ಹವಾಮಾನ ವೈಪರೀತ್ಯದಿಂದ ಅಡಕೆಗೆ ರೋಗ

farming
ಎನ್.ಆರ್.ಪುರ ತಾಲೂಕು ಗುಬ್ಬಿಗಾ ಗ್ರಾಮದಲ್ಲಿ ಅಡಕೆ ಹಾಗೂ ಕಾಳುಮೆಣಸು ಬೆಳೆಗಳ ಮಾಹಿತಿ ಕಾರ್ಯಕ್ರಮವನ್ನು ಗ್ರಾಪಂ ಅಧ್ಯಕ್ಷೆ ನಾಗರತ್ನಾ ಉದ್ಘಾಟಿಸಿದರು. ಸಂಜೀವ ಜಕಾತಿಮಠ, ಶಂಕರ್, ನವೀನ್, ದಿನೇಶ್, ತೀರ್ಥರಾಜ್, ಅನ್ನಪೂರ್ಣಾ ಇದ್ದರು.
Published on

ಎನ್.ಆರ್.ಪುರ: ಹವಾಮಾನ ವೈಪರೀತ್ಯದಿಂದ ಅಡಕೆ ಬೆಳೆಗೆ ವಿವಿಧ ರೋಗಗಳು ತಗುಲುತ್ತಿವೆ ಎಂದು ಶೃಂಗೇರಿ ತೋಟಗಾರಿಕೆ ಸಂಶೋಧನಾ ಕೇಂದ್ರದ ಸಸ್ಯ ರೋಗ ಶಾಸ್ತ್ರಜ್ಞ ಡಾ. ಸಂಜೀವ ಜಕಾತಿಮಠ ತಿಳಿಸಿದರು.

ಗುಬ್ಬಿಗಾ ಗ್ರಾಮದಲ್ಲಿ ಬುಧವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೈಮರ ವಲಯದ ಗುಬ್ಬಿಗಾ ಕಾರ್ಯಕ್ಷೇತ್ರದ ಆಶ್ರಯದಲ್ಲಿ ಆಯೋಜಿಸಿದ್ದ ಅಡಕೆ ಹಾಗೂ ಕಾಳುಮೆಣಸು ಬೆಳೆಗಳ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೆಲವು ರೋಗಗಳು ಶಿಲೀಂಧ್ರ, ಪೋಷಕಾಂಶಗಳ ಕೊರತೆಯಿಂದಲೂ ಬರುತ್ತವೆ. ರೈತರು ತೋಟಗಳನ್ನು ಸಾಧ್ಯವಾದಷ್ಟು ಸ್ವಚ್ಛವಾಗಿಡಬೇಕು. ಬಸಿ ಕಾಲುವೆ ತೆಗೆಯಬೇಕು. ಕಾಲಕಾಲಕ್ಕೆ ಮಣ್ಣು ಪರೀಕ್ಷೆ ಮಾಡಿಸಬೇಕು. ಜಮೀನಿಗೆ ಯಾವ ಗೊಬ್ಬರ ಹಾಗೂ ಎಷ್ಟು ಪ್ರಮಾಣದಲ್ಲಿ ನೀಡಬೇಕು ಎಂಬುದು ತಿಳಿಯುತ್ತದೆ. ಅಡಕೆ ತೋಟಗಳಿಗೆ ಕೊಳೆ ರೋಗ ಬಾರದಂತೆ ಬೋರ್ಡೋ ದ್ರಾವಣ ಸಿಂಪಡಿಸುವಾಗ ರಸ ಸಾರ ಇರುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ದ್ರಾವಣ ಸಿಂಪಡಣೆ ಮಾಡಿದರೂ ಪ್ರಯೋಜನವಾಗಲ್ಲ ಎಂದರು.
ಗುಬ್ಬಿಗಾ ಗ್ರಾಪಂ ಉಪಾಧ್ಯಕ್ಷ ಶಂಕರ್ ಮಾತನಾಡಿ, ರೈತರು ಅಡಕೆ ಬೆಳೆಯನ್ನು ಮಾತ್ರ ನಂಬಿಕೊಳ್ಳದೆ ಅಂತರ್ ಬೆಳೆಯಾದ ಕಾಳುಮೆಣಸು, ಏಲಕ್ಕಿ, ಜಾಯಿಕಾಯಿ ಬೆಳೆಗಳನ್ನೂ ಬೆಳೆಯಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗ್ರಾಪಂ ಅಧ್ಯಕ್ಷೆ ನಾಗರತ್ನಾ, ಪ್ರತಿಯೊಬ್ಬ ರೈತರು ಮಾಹಿತಿ ಪಡೆದು ಸಮಗ್ರ ಬೆಳೆ ಬೆಳೆಯೋಣ ಎಂದರು.
ತೋಟಗಾರಿಕೆ ಇಲಾಖೆ ಅಧಿಕಾರಿ ನವೀನ್ ಮಾತನಾಡಿ, ತೋಟಗಾರಿಕೆ ಇಲಾಖೆಯಲ್ಲಿ ಟ್ರೈಕೋಡರ್ಮ, ಸುಡೋಮಾನಸ್, ಅಡಕೆ ಎಲೆಚುಕ್ಕೆ ರೋಗಕ್ಕೆ ಔಷಧ, ಹನಿ ನೀರಾವರಿಗೆ ಸಹಾಯ ಧನ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಧರ್ಮಸ್ಥಳ ಯೋಜನೆ ಕೈಮರ ವಲಯ ಮೇಲ್ವಿಚಾರಕ ತೀರ್ಥರಾಜ್, ಸೇವಾ ಪ್ರತಿನಿಧಿಗಳಾದ ಅನ್ನಪೂರ್ಣಾ, ಶೈನಿ, ರೈತ ಮಹಿಳೆ ಸಾರಮ್ಮ, ವಿಪತ್ತು ನಿರ್ವಹಣಾ ತಂಡದ ಕ್ಯಾಪ್ಟನ್ ಸಾಜು, ರಮಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net