಕೆ ವ್ಯವಸ್ಥೆ ಮಾಡುತ್ತಿವೆ. ಆದರೆ, ಇದು ಸುರಕ್ಷಿತವಲ್ಲ ಎಂಬುದು ಇದೀಗ ಸಾಬೀತಾಗಿದೆ.
ಆನ್ಲೈನ್ ಬೋಧನೆಯ ವ್ಯವಸ್ಥೆಯನ್ನು ಹ್ಯಾಕ್ ಮಾಡುತ್ತಿರುವ ಹ್ಯಾಕರ್ಗಳು ಅಶ್ಲೀಲ ವಿಡಿಯೋಗಳನ್ನು ಹರಿಬಿಟ್ಟು ವಿಕೃತಾನಂದ ಅನುಭವಿಸುತ್ತಿದ್ದಾರೆ. 9 ತರಗತಿಯ ಆನ್ಲೈನ್ ಬೋಧನೆ ಜಾಲಕ್ಕೆ ಲಾಗಿನ್ ಆದ 10ನೇ ತರಗತಿ ವಿದ್ಯಾರ್ಥಿಯೊಬ್ಬ, ಅದನ್ನು ಹ್ಯಾಕ್ ಮಾಡಿ ಅಶ್ಲೀಲ ವಿಡಿಯೋವನ್ನು ಹರಿಬಿಟ್ಟಿದ್ದಾನೆ. ಇದು ಮುಂಬೈನಲ್ಲಿ ನಡೆದಿರುವ ಘಟನೆಯಾಗಿದೆ.
ಮತ್ತೊಂದು ಪ್ರಕರಣದಲ್ಲಿ ಅಪರಿಚಿತನೊಬ್ಬ ಶಾಲೆಯೊಂದರ ಆನ್ಲೈನ್ ತರಗತಿ ವ್ಯವಸ್ಥೆಯನ್ನು ಹ್ಯಾಕ್ ಮಾಡಿ, ಅಶ್ಲೀಲ ಚಿತ್ರಗಳು, ವಿಡಿಯೋಗಳು ಮತ್ತು ಸಂದೇಶಗಳನ್ನು ಅಳವಡಿಸಿದ್ದ. ಇದರಿಂದಾಗಿ ಆ ಶಾಲೆಯವರು ಐದಾರು ದಿನ ತಮ್ಮ ಆನ್ಲೈನ್ ಬೋಧನೆಯನ್ನೇ ನಿಲ್ಲಿಸಿದ್ದರು ಎನ್ನಲಾಗಿದೆ.
ವಿದ್ಯಾರ್ಥಿಯ ಪಾಲಕರೊಬ್ಬರು ಆನ್ಲೈನ್ ತರಗತಿ ಆರಂಭದಲ್ಲಿ ಶಿಕ್ಷಕರು ಹಾಜರಾತಿ ತೆಗೆದುಕೊಳ್ಳಲು ಮುಂದಾಗುತ್ತಾರೆ. ಯಾರಾದರೂ ತಡವಾಗಿ ಜಾಯಿನ್ ಆಗಲು ಬಯಸಿದರೆ, ಅವರಿಗೆ ಅವಕಾಶ ನಿರಾಕರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಆನ್ಲೈನ್ ತರಗತಿಯ ಎಲ್ಲ ವಿಷಯಗಳ ಬೋಧನೆ ಬಯಸಿ ನನ್ನ ಪುತ್ರ ಹಿಂದಿನ ರಾತ್ರಿಯೇ ತನ್ನ ಲಾಗಿನ್ ಐಡಿಯನ್ನು ಎಲ್ಲ ವಿಷಯಗಳ ಶಿಕ್ಷಕರಿಗೆ ರವಾನಿಸಿದ್ದ. ಆದರೆ, ಆ ನೆಟ್ವರ್ಕ್ ಅನ್ನು ಹ್ಯಾಕ್ ಮಾಡಿರುವ ದುಷ್ಕರ್ಮಿಗಳು, ಪುತ್ರನ ಲಾಗಿನ್ ಬಳಸಿಕೊಂಡು ಅಶ್ಲೀಲ ದೃಶ್ಯಗಳನ್ನು ಅಳವಡಿಸಿರುವುದಾಗಿ ಮತ್ತೊಬ್ಬ ಪಾಲಕರು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಎಲ್ಲ ಶಾಲೆಗಳು ತಮ್ಮ ಆನ್ಲೈನ್ ಬೋಧನೆಯ ನೆಟ್ವರ್ಕ್ನ ಭದ್ರತೆಯನ್ನು ಹೆಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳುತ್ತಿದ್ದಾರೆ ಎನ್ನಲಾಗಿದೆ. ಆದರೆ ಚಾಪೆ ಕೆಳಗೆ ನುಸುಳಿದರೆ, ನಾವು ರಂಗೋಲಿ ಕೆಳಗೆ ನುಸುಳುತ್ತೇವೆ ಎಂದು ದುಷ್ಕರ್ಮಿಗಳು ನೆಟ್ವರ್ಕ್ ಹ್ಯಾಕ್ ಮಾಡುವ ಕೃತ್ಯವನ್ನು ಮುಂದುವರಿಸಿದ್ದಾರೆ ಎನ್ನಲಾಗಿದೆ.