

ಸಮ್ಮೇಳನ ಆಯೋಜನೆಗೆ ಗಣಿನಾಡು ಕಾತರ | ಸಾಹಿತ್ಯ ಪ್ರಿಯರಲ್ಲಿ ಉತ್ಸಾಹ
| ತಾಳೂರು ಎಸ್.ಎರ್ರಿಸ್ವಾಮಿ ಬಳ್ಳಾರಿ
ಬರೋಬ್ಬರಿ ಆರು ದಶಕಗಳ ಬಳಿಕ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯ ಗಣಿನಾಡು ಖ್ಯಾತಿಯ ಬಳ್ಳಾರಿ ಜಿಲ್ಲೆಗೆ ಲಭಿಸಿದೆ. ಮಂಡ್ಯದಲ್ಲಿ ಭಾನುವಾರ ತೆರೆ ಕಂಡ 87ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಂದಿನ ವರ್ಷದ ಸಮ್ಮೇಳನ ನಡೆಯುವ ಜಿಲ್ಲೆ ಹೆಸರು ಘೊಷಣೆಯಾಗಿದ್ದು, ಈ ಅವಕಾಶ ಬಳ್ಳಾರಿಗೆ ಲಭಿಸಿದೆ. ಇದು ಜಿಲ್ಲೆಯ ಕನ್ನಡ ಪ್ರೇಮಿಗಳಿಗೆ ಸಂತಸ ತಂದಿದೆ.
ಆಂಧ್ರದೊಂದಿಗೆ ಗಡಿ ಹಂಚಿಕೊಂಡಿರುವ ಜಿಲ್ಲೆಯಲ್ಲಿ ತೆಲುಗು ಪಾರಮ್ಯವಿದ್ದರೂ ಇಲ್ಲಿಯ ಜನರಿಗೆ ಕನ್ನಡದ ಮೇಲಿನ ಅಭಿಮಾನ ಎಂದಿಗೂ ಕಡಿಮೆಯಾಗಿಲ್ಲ. ಉದಾಹರಣೆಗೆ ಮದ್ರಾಸ್ ಪ್ರಾಂತ್ಯಕ್ಕೆ ಬಳ್ಳಾರಿಯನ್ನು ಸೇರಬೇಕಾ? ಅಥವಾ ಮೈಸೂರು ಪ್ರಾಂತ್ಯಕ್ಕೆ ಸೇರಬೇಕಾ ಎನ್ನುವ ವಿಷಯಾಧಾರದಲ್ಲಿ ಕನ್ನಡಿಗರು ಗೆದ್ದಿದ್ದಾರೆ. ಏಕೀಕರಣ ಸಂದರ್ಭ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಅಂದು ಮತ ಹಾಕಿದ ಇಲ್ಲಿಯ ಜನರು ಮೈಸೂರು ಪ್ರಾಂತ್ಯದ ಕಡೆ ಒಲವಿದ್ದ ರಾಜಕಾರಣಿಯನ್ನು ಗೆಲ್ಲಿಸಿದ್ದರು. ಕನ್ನಡ ಭಾಷೆ ಮೇಲೆ ಅದಮ್ಯ ವಿಶ್ವಾಸ ಹೊಂದಿರುವ ಇಲ್ಲಿನ ಜನರ ನೆಲದಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಿಗದಿಯಾಗಿರುವುದು ಗಣಿನಾಡಿನ ಜನರಲ್ಲಿ ಸಂತೋಷ ಹೆಚ್ಚಿಸಿದೆ.
66 ವರ್ಷಗಳ ಬಳಿಕ ಅಕ್ಷರಜಾತ್ರೆ: ಕಸಾಪದಿಂದ 1915ರಿಂದ ಆರಂಭಗೊಂಡ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಈವರೆಗೆ 87 ಕನ್ನಡ ಜಾತ್ರೆಯನ್ನು ಪೂರೈಸಿದೆ. ಅದರಲ್ಲೂ ಜಿಲ್ಲೆಯಲ್ಲಿ ಸ್ವಾತಂತ್ರ್ಯಾ ಪೂರ್ವದಲ್ಲಿ, ಅದರಲ್ಲೂ ಮೊದಲ ಬಾರಿಗೆ 1926ರ ಜ.22, 23 ಮತ್ತು 24ರಂದು ಫ.ಗು.ಹಳಕಟ್ಟಿ ಅಧ್ಯಕ್ಷತೆಯಲ್ಲಿ, ಎರಡನೇ ಬಾರಿಗೆ ರಂಗನಾಥ ದಿವಾಕರ ಅಧ್ಯಕ್ಷತೆಯಲ್ಲಿ 1938ರ ಡಿ.29, 30 ಹಾಗೂ 31ರಂದು ಮತ್ತು ಸ್ವಾತಂತ್ರ್ಯಾ ನಂತರ ವಿ.ಕೃ.ಗೋಕಾಕ ಅಧ್ಯಕ್ಷತೆಯಲ್ಲಿ 1958ರ ಜ.18, 19 ಮತ್ತು 20ರಂದು ಬಳ್ಳಾರಿಯಲ್ಲಿ ಸಮ್ಮೇಳನ ನಡೆದಿತ್ತು. ಅಖಂಡ ಜಿಲ್ಲೆಯ ಹೊಸಪೇಟೆಯಲ್ಲಿ ರೊಡ್ಡ ಶ್ರೀನಿವಾಸರಾವ್ ಅಧ್ಯಕ್ಷತೆಯಲ್ಲಿ 1920ರ ಜೂ.20 ಮತ್ತು 21 ರಂದು ಹಾಗೂ ಹರಪನಹಳ್ಳಿಯಲ್ಲಿ ಸಿ.ಕೆ.ವೆಂಕಟರಾಮಯ್ಯ ಅಧ್ಯಕ್ಷತೆಯಲ್ಲಿ 1947 ಮೇ 7, 8 ಹಾಗೂ 9 ರಂದು ನಡೆದಿದೆ. ಈಗ 66 ವರ್ಷ ಬಳಿಕ ಜಿಲ್ಲೆಯ ಪಾಲಿಗೆ ಸಮ್ಮೇಳನ ಒಲಿದಿದೆ.
ಕಳೆದ ವರ್ಷವೇ ಬಳ್ಳಾರಿಯಲ್ಲಿ ಸಮ್ಮೇಳನ ನಿಗದಿಯಾಗಬೇಕಿತ್ತು. ಕೊನೆಯ ಕ್ಷಣದಲ್ಲಿ ಮಂಡ್ಯಕ್ಕೆ ಅವಕಾಶ ಲಭಿಸಿತು. ಈ ಬಾರಿ ಇಲ್ಲಿನ ಕನ್ನಡ ಸಂಘಟನೆ, ಸಂಘ, ಸಂಸ್ಥೆ ಹಾಗೂ ಜನಪ್ರತಿನಿಧಿಗಳ ಸಹಕಾರದಿಂದ ಜಿಲ್ಲೆಗೆ ಅವಕಾಶ ಸಿಕ್ಕಿದೆ. ಆದ್ದರಿಂದ ಯಶಸ್ವಿಯಾಗಿ ಸಮ್ಮೇಳನ ನಡೆಸಲು ಶ್ರಮಿಸಲಾಗುವುದು. | ನಿಷ್ಠಿ ರುದ್ರಪ್ಪ ಕಸಾಪ ಜಿಲ್ಲಾಧ್ಯಕ್ಷ, ಬಳ್ಳಾರಿ