ಕ್ರಿಮಿನಲ್ ಪ್ರಕರಣ ಹಿಂಪಡೆಯುವ ಸರ್ಕಾರದ ನಿರ್ಧಾರಕ್ಕೆ ಆಕ್ಷೇಪ

ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ಕೈಗೊಂಡಿರುವ ರಾಜ್ಯ ಸರ್ಕಾರದ ನಿರ್ಧಾರದ ಕುರಿತು ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಯು ತನ್ನ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಕುರಿತು ಸಮಿತಿಯು ಮುಖ್ಯಮಂತ್ರಿಗಳಿಗೆ ಸವಿಸ್ತಾರವಾದ ಮನವಿಯನ್ನು ದಕ್ಷಿಣ ಕನ್ನಡ ಚುನಾವಣಾ ತಹಶೀಲ್ದಾರ ದಯಾನಂದ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಯಿತು.
ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ಕೈಗೊಂಡಿರುವ ರಾಜ್ಯ ಸರ್ಕಾರದ ನಿರ್ಧಾರದ ಕುರಿತು ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಯು ತನ್ನ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಕುರಿತು ಸಮಿತಿಯು ಮುಖ್ಯಮಂತ್ರಿಗಳಿಗೆ ಸವಿಸ್ತಾರವಾದ ಮನವಿಯನ್ನು ದಕ್ಷಿಣ ಕನ್ನಡ ಚುನಾವಣಾ ತಹಶೀಲ್ದಾರ ದಯಾನಂದ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಯಿತು.
Published on
ಮಂಗಳೂರು: ರಾಜ್ಯ ಸಚಿವ ಸಂಪುಟವು ದಂಡ ಪ್ರಕ್ರಿಯಾ ಸಂಹಿತೆ ಕಲಂ 321ರ ಅಡಿಯಲ್ಲಿ 52 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ಕೈಗೊಂಡಿರುವ ನಿರ್ಧಾರದ ಕುರಿತು ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಯು ತನ್ನ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದೆ.
ಈ ಕುರಿತು ಸಮಿತಿಯು ಮುಖ್ಯಮಂತ್ರಿಗಳಿಗೆ ಸವಿಸ್ತಾರವಾದ ಮನವಿ ಸಿದ್ಧಪಡಿಸಿದ್ದು, ಅದನ್ನು ದಕ್ಷಿಣ ಕನ್ನಡ ಚುನಾವಣಾ ತಹಶೀಲ್ದಾರ ದಯಾನಂದ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಯಿತು.
ಗಲಭೆ, ಕಾನೂನುಬಾಹಿರ ಗುಂಪುಗೂಡಿಕೆ, ಸರ್ಕಾರಿ ಅಧಿಕಾರಿಗಳ ಮೇಲಿನ ಹಲ್ಲೆ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳ ಧ್ವಂಸದಂತಹ ಗಂಭೀರ ಸ್ವರೂಪದ ಪ್ರಕರಣಗಳನ್ನು ಹಿಂಪಡೆಯಲು ಮುಂದಾಗಿರುವುದು ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಆತಂಕಕಾರಿ ವಿಷಯವಾಗಿದೆ. ಪೊಲೀಸ್ ಇಲಾಖೆ ಹಾಗೂ ರಾಜ್ಯ ಕಾನೂನು ಅಭಿಯೋಜನಾ ಇಲಾಖೆಯ ಹಿರಿಯ ಅಧಿಕಾರಿಗಳ ಸ್ಪಷ್ಟ ಆಕ್ಷೇಪಗಳಿದ್ದಾಗಲೂ ಇಂತಹ ನಿರ್ಧಾರ ಕೈಗೊಳ್ಳುವುದು ಕಾರ್ಯನಿರ್ವಹಣಾ ಅಧಿಕಾರದ ದುರುಪಯೋಗವಾಗುತ್ತದೆ ಮತ್ತು ಇದು ಸಮಾಜಕ್ಕೆ ತಪ್ಪು ಸಂದೇಶವನ್ನು ರವಾನಿಸುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕ ಅಭಿಯೋಜಕರು ಸರ್ಕಾರದ ಕೇವಲ ಪ್ರತಿನಿಧಿಗಳಲ್ಲ, ಅವರು ನ್ಯಾಯಾಲಯದ ಅಧಿಕಾರಿಗಳಾಗಿದ್ದು ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳಬೇಕೆಂಬ ಮಾನ್ಯ ಸುಪ್ರೀಂ ಕೋರ್ಟ್ ಮತ್ತು ಕರ್ನಾಟಕ ಹೈಕೋರ್ಟ್‌ನ ವಿವಿಧ ತೀರ್ಪುಗಳನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ, 52 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯುವ ಸಚಿವ ಸಂಪುಟದ ನಿರ್ಧಾರವನ್ನು ತಕ್ಷಣವೇ ಜಾರಿಗೆ ತರದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು, ಸಾರ್ವಜನಿಕ ಅಭಿಯೋಜಕರ ಸ್ವತಂತ್ರ ಕಾರ್ಯನಿರ್ವಹಣೆಯ ಮೇಲೆ ಯಾವುದೇ ರಾಜಕೀಯ ಒತ್ತಡ ಹೇರಬಾರದು ಮತ್ತು ಕಾನೂನು ಜಾರಿಯ ಸಿಬ್ಬಂದಿಗಳ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಕಟ್ಟುನಿಟ್ಟಾಗಿ ಮುಂದುವರಿಸಬೇಕು ಎಂದು ಆಗ್ರಹಿಸಲಾಗಿದೆ.
ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ದಿನಕರ್ ಬಜಾಲ್, ಸುರೇಂದ್ರ ಜಪ್ಪಿನಮೊಗರು, ಹಿಂದೂ ಮಹಾಸಭಾದ ರಾಜ್ಯ ಅಧ್ಯಕ್ಷ ಲೋಹಿತ್ ಕುಮಾರ್ ಸುವರ್ಣ, ವಕೀಲರಾದದ ಜ್ಯೋತಿ ಗೌಡ ಹಾಗೂ ಹಿಂದುತ್ವವಾದಿಗಳಾದ ರಾಜಗೋಪಾಲ್, ಪ್ರಕಾಶ್ ಬಜಾಲ್, ಜಯಪ್ರಕಾಶ್ ಬಜಾಲ್, ಭಾಸ್ಕರ ಆಚಾರ್ಯ, ಭಾಸ್ಕರ ಕೊಳ್ನಾಡು, ವಿಠಲ್ ನಾಯಕ್, ಚಂದ್ರಕಾಂತ್ ಕಾಮತ್, ಗಿರಿಧರ್ ಪೆರ್ಜಿಲ, ಸಂತೋಷ್, ನಿತಿನ್ ಅತ್ತಾವರ, ಪ್ರಕಾಶ್ ಪ್ರಧಾನ್ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಉಪೇಂದ್ರ ಹಾಗೂ ರಾಜೇಶ್ ಆಚಾರ್ಯ ಸೇರಿದಂತೆ ಹಲವು ಹಿಂದುತ್ವನಿಷ್ಟರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net