ನಿದ್ರೆ ಬರುತ್ತಿಲ್ಲ ಎಂದು ಬೇಸತ್ತು ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ!

Insomnia 1
ಸಾಂದರ್ಭಿಕ ಚಿತ್ರ
Published on

ಭುವನೇಶ್ವರ: ಯಾರ್ಯಾರೋ ಏನೇನೋ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಕೇಳಿರುತ್ತೀರಿ, ಕಂಡಿರುತ್ತೀರಿ. ಆದರೆ ಇದು ಬಹುಶಃ ಅತ್ಯಪರೂಪದ ಪ್ರಕರಣ. ಇಲ್ಲೊಬ್ಬಳು ನರ್ಸಿಂಗ್ ವಿದ್ಯಾರ್ಥಿನಿ ನಿದ್ರೆ ಬರುತ್ತಿಲ್ಲ ಎಂದು ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

19 ವರ್ಷದ ಈ ಯುವತಿ ತಾನು ನೆಲೆಸಿದ್ದ ಹಾಸ್ಟೆಲ್​ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಒಡಿಶಾದ ಬೊಲಂಗಿರ್ ಜಿಲ್ಲೆಯ ಜಮುಕೊಲಿ ಎಂಬಲ್ಲಿರುವ ಖಾಸಗಿ ಹಾಸ್ಟೆಲ್​ನಲ್ಲಿ ಈ ಪ್ರಕರಣ ನಡೆದಿದೆ. ಭಾನುವಾರ ರಾತ್ರಿ ಹಾಸ್ಟೆಲ್​​ ರೂಮ್​ನಲ್ಲಿನ ಸೀಲಿಂಗ್ ಫ್ಯಾನ್​ಗೆ ಈಕೆ ನೇಣು ಬಿಗಿದುಕೊಂಡಿದ್ದಳು.

ಕಳೆದ ಕೆಲವು ದಿನಗಳಿಂದ ಸರಿಯಾಗಿ ನಿದ್ದೆ ಬರುತ್ತಿಲ್ಲ. ಅದಕ್ಕಾಗಿ ಸಾಯಲು ನಿರ್ಧರಿಸಿದ್ದಾಗಿ ಬರೆದಿದ್ದ ಡೆತ್​ನೋಟ್​ ರೂಮ್​ನಲ್ಲಿ ಸಿಕ್ಕಿದೆ. ನನ್ನ ಸಾವಿಗೆ ಬೇರೆ ಯಾರೂ ಕಾರಣರಲ್ಲ ಎಂದು ಹೇಳಿರುವ ಈಕೆ, ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಕ್ಕೆ ಮನೆಯವರು ಹಾಗೂ ಸ್ನೇಹಿತರ ಕ್ಷಮೆಯನ್ನೂ ಕೋರಿದ್ದಾಳೆ. ಫೊರೆನ್ಸಿಕ್ ಪರಿಣತರು ಕೈಬರಹವನ್ನು ಪರಿಶೀಲಿಸಿದ್ದು, ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈಕೆ ಎಲ್ಲರೂ ನಿದ್ರಿಸುತ್ತಿರುವಾಗ ರಾತ್ರಿ ಹಾಸ್ಟೆಲ್​ನಲ್ಲಿ ಓಡಾಡುತ್ತಿದ್ದಳು. ನಿದ್ರೆ ಬರದ ಕಾರಣಕ್ಕೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಈಕೆಯನ್ನು ಮನೆಗೆ ಕರೆದೊಯ್ಯುವಂತೆ ಪಾಲಕರಿಗೆ ಶನಿವಾರವೇ ತಿಳಿಸಲಾಗಿತ್ತು ಎಂದು ಹಾಸ್ಟೆಲ್​ ನಿರ್ವಾಹಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net