

ಬೆಂಗಳೂರು: ತುಮಕೂರು ಸಬ್ ರಿಜಿಸ್ಟ್ರಾರ್ ರಾಧಮ್ಮ ವರ್ಗಾವಣೆಯನ್ನು ಹಿಂಪಡೆಯಬೇಕೆಂದು ಪ್ರತಿಪಕ್ಷ ಬಿಜೆಪಿ ಸರ್ಕಾರವನ್ನು ಒತ್ತಾಯ ಮಾಡಿದೆ.
ಸರ್ಕಾರ ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿರುವುದು ಅಪಾಯಕಾರಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಜ್ಯ ಜನತೆ ಹಿಟ್ಲರ್ ಸಿದ್ದರಾಮಯ್ಯ ಎಂಬ ಪ್ರಶ್ನಾರ್ಥಕ ನೋಟದಲ್ಲಿ ನೋಡುತ್ತಿರುವುದು ರಾಜ್ಯಕ್ಕೂ ಕಳಂಕ. ಸಿಎಂ ಪದವಿಗೂ ಅಪಚಾರ ಎಂದಿದೆ. ‘ಮಹಿಳಾ ಅಧಿಕಾರಿ ಸತ್ಯವನ್ನು ಹೇಳಿದ್ದಾರೆ. ಇವರೇನೋ ಬಾಯಿಬಿಟ್ಟು ಹೇಳಿದ್ದಾರೆ. ಬಾಯಿಬಿಡದ ಎಲ್ಲ ಅಧಿಕಾರಿಗಳ ಮನಸ್ಸಿನಲ್ಲಿ ಇರುವುದು ಕೂಡ ಇದೇ ವಿಚಾರ. ಬೆಲೆ ಏರಿಕೆ ಮಾಡಿಲ್ಲ, ಭ್ರಷ್ಟಾಚಾರ ಮಾಡಿಲ್ಲ ಎಂದು ಸಿದ್ದರಾಮಯ್ಯ ಎದೆತಟ್ಟಿ ಹೇಳಲಿ ನೋಡೋಣ’ ಎಂದು ಪ್ರಶ್ನೆ ಮಾಡಿದೆ.
10 ಕೆ.ಜಿ. ಅಕ್ಕಿ ಕೊಡುತ್ತೇವೆ ಎಂದು ಕನ್ನಡಿಗರಿಗೆ ಬೋಗಸ್ ಗ್ಯಾರಂಟಿಗಳ ಟೋಪಿ ಹಾಕಿ ಹತ್ತಾರು ಭ್ರಷ್ಟಾಚಾರಗಳ ಮೂಲಕ 10 ಸಾವಿರ ಕೋಟಿ ರೂ. ಹೆಚ್ಚಿನ ಹಗರಣಗಳು ನಡೆದಿವೆ. ಮುಡಾದಲ್ಲಿ ಸಿದ್ದರಾಮಯ್ಯ ಖುದ್ದಾಗಿ ಪ್ರಭಾವ ಬೀರಿ ತವ್ಮ ಪತ್ನಿ ಹೆಸರಿಗೆ ದುಬಾರಿ ಬೆಲೆಯ 14 ಸೈಟ್‌ಗಳನ್ನು ಪಡೆದುಕೊಂಡದ್ದು ಗೊತ್ತಿರುವ ವಿಷಯ. ಸಿಎಂ ಕುರ್ಚಿ ಉಳಿಸಿಕೊಳ್ಳುವುದಕ್ಕಾಗಿ ಸೈಟ್ ವಾಪಸ್ ಕೊಟ್ಟು ತಾವೊಬ್ಬ ನಿಷ್ಠಾವಂತ ಎಂದು ಬಿಂಬಿಸಿಕೊಳ್ಳಲು ವಿಫಲ ಪ್ರಯತ್ನ ಮಾಡುತ್ತಲೇ ಇದ್ದಾರೆ ಎಂದು ಬಿಜೆಪಿ ಆರೋಪಿಸಿದೆ.