

ಮುಂಬೈ: ಭಾರತದಲ್ಲಿ ಎಐ(ಕೃತಕ ಬುದ್ಧಿಮತ್ತೆ)ಮೂಲಸೌಕರ್ಯ ಅಭಿವೃದ್ಧಿಪಡಿಸಲು ಎನ್ವಿಡಿಯಾ ಮತ್ತು ರಿಲಯನ್ಸ್ ನಡುವೆ ಒಪ್ಪಂದವಾಗಿದ್ದು, ದೇಶಕ್ಕೆ ಇದೊಂದು ಉತ್ತಮ ಅವಕಾಶ ಎಂದು ಎನ್ವಿಡಿಯಾ ಸಿಇಒ ಜೆನ್ಸನ್ ಹುವಾಂಗ್ ಹೇಳಿದ್ದಾರೆ.
ಎನ್ವಿಡಿಯಾ ಮತ್ತು ರಿಲಯನ್ಸ್ ಎಐ ಶೃಂಗಸಭೆ(NVIDIA AI Summit) 2024 ಜಿಯೋ ವರ್ಲ್ಡ್ ಕನ್ವೆಕ್ಷನ್ ಸೆಂಟರ್‌ನಲ್ಲಿ ಗುರುವಾರ ನಡೆದಿದ್ದು, ಎರಡೂ ಕಂಪನಿಗಳ ಒಪ್ಪಂದದ ನಂತರ ಮಾತನಾಡಿದ ಅವರು, ಭಾರತದ ಜನಸಂಖ್ಯೆಯ ಹೆಚ್ಚಿನ ಭಾಗವು ಕಂಪ್ಯೂಟರ್ ಎಂಜಿನಿಯರ್‌ಗಳನ್ನು ಒಳಗೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತದಲ್ಲಿ ಎಐ ಮೂಲಸೌಕರ್ಯವನ್ನು ಸಿದ್ಧಪಡಿಸಿದರೆ ಅದು ಭಾರತಕ್ಕೆ ಉತ್ತಮ ಅವಕಾಶವಾಗಲಿದೆ. ಅಮೆರಿಕ ಮತ್ತು ಚೀನಾ ಹೊರತುಪಡಿಸಿ, ಭಾರತವೂ ಡಿಜಿಟಲ್ ಸಂಪರ್ಕದ ಉತ್ತಮ ಮೂಲಸೌಕರ್ಯವನ್ನು ಹೊಂದಿದೆ. ಭಾರತದಲ್ಲಿ ಎಐ ಮೂಲಸೌಕರ್ಯವನ್ನು ಸಿದ್ಧಪಡಿಸಿದರೆ, ಒಂದು ವರ್ಷದೊಳಗೆ ಭಾರತದ ಕಂಪ್ಯೂಟರಿಂಗ್ ಸಾಮರ್ಥ್ಯ ಸುಮಾರು 20 ಪಟ್ಟು ಹೆಚ್ಚಾಗುತ್ತದೆ ಎಂದರು.
ಈ ಶೃಂಗಸಭೆಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಕೂಡ ಭಾಗವಹಿಸಿದ್ದರು. ಇವೆರಡೂ ಕಂಪನಿಗಳು ಎಐಗೆ ಸಂಬಂಧಿಸಿದಂತೆ ಹಲವು ನಿರ್ಧಾರಗಳನ್ನು ತೆಗೆದುಕೊಂಡಿವೆ. ಅದರಂತೆ ಎನ್ವಿಡಿಯಾ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಒಟ್ಟಾಗಿ ಭಾರತದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಮೂಲಸೌಕರ್ಯವನ್ನು ರಚಿಸಲಿವೆ.
ಎನ್ವಿಡಿಯಾ ವಿಶ್ವದ ಅತಿದೊಡ್ಡ ಸೆಮಿಕಂಡಕ್ಟರ್ ಕಂಪನಿಯಾಗಿದ್ದು, ಇದು ಮಾರುಕಟ್ಟೆ ಬಂಡವಾಳೀಕರಣದಲ್ಲಿ ಅಮೆರಿಕದ ಎರಡನೇ ಅತಿದೊಡ್ಡ ಕಂಪನಿಯಾಗಿದೆ.ಅದೇ ರೀತಿ ರಿಲಯನ್ಸ್ ಇಂಡಸ್ಟ್ರೀಸ್ ಭಾರತದ ಅತಿದೊಡ್ಡ ಕಂಪನಿಯಾಗಿದೆ.