

ಆದರೆ ಈ ಪ್ರಕ್ರಿಯೆಯಲ್ಲಿ ಸಂತೋಷದ ಕೊಂಡಿಯು ಎಲ್ಲೋ ಕಳಚಿಹೋಗುತ್ತದೆ. ಅಂತರಾಳದ ಗುರಿ ಎಲ್ಲೋ ಮಾಸಿಹೋಗುತ್ತದೆ. ಒಂದು ಮಗುವಿನ ಮುಗುಳ್ನಗೆಯನ್ನು ನೋಡಿ. ಎಷ್ಟು ಸುಂದರವಾಗಿರುತ್ತದೆ! ಅದರಲ್ಲಿ ಎಷ್ಟು ಮುಗ್ಧತೆ, ಸಂತೋಷ, ಸ್ನೇಹಶೀಲತೆ ಇರುತ್ತದೆ.
ಆದರೆ ಅದೇ ಮಗು ಬೆಳೆದು ಶಾಲೆಗೆ, ಕಾಲೇಜಿಗೆ ಹೋದಾಗ ಅದೇ ಮಗುವಿನ ಮುಖ ನೋಡಿ! ಅವರಲ್ಲಿ ಅದೇ ಮುಗ್ಧತೆ, ಮುಗುಳ್ನಗು, ಸಂತೋಷ, ಪ್ರೀತಿ ಇರುತ್ತದೆಯೆ? . ಇದರ ಬಗ್ಗೆ ದೀರ್ಘವಾಗಿ ಆಲೋಚಿಸಬೇಕಾಗಿದೆ. ದೊಡ್ಡವರಾದರೂ ಆ ಗುಣಗಳನ್ನು ಹೇಗೆ ಉಳಿಸಬೇಕೆಂದು ಆಲೋಚಿಸಬೇಕಾಗಿದೆ. ಇದನ್ನು ನಾವು ಸಾಧಿಸಬಲ್ಲೆವಾದರೆ, ಏನೋ ಅದ್ಭುತವಾದುದನ್ನು ಸಾಧಿಸಿದಂತೆ. ಮುಗ್ಧತೆಯು ಒಂದು ರೀತಿಯ ಸೌಂದರ್ಯವನ್ನು ತರುತ್ತದೆ.
ಓರ್ವ ಅಜ್ಞಾನಿಯು ಮುಗ್ದನಾಗಿರಬಹುದಾದರೂ, ಆ ಮುಗ್ಧತೆಗೆ ಅಷ್ಟೊಂದು ಬೆಲೆ ಇರುವುದಿಲ್ಲ. ಹಾಗೆಯೇ ಓರ್ವ ಬುದ್ಧಿವಂತ ವ್ಯಕ್ತಿ ಕುಟಿಲನಾದರೆ, ಆ ಬುದ್ಧಿವಂತಿಕೆಗೂ ಬೆಲೆಯಿರುವುದಿಲ್ಲ. ನಿಜವಾಗಿ ಬೇಕಾದುದು ಮುಗ್ಧತೆಯನ್ನು ನಾಶಮಾಡದಂತಹ ಬುದ್ಧಿವಂತಿಕೆ. ಪ್ರತಿಯೊಂದು ಮಗುವೂ ಸ್ನೇಹಶೀಲವಾಗಿ ಇರುವಂತಹ ಮೌಲ್ಯವನ್ನು ನಾವು ಶಿಕ್ಷಣದಲ್ಲಿ ತರಬಹುದೆ? ಶಾಲೆಯಲ್ಲಿ, ಕಾಲೇಜಿನಲ್ಲಿ, ನಿಮ್ಮ ಸ್ನೇಹಿತರೆಷ್ಟು ಮಂದಿ? ಎಂದು ಕೇಳಿದರೆ ತಮ್ಮ ಬೆರಳುಗಳನ್ನು ಎಣಿಸಿ, ಎರಡು, ಮೂರು, ನಾಲ್ಕು, ಐದು ಎನ್ನುತ್ತಾರೆ. ಇವರಿಗೆಲ್ಲಾ ನಮ್ಮ ಒಂದು ಪ್ರಶ್ನೆ.
ನಿಮ್ಮ ಕಕ್ಷೆಯಲ್ಲಿರುವ 40-50 ಮಕ್ಕಳೊಡನೆಯೇ ನಿಮಗೆ ಸ್ನೇಹದಿಂದಿರಲು ಸಾಧ್ಯವಾಗದಿದ್ದರೆ, ಈ ಭೂಮಿಯ ಮೇಲಿರುವ ಆರು ಬಿಲಿಯನ್ ಜನರೊಡನೆ ಹೇಗೆ ಸ್ನೇಹದಿಂದ ಇರುವಿರಿ? ಶಾಲೆಯಿಂದ, ಕಾಲೇಜಿನಿಂದ ಹೊರ ಬಂದ ಮೇಲೆ ಹೇಗೆ ಸ್ನೇಹಶೀಲರಾಗಿರುತ್ತೀರಿ? ಸ್ನೇಹಿತರನ್ನು ಮಾಡಿಕೊಳ್ಳುವ ಮೂಲಪ್ರವೃತ್ತಿ ಎಲ್ಲಿಯೋ ಕಳೆದುಹೋಗಿದೆ. ಸ್ವಾರ್ಥಮಯವಾದ ಶಿಕ್ಷಣದ ಬೆನ್ನತ್ತಿ ಸ್ನೇಹಶೀಲತೆಯನ್ನು ಮರೆತಿದ್ದೇವೆ.
ನಮ್ಮ ಅಭಿಪ್ರಾಯದಲ್ಲಿ, ಯಶಸ್ಸಿನ ಚಿಹ್ನೆ ಎಂದರೆ ಮುಗುಳ್ನಗು ಮತ್ತು ಸ್ನೇಹಶೀಲತೆ, ಕರುಣೆ ಮತ್ತು ಇನ್ನೊಬ್ಬರಿಗೆ ಸೇವೆ ಮಾಡುವ ಮನಸ್ಥಿತಿ. ಎಲ್ಲಾ ಶಿಕ್ಷಣದ ತಜ್ಞರೂ, ನಮಗೆ ಸಹಜವಾಗಿಯೇ ನೀಡಲಾಗಿರುವ ಮೌಲ್ಯಗಳನ್ನು, ಸದ್ಗುಣಗಳನ್ನು ಹೇಗೆ ಪೋಷಿಸುವುದು ಎಂದು ಆಲೋಚಿಸಬೇಕಾಗಿದೆ. ಪ್ರತಿಯೊಂದು ಆತ್ಮದಲ್ಲೂ ಮೌಲ್ಯವಿದೆ. ಒಂದು ಅಣುವಿನ ವಿನ್ಯಾಸ ಬಹಳ ಆಸಕ್ತಿಕರವಾಗಿರುತ್ತದೆ. ಮಾನವ ಮನಸ್ಸೂ ಹಾಗೆಯೇ ಇರುತ್ತದೆ.
ಋಣಾತ್ಮಕ ಕಣಗಳು ಬಾಹ್ಯದಲ್ಲಿದ್ದರೆ, ಧನಾತ್ಮಕವಾದ ಕಣಗಳು ಕೇಂದ್ರದಲ್ಲಿರುತ್ತವೆ. ಎಲ್ಲಾ ನಕಾರಾತ್ಮಕತೆಗಳು, ದುರ್ಗಣಗಳು, ಚಟಗಳು ಮಾನವರಲ್ಲಿ ಹೊರಗೆ ಮಾತ್ರ ಇರುತ್ತವೆ. ಆದರೆ ಪ್ರತಿಯೊಂದು ವ್ಯಕ್ತಿಯ ಅಂತರಾಳದಲ್ಲೂ ಸಕಾರಾತ್ಮಕತೆಯಿದೆ, ಸದ್ಗುಣಗಳಿವೆ. ಆದ್ದರಿಂದ, ಏನನ್ನೋ ಮಾಡಿ ಸದ್ಗುಣಗಳನ್ನು ಎಲ್ಲಿಂದಲೋ ತರಬೇಕಿಲ್ಲ. ಈಗಾಗಲೇ ಇರುವ ಸದ್ಗುಣಗಳನ್ನು ಪೋಷಿಸಬೇಕಷ್ಟೆ. ಎಲ್ಲಾ ಯುವಕರಲ್ಲಿರುವ ಸದ್ಗುಣಗಳನ್ನು ಪೋಷಿಸಲು ಯಾವ ಮಾರ್ಗಗಳನ್ನು ಅಳವಡಿಸಿಕೊಳ್ಳಬೇಕೆಂದು ಎಲ್ಲಾ ಬುದ್ಧಿವಂತರೂ ಆಲೋಚಿಸಬೇಕು.
ಯುವಕರು ಮಾನವೀಯ ಮೌಲ್ಯಗಳಿಂದ ಹೊಳೆಯಬೇಕು. ಕಾಲೇಜುಗಳಲ್ಲಿ ಗುಂಡಿನ ದಾಳಿ ನಡೆಯುತ್ತದೆಂದು ಕೇಳಲು ವೇದನೆಯಾಗುತ್ತದೆ. ಶಾಲಾ ಆವರಣಗಳಲ್ಲೂ ಅಪರಾಧಗಳು ನಡೆಯುತ್ತವೆ. ಕೆಲವು ದಶಕಗಳ ಹಿಂದೆ ಇದರ ಬಗ್ಗೆ ಯಾರೂ ಕೇಳಿರಲಿಲ್ಲ. ಶಿಕ್ಷಣಕ್ಕೆ ಗೌರವ, ಸನ್ಮಾನ ಕೊಡಲಾಗುತ್ತಿತ್ತು. ಇತ್ತೀಚಿನ ಕೆಲವು ವರ್ಷಗಳಲ್ಲಿ ಇದು ನಶಿಸಿ ಹೋಗಿದೆ. ಎಲ್ಲಾ ಹಿರಿಯರೂ ಒಂದಾಗಿ ಕುಳಿತು ಈ ಮೌಲ್ಯಗಳನ್ನು ಈಗ ಪುನುರುಜ್ಜೀವನಗೊಳಿಸಬೇಕಾಗಿದೆ.
ವಿಶಾಲವಾದ ದೃಷ್ಟಿಕೋನವನ್ನು ನೀಡುವಂತಹ ಶಿಕ್ಷಣ ಮತ್ತು ಆ ರೀತಿಯ ಶಿಕ್ಷಣದಿಂದ ಬೆಚ್ಚನೆಯ ಹೃದಯಗಳುಳ್ಳ ವ್ಯಕ್ತಿಗಳು ಹೊರಬರಬೇಕು. ಸುಶಿಕ್ಷಿತ ವ್ಯಕ್ತಿಯೆಂದರೆ ಸ್ನೇಹಶೀಲರಾದ, ಕರುಣಾಮಯಿಗಳಾದ, ಎಲ್ಲರೊಂದಿಗೂ ಏನೂ ಆಗಿರದೆ ವ್ಯವಹರಿಸಬಲ್ಲ, ಬೆಚ್ಚನೆಯ ಹೃದಯದ ವ್ಯಕ್ತಿಯಾಗಿರಬೇಕು. ಆ ಬೆಚ್ಚನೆಯ ಭಾವವನ್ನು ಪೋಷಿಸಬೇಕು. ವೈವಿಧ್ಯವನ್ನು ಇಷ್ಟಪಡದ, ಅದರಲ್ಲೂ ಧಾರ್ವಿುಕ ವೈವಿಧ್ಯವನ್ನು ಇಷ್ಟಪಡದ ಜನರು ಪ್ರಪಂಚದ ಎಲ್ಲೆಡೆಯೂ ಇದ್ದಾರೆ. ಒಂದು ರೀತಿಯ ನಿಯಮಗಳನ್ನು ಪಾಲಿಸಿದವರು ಮಾತ್ರ ಸ್ವರ್ಗಕ್ಕೆ ಹೋಗುತ್ತಾರೆ, ಇತರರೆಲ್ಲರೂ ನರಕಕ್ಕೆ ಹೋಗುತ್ತಾರೆ ಎಂದು ನಂಬುವ ಜನರಿದ್ದಾರೆ.
ಈ ರೀತಿಯಾಗಿ ಧರ್ಮವನ್ನು ತಪ್ಪಾಗಿ ಅರ್ಥ ಮಾಡಿಕೊಂಡಿರುವುದರಿಂದ ಜಗತ್ತಿನಲ್ಲಿ ಭಯೋತ್ಪಾದನೆಯಿದೆ. ಶಾಲೆಗಳಲ್ಲಿ, ಕಾಲೇಜುಗಳಲ್ಲಿ ಭಯೋತ್ಪಾದನೆಯ ಪೋಷಣೆಯಾಗುತ್ತಿದೆ. ಭಯೋತ್ಪಾದನೆಯ ಬೇರುಗಳನ್ನು ಶಾಲಾ ಕಾಲೇಜುಗಳಲ್ಲಿ ಕಾಣಬಹುದು. ಯಾವುದೆಲ್ಲಾ ಸರಿ ಮತ್ತು ಇಡೀ ಜಗತ್ತನ್ನು ಸರಿಯಾದ ರೀತಿಯಲ್ಲಿ ಎಂದರೆ ಅವರು ಸರಿ ಎಂದುಕೊಂಡಿರುವ ರೀತಿಯಲ್ಲಿ ಹೇಗೆ ನಡೆಸಬೇಕೆಂದು ಯೋಚಿಸುತ್ತಿರುತ್ತಾರೆ. ಇಂತಹವರಿಗೆ ನಮ್ಮ ಒಂದು ಸರಳ ಪ್ರಶ್ನೆ. ಜಗತ್ತಿನ ಎಲ್ಲಾ ಭಾಗಗಳಿಂದಲೂ ನೀವು ಆಹಾರವನ್ನು ಸ್ವೀಕರಿಸುವುದಿಲ್ಲವೆ? ಸಂಗೀತವನ್ನು, ತಂತ್ರಜ್ಞಾನವನ್ನು ಜಗತ್ತಿನ ಎಲ್ಲಾ ಭಾಗಗಳಿಂದಲೂ ಸ್ವೀಕರಿಸುವಾಗ, ಜ್ಞಾನವನ್ನೇಕೆ ಸ್ವೀಕರಿಸಬಾರದು? ತೆರೆದ ಮನಸ್ಸನ್ನೇಕೆ ಹೊಂದಬಾರದು?
ಬಹು ಸಾಂಸ್ಕೃತಿಕ ಶಿಕ್ಷಣವು ಮಾತ್ರ ಎಲ್ಲರ ಕಣ್ತೆರೆಸಬಲ್ಲದು. ಮಾನವೀಯ ಮೌಲ್ಯಗಳ, ವಿಶಾಲ ದೃಷ್ಟಿಕೋನದ ಜ್ಞಾನವನ್ನು ಹೇಗೆ ಹರಡಬೇಕೆಂದು ಎಲ್ಲಾ ಪ್ರಜ್ಞಾವಂತರೂ ಆಲೋಚಿಸಿ. ಮಕ್ಕಳನ್ನು ಬೆಳೆಸುವಾಗ ಇದೇ ನಮ್ಮ ಗುರಿಯಾಗಿರಬೇಕು.(ಪ್ರತಿಕ್ರಿಯಿಸಿ: instagram@gurudev.kannada )