

ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ ನಂಬದವರು ಕೂಡ ಇದ್ದಾರೆ. ಪ್ರತಿಯೊಂದು ಕೆಲಸ, ಕಾರ್ಯಗಳನ್ನು ಮಾಡಬೇಕಾದರೂ ಜೋತಿಷ್ಯದ ಮೊರೆ ಹೋಗುತ್ತಾರೆ. ಜ್ಯೋತಿಷ್ಯದಲ್ಲಿ ಅನೇಕ ಬಗೆಗಳಿರುವುದು ಎಲ್ಲರಿಗೂ ತಿಳಿದಿದೆ. ಅವುಗಳಲ್ಲಿ ಸಂಖ್ಯಾಶಾಸ್ತ್ರ ಮತ್ತು ಹಸ್ತಸಾಮುದ್ರಿಕ ಶಾಸ್ತ್ರವೂ ಒಂದು.
ಸಂಖ್ಯಾಶಾಸ್ತ್ರದ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು ಅವನ ಭವಿಷ್ಯ ಹೇಗಿರುತ್ತದೆ ಎಂಬುದನ್ನು ತಿಳಿಸುತ್ತದೆ. ಅಲ್ಲದೆ, ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಪ್ರಮುಖ ಅಂಶಗಳ ಬಗ್ಗೆ ಮುನ್ಸೂಚನೆ ಸಹ ನೀಡುತ್ತದೆ. ಸಂಖ್ಯಾಶಾಸ್ತ್ರವನ್ನು ರಾಡಿಕ್ಸ್ ಸಂಖ್ಯೆಗಳ ಆಧಾರದ ಮೇಲೆ ಹೇಳಲಾಗುತ್ತದೆ.
ಒಬ್ಬ ವ್ಯಕ್ತಿಯ ಜನ್ಮ ದಿನಾಂಕದ ಮೊತ್ತವನ್ನು ರಾಡಿಕ್ಸ್ ಸಂಖ್ಯೆ ಅಥವಾ ಮೂಲಾಂಕ ಎಂದು ಕರೆಯಲಾಗುತ್ತದೆ. ಉದಾಹರಣೆಗೆ ಒಬ್ಬ 24ನೇ ತಾರೀಖಿನಂದು ಜನಿಸಿದರೆ ಆತನ ರಾಡಿಕ್ಸ್ ಸಂಖ್ಯೆ 2+4= 6 ಆಗಿರುತ್ತದೆ. ರಾಶಿಗಳಂತೆ ರಾಡಿಕ್ಸ್ ಸಂಖ್ಯೆಗಳು ಕೂಡ ಗ್ರಹಗಳೊಂದಿಗೆ ಸಂಬಂಧ ಹೊಂದಿವೆ. ಸಂಖ್ಯಾಶಾಸ್ತ್ರದಲ್ಲಿ 01 ರಿಂದ 09ರವರೆಗಿನ ಸಂಖ್ಯೆಗಳನ್ನು ರಾಡಿಕ್ಸ್ ಸಂಖ್ಯೆಗಳು ಎಂದು ಹೇಳಲಾಗುತ್ತದೆ. ಈ ಒಂಬತ್ತು ರಾಡಿಕ್ಸ್ ಸಂಖ್ಯೆಗಳು ಕೂಡ ನವಗ್ರಹಗಳಲ್ಲಿ ಒಂದೊಂದು ಗ್ರಹಗಳಿಗೆ ಸೀಮಿತವಾಗಿವೆ.
ಸಂಖ್ಯಾಶಾಸ್ತ್ರದ ಪ್ರಕಾರ, ಕೆಲವು ದಿನಾಂಕಗಳಲ್ಲಿ ಜನಿಸಿದವರು ತಮ್ಮ ಸಂಗಾತಿಯ ವಿಚಾರದಲ್ಲಿ ಅಸುರಕ್ಷಿತ ಭಾವನೆ ಮತ್ತು ಸ್ವಾಮ್ಯಶೀಲತೆ ಅಂದರೆ, ಬಿಟ್ಟುಕೊಡದ ಸ್ವಭಾವವನ್ನು ಹೊಂದಿರುತ್ತಾರೆ. ಹಾಗಾದರೆ, ಆ ದಿನಾಂಕಗಳು ಯಾವುವು? ಅವರ ಗುಣ ಸ್ವಭಾವಗಳೇನು? ಎಂಬುದನ್ನು ಈ ಪೋಸ್ಟ್ನಲ್ಲಿ ವಿವರವಾಗಿ ತಿಳಿದುಕೊಳ್ಳೋಣ.
ಸಂಖ್ಯೆ 4 ( ದಿನಾಂಕ 4, 13, 22, 31)
ಸಂಖ್ಯೆ 4ರಂದು ಅಥವಾ ಈ ದಿನಾಂಕಗಳಲ್ಲಿ ಜನಿಸಿದವರು ಶ್ರಮಜೀವಿಗಳು ಮತ್ತು ಇತರರ ಹಣ ಮತ್ತು ಆಸ್ತಿಗಾಗಿ ದುರಾಸೆ ಹೊಂದಿರುವುದಿಲ್ಲ. ತಮ್ಮ ಸ್ವಂತ ಪ್ರಯತ್ನದಿಂದ ಜೀವನದಲ್ಲಿ ಯಶಸ್ವಿಯಾಗಬೇಕು ಎಂದು ಯೋಚಿಸುತ್ತಾರೆ. ಆದರೆ, ಜೀವನದ ಬಗ್ಗೆ ಸ್ವಲ್ಪ ಅಭದ್ರವಾಗಿರುತ್ತಾರೆ. ಆದ್ದರಿಂದ ಅವರು ಆಗಾಗ ಇತರರ ಬಗ್ಗೆ ಅಸೂಯೆಪಡುತ್ತಾರೆ. ಜೀವನದಲ್ಲಿ ತಾವು ಹೋರಾಡಿ ಗಳಿಸಿದ್ದನ್ನು ಇತರರು ಸುಲಭವಾಗಿ ಸಾಧಿಸಿದಾಗ ಅಸೂಯೆಪಡುತ್ತಾರೆ.
ಇನ್ನು ಈ ಸಂಖ್ಯೆಗಳ ಅಡಿಯಲ್ಲಿ ಜನಿಸಿದ ಜನರು ಪ್ರೀತಿಯ ವಿಷಯಗಳಲ್ಲಿ ಹೆಚ್ಚು ಪ್ರಾಮಾಣಿಕ ಮತ್ತು ಸತ್ಯವಂತರಾಗಿರುತ್ತಾರೆ. ಅಲ್ಲದೆ, ತಮ್ಮ ಸಂಗಾತಿಯಿಂದಲೂ ಅದನ್ನೇ ನಿರೀಕ್ಷಿಸುತ್ತಾರೆ. ಒಂದು ವೇಳೆ ಸಂಗಾತಿಯಿಂದ ಅದು ಸಿಗದಿದ್ದಾಗ ಅಸುರಕ್ಷಿತ ಭಾವನೆ ಅವರಲ್ಲಿ ಕಾಡುತ್ತದೆ ಮತ್ತು ಅವರನ್ನು ತುಂಬಾ ಸ್ವಾಮ್ಯಶೀಲರನ್ನಾಗಿ ಮಾಡುತ್ತದೆ. ಅಂದರೆ, ಸಂಗಾತಿಯ ಮೇಲೆ ನಿಯಂತ್ರಣದ ನಡವಳಿಕೆಯನ್ನು ಹೊಂದುತ್ತಾರೆ.
ಸಂಖ್ಯೆ 6 ( ದಿನಾಂಕ 6, 15, 24)
ಈ ಸಂಖ್ಯೆಗಳ ಅಡಿಯಲ್ಲಿ ಜನಿಸಿದ ಜನರು ತಮ್ಮ ಅಭದ್ರತೆಯ ಭಾವನೆಯಿಂದಾಗಿ ಹೆಚ್ಚು ಸ್ವಾಮ್ಯಶೀಲತೆ ಮತ್ತು ಅಸೂಯೆ ಹೊಂದಿರುತ್ತಾರೆ. ಸ್ವಾಭಾವಿಕವಾಗಿ ಆಕರ್ಷಕ ನೋಟ ಮತ್ತು ಇತರರನ್ನು ಆಕರ್ಷಿಸುವ ಕಾಂತೀಯ ನೋಟವನ್ನು ಇವರು ಹೊಂದಿರುತ್ತಾರೆ. ತಾವು ಪ್ರೀತಿಸುವ ಜನರ ಜತೆ ತುಂಬಾ ಕಾಳಜಿ ಮತ್ತು ಪ್ರೀತಿಯಿಂದ ಇರುತ್ತಾರೆ. ಎಂದಿಗೂ ತಮ್ಮ ಸಂಗಾತಿಯಿಂದ ಬೇರೆಯಾಗಲು ಇಷ್ಟಪಡುವುದಿಲ್ಲ. ಇದರಿಂದ ತಮ್ಮ ಸಂಗಾತಿಯ ಮೇಲೆ ಅಭದ್ರತೆ ಮತ್ತು ಸ್ವಾಮ್ಯಶೀಲ ಭಾವನೆ ಹೊಂದಿರುತ್ತಾರೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್ಸೈಟ್ ಜವಾಬ್ದಾರರಾಗಿರುವುದಿಲ್ಲ.