ಎಂಆರ್‌ಪಿ ಪ್ರಕಟ ಮಾರ್ಗಸೂಚಿಗೆ ಆಕ್ಷೇಪ: ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

highcourt
Published on

ಬೆಂಗಳೂರು: ಜಿಎಸ್‌ಟಿ ದರ ಪರಿಷ್ಕರಣೆ ಹಿನ್ನೆಲೆಯಲ್ಲಿ ಉತ್ಪನ್ನಗಳ ತಯಾರಕರು ಮತ್ತು ಆಮದುಗಾರರು ದಾಸ್ತಾನು ಉಳಿದಿರುವ ವಸ್ತು ಮತ್ತು ಉತ್ಪನ್ನಗಳ ಮೇಲೆ ಪರಿಷ್ಕೃತ ಚಿಲ್ಲರೆ ಮಾರಾಟ ದರ (ಎಂಆರ್‌ಪಿ) ಕಡ್ಡಾಯವಾಗಿ ಪ್ರಕಟಿಸಬೇಕು ಎಂಬ ಮಾರ್ಗಸೂಚಿಗೆ ಏಕಪಕ್ಷೀಯವಾಗಿ ತಡೆ ನೀಡಲು ನಿರಾಕರಿಸಿದ ಹೈಕೋರ್ಟ್, ಅರ್ಜಿ ಸಂಬಂಧ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

ಈ ವಿಚಾರವಾಗಿ ಸೆ.9ರಂದು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಸರಬರಾಜು ಸಚಿವಾಲಯ, ಗ್ರಾಹಕ ವ್ಯವಹಾರಗಳು ತೂಕ ಮತ್ತು ಮಾಪನ ಇಲಾಖೆ ಹೊರಡಿಸಿರುವ ಮಾರ್ಗಸೂಚಿಗಳನ್ನು ರದ್ದುಪಡಿಸಬೇಕು ಎಂದು ಕೋರಿ ಅಡುಗೆ ಹಾಗೂ ಗೃಹಬಳಕೆ ಉತ್ಪನ್ನಗಳ ಕಂಪನಿ ಟಿಟಿಕೆ ಪ್ರೆಸ್ಟೀಜ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಬಿ.ಎಂ. ಶ್ಯಾಮ್‌ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿತ್ತು.

ಪ್ರತಿವಾದಿಯಾದ ಕೇಂದ್ರ ಸರ್ಕಾರದ ವಾದ ಆಲಿಸದೆ ಏಕಪಕ್ಷೀಯವಾಗಿ ಮಾರ್ಗಸೂಚಿಗಳಿಗೆ ತಡೆ ನೀಡುವುದಿಲ್ಲ ಎಂದು ನ್ಯಾಯಪೀಠ ಹೇಳಿತು. ಅಲ್ಲದೆ, ಕೇಂದ್ರ ಸರ್ಕಾರದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಸರಬರಾಜು ಸಚಿವಾಲಯ, ಗ್ರಾಹಕ ವ್ಯವಹಾರಗಳು ತೂಕ ಮತ್ತು ಮಾಪನ ಇಲಾಖೆ, ರಾಜ್ಯ ಸರ್ಕಾರದ ಆಹಾರ, ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ನಿಯಂತ್ರಕರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಸೆ.19ಕ್ಕೆ ಮುಂದೂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net