

ಗುಂಡ್ಲುಪೇಟೆ: ಯುವಜನತೆ ಕೃಷಿಯಿಂದ ವಿಮುಖರಾಗುತ್ತಿರುವ ಸಂದರ್ಭದಲ್ಲಿ ತಾಲೂಕಿನ ಬಲಚವಾಡಿ ಗ್ರಾಮದ ಯುವಕನೊಬ್ಬ ಅಂತಾರಾಷ್ಟ್ರೀಯ ಕಂಪನಿಯಲ್ಲಿ ಕೈತುಂಬ ಸಂಬಳ ಬರುತ್ತಿದ್ದ ಹುದ್ದೆ ಬಿಟ್ಟು ಸಾವಯವ ಕೃಷಿಯೊಂದಿಗೆ ನರ್ಸರಿ ಆರಂಭಿಸಿ ರೈತರಿಗೆ ಗುಣಮಟ್ಟದ ಸಸಿಗಳನ್ನು ಪೂರೈಸುತ್ತಿದ್ದಾರೆ.
ತೆರಕಣಾಂಬಿ ಹೋಬಳಿ ಬಲಚವಾಡಿ ಗ್ರಾಮದ ಮಹೇಂದ್ರ ತಮ್ಮ ಜಮೀನಿನಲ್ಲಿ ಸಾವಯವ ಪದ್ಧತಿ ಅನುಸರಿಸಿ ಅರಿಶಿಣ, ಕೋಸು, ಬಾಳೆ ಬೆಳೆಯುತ್ತಿದ್ದು, ರೈತರಿಗೆ ಗುಣಮಟ್ಟದ ಸಸಿಗಳು ದೊರಕುವಂತೆ ಮಾಡಲು ನರ್ಸರಿ ಆರಂಭಿಸಿ ನೆರೆಯ ತಾಲೂಕುಗಳ ರೈತರಿಗೂ ಅವರವರ ಬೇಡಿಕೆಗನುಸಾರ ಸಸಿಗಳನ್ನು ಬೆಳೆಸಿ ಸರಬರಾಜು ಮಾಡುತ್ತಿದ್ದಾರೆ.
ಐಟಿಐ ನಂತರ ಕರೆಸ್ಪಾಂಡೆನ್ಸ್‌ನಲ್ಲಿ ಬಿ.ಟೆಕ್ ಪದವಿ ಪಡೆದಿರುವ ಮಹೇಂದ್ರ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು. ಕಂಪನಿಯು ಬೇರೆಡೆ ಸ್ಥಳಾಂತರವಾಗುತ್ತಿದ್ದ ಹಿನ್ನೆಲೆಯಲ್ಲಿ ಏಳು ವರ್ಷಗಳ ಹಿಂದೆ ಗ್ರಾಮಕ್ಕೆ ವಾಪಸಾಗಿ ಸಾವಯವ ಪದ್ಧತಿಯಲ್ಲಿ ಕೃಷಿ ಆರಂಭಿಸಿದರು. ನರ್ಸರಿಗಳಲ್ಲಿ ರೈತರಿಗೆ ಆಗುತ್ತಿದ್ದ ಮೋಸದಿಂದ ಬೇಸತ್ತು ಉತ್ತಮ ಸಸಿಗಳನ್ನು ಕೊಡುವ ಸಲುವಾಗಿ ತಾವೇ ತಮ್ಮ ಜಮೀನಿನಲ್ಲಿ ನರ್ಸರಿ ಆರಂಭಿಸಿ ಗುಣಮಟ್ಟದ ಬೀಜ ಬಳಸಿ ಸಸಿ ಉತ್ಪಾದನೆ ಕೈಗೊಂಡು ರೈತರಿಗೆ ಪೂರೈಸುತ್ತಿದ್ದಾರೆ.
ಒಮ್ಮೆ ಇವರಲ್ಲಿ ಸಸಿ ಖರೀದಿಸಿದ ರೈತರು ಉತ್ತಮ ಫಸಲು ಕಂಡಿದ್ದರಿಂದ ತಮಗೆ ಬೇಕಾದ ಸಸಿಗಳನ್ನು ಇವರಲ್ಲಿಯೇ ಖರೀದಿಸುತ್ತಿದ್ದಾರೆ. ಅಲ್ಲದೆ ತಮಗೆ ಬೇಕಾದ ಬೆಳೆಗಳಿಗೆ ಆರ್ಡರ್ ಕೊಡುವ ಮೂಲಕ ಗುಣಮಟ್ಟದ ಸಸಿಗಳನ್ನು ಖರೀದಿಸುವ ಮಟ್ಟಿಗೆ ಹೆಸರಾಗಿದ್ದಾರೆ.
ನಾಟಿ ಹಸುಗಳಿಂದ ಗೊಬ್ಬರ, ಗಂಜಲ ತಯಾರಿಕೆ: ಹಿಂದೆ ಬೆಳೆಗಳು ರೋಗಪೀಡಿತವಾದರೆ ಅಪಾರ ಪ್ರಮಾಣದಲ್ಲಿ ಕ್ರಿಮಿನಾಶಕ ಬಳಕೆ ಮಾಡಲಾಗುತ್ತಿತ್ತು. ಹೆಚ್ಚಿನ ಇಳುವರಿಗಾಗಿ ಪ್ರತಿ ವರ್ಷವೂ ಹೆಚ್ಚು ಹೆಚ್ಚು ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ ಹಾಕಬೇಕಾಗಿತ್ತು. ಇದರಿಂದ ಪ್ರತಿ ವರ್ಷವೂ ಕೃಷಿ ವೆಚ್ಚದಲ್ಲಿ ಹೆಚ್ಚಳವಾಗುತ್ತಿದ್ದುದರಿಂದ ಕೃಷಿ ಚಟುವಟಿಕೆ ದಿನೇ ದಿನೇ ದುಸ್ತರವಾಗುತ್ತಿತ್ತು. ಆದರೆ, ಕಳೆದ ಏಳು ವರ್ಷಗಳಿಂದ ಜೀವಾಮೃತ, ಮಜ್ಜಿಗೆ, ಸ್ಥಳೀಯ ರಾಸುಗಳ ಕೊಟ್ಟಿಗೆ ಗೊಬ್ಬರ ಬಳಕೆಯಿಂದ ಹಂತ ಹಂತವಾಗಿ ಸಾವಯವಕ್ಕೆ ಬದಲಾಗುತ್ತಿದ್ದಾರೆ. ಸದ್ಯ ಸಾವಯವ ಪದ್ಧತಿಯಲ್ಲಿ ಅರಿಶಿಣ, ಬಾಳೆ, ಕೋಸು, ಮಿಶ್ರ ಬೆಳೆಯಾಗಿ ತೊಗರಿ, ಮೆಣಸು ಬೆಳೆಯಲಾಗುತ್ತಿದ್ದು, ಉತ್ತಮ ಇಳುವರಿ ದೊರಕುತ್ತಿವೆ.
ಹಾಲು ಉತ್ಪಾದನೆ: ಜರ್ಸಿ ಹಸುಗಳ ಹಾಲು ಬಳಕೆಯಿಂದ ಮಕ್ಕಳಲ್ಲಿ ಅದರಲ್ಲಿಯೂ ಹೆಣ್ಣುಮಕ್ಕಳಲ್ಲಿ ನಾನಾ ರೀತಿಯ ಸಮಸ್ಯೆಗಳು ಎದುರಾಗುತ್ತಿರುವ ಹಿನ್ನೆಲೆ ಹಳ್ಳಿಕಾರ್ ತಳಿಯ ಹಸುವಿನ ಹಾಲನ್ನು ತಮ್ಮ ಮನೆಗೆ ಮಾತ್ರ ಬಳಕೆ ಮಾಡುತ್ತಿದ್ದಾರೆ. ಅದರಿಂದಲೇ ತಯಾರಿಸಿದ ಮಜ್ಜಿಗೆಯನ್ನು ಹುಳಿ ಬರಿಸಿ ಕ್ರಿಮಿನಾಶಕವಾಗಿ ಬಳಕೆ ಮಾಡಲಾಗುತ್ತಿದೆ.
ಅಡುಗೆ ಎಣ್ಣೆ ತಯಾರಿ: ತಮ್ಮ ಜಮೀನುಗಳಲ್ಲಿ ಬೆಳೆದ ಸೂರ್ಯಕಾಂತಿ ಹಾಗೂ ನೆಲಗಡಲೆ ಬೀಜದಿಂದ ಗಾಣದಲ್ಲಿ ಎಣ್ಣೆ ಮಾಡಿಸಿ ಮನೆಗೆ ಬಳಸುವುದರಿಂದ ಕುಟುಂಬದ ಎಲ್ಲ್ಲ ಸದಸ್ಯರೂ ಆರೋಗ್ಯದಿಂದ ಇದ್ದಾರೆ.
ತರಕಾರಿ ಬೆಳೆ: ಹಿಂದೆ ಸ್ಥಳೀಯವಾಗಿ ದೊರಕುತ್ತಿದ್ದ ಹೀರೆಕಾಯಿ, ಪಡುವಲಕಾಯಿ ಮುಂತಾದ ಬೀಜಗಳನ್ನು ಸಂಗ್ರಹಿಸಿ ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಲು ಸಿದ್ಧ್ದತೆ ನಡೆಸಿದ್ದಾರೆ. ತಮ್ಮ ಮನೆ ಬಳಕೆಗೆ ಬೇಕಾದ ಎಲ್ಲ ಸೊಪ್ಪು ತರಕಾರಿಗಳನ್ನು ತಮ್ಮ ಜಮೀನಿನಲ್ಲಿಯೇ ಉತ್ಪಾದಿಸಲಾಗುತ್ತಿದೆ. ಎಲೆಕೋಸು, ವಿವಿಧ ತಳಿಯ ಮೆಣಸು, ಟೊಮ್ಯಾಟೋ, ಬದನೆ, ಕಲ್ಲಂಗಡಿ, ದಪ್ಪ ಮೆಣಸು, ಬೀನ್ಸ್, ಗುಂಡು ಹಾಗೂ ಉದ್ದ ಬದನೆಗಳ ಜತೆಗೆ ರೈತರ ಬೇಡಿಕೆಯ ಮೇರೆಗೆ ಎಲ್ಲ ಸಸಿಗಳನ್ನು ಉತ್ಪಾದಿಸಿ ರೈತರಿಗೆ ಸರಬರಾಜು ಮಾಡುತ್ತಿದ್ದಾರೆ.