ಭಾರತಕ್ಕೆ ಮಗ್ಗುಲ ಮುಳ್ಳಾಗಿರುವ ಚೀನಾದಿಂದ ಅಣ್ವಸ್ತ್ರ ಬಲ ಹೆಚ್ಚಳ

China
Published on

ಭಾರತಕ್ಕೆ ಮಗ್ಗುಲ ಮುಳ್ಳಾಗಿರುವ ಚೀನಾ ಅಣ್ವಸ್ತ್ರ ಬಲ ಹೆಚ್ಚಿಸುತ್ತಿದೆ. ಮರುಭೂಮಿಯ ಪ್ರದೇಶದಲ್ಲಿ ಖಂಡಾಂತರ ಸಾಮರ್ಥ್ಯದ ಶಕ್ತಿಶಾಲಿ ಕ್ಷಿಪಣಿಗಳ ಅಡಗುದಾಣಗಳನ್ನು ನಿರ್ವಿುಸುತ್ತಿರುವುದು ಉಪಗ್ರಹದ ಚಿತ್ರಗಳಿಂದ ಬಯಲಾಗಿದೆ. ಪೂರ್ವ ಲಡಾಖ್​ನ ಗಡಿ ವಿಷಯದಲ್ಲಿ ಉಭಯ ದೇಶಗಳ ಮಧ್ಯೆ ಉದ್ವಿಗ್ನತೆ ಇನ್ನೂ ಪೂರ್ಣವಾಗಿ ಶಮನವಾಗಿಲ್ಲದ ಹೊತ್ತಿನಲ್ಲಿ ಚೀನಾದ ಈ ನಡೆ ಭಾರತವನ್ನು ಆತಂಕಕ್ಕೆ ದೂಡಿದೆ. ಚೀನಾ ಬಳಿ ಈಗಾಗಲೇ 250ರಿಂದ 350 ಅಣ್ವಸ್ತ್ರಗಳು ಇದ್ದರೂ ಅಣ್ವಸ್ತ್ರ ಕಾರ್ಯಕ್ರಮದ ವಿಸ್ತರಣೆಯನ್ನು ತ್ವರಿತವಾಗಿ ಮಾಡುತ್ತಿರುವುದು ಜಾಗತಿಕ ಕಳವಳಕ್ಕೂ ಕಾರಣವಾಗಿದೆ.

ವಾಯವ್ಯ ಭಾಗದ ಗೋಬಿ ಮರುಭೂಮಿಯ ಅಂಚಿಗೆ ಇರುವ ಯುಮೆನ್ ನಗರ ಸಮೀಪದಲ್ಲಿ 100 ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿಗಳ (ಐಸಿಬಿಎಂ) ಹಗೇವುಗಳ ನಿರ್ಮಾಣ ಆಗುತ್ತಿದೆ. ಇದರ ಚಿತ್ರಗಳನ್ನು ಹೊಸದೊಂದು ವಾಣಿಜ್ಯಿಕ ಸ್ಯಾಟಲೈಟ್ ಸೆರೆ ಹಿಡಿದಿದೆ. ಮರುಭೂಮಿಯಲ್ಲಿ ಕುಳಿಗಳನ್ನು ತೊಡಲಾಗಿದ್ದು, ಭೂ ಮೇಲ್ಮೈ ನಿರ್ವಣಗಳು ಕಾಣಿಸುವ ಚಿತ್ರಗಳು ಇವಾಗಿವೆ. ಇದೇ ಜಾಗದಲ್ಲಿ ನಾಲ್ಕು ತಿಂಗಳ ಹಿಂದೆ ತೆಗೆದ ಚಿತ್ರ ಮತ್ತು ಇತ್ತೀಚಿನ ಚಿತ್ರಗಳನ್ನು ಸಂಶೋಧಕರು ವಿಶ್ಲೇಷಿಸಿದ್ದು, ದಿಢೀರ್ ಬೆಳವಣಿಗೆಗಳನ್ನು ಗುರುತಿಸಿದ್ದಾರೆ ಎಂದು ಅಮೆರಿಕದ ‘ವಾಷಿಂಗ್ಟನ್ ಪೋಸ್ಟ್’ ವರದಿ ಮಾಡಿದೆ. ಚೀನಾದ ಈ ಅಣ್ವಸ್ತ್ರ ಉಗ್ರಾಣ ಸಿದ್ಧವಾಗುತ್ತಿರುವ ಸ್ಥಳವು ಅದರ ಮಹತ್ವಾಕಾಂಕ್ಷೆಯ ಯೋಜನೆಯಾದ ಸಿಲ್ಕ್ ರೋಡ್ ಹಾದುಹೋಗುವ ಆಜುಬಾಜಿನಲ್ಲಿದೆ. ಈ ಪರಿಧಿಯಲ್ಲಿ 1.70 ಲಕ್ಷ ಜನರ ವಸತಿ ಇದೆ. ಅಣ್ವಸ್ತ್ರಗಳನ್ನು ಅಡಗಿಸಿರುವ ಕುಳಿಗಳು ಪರಸ್ಪರ ಸರಿಸಮಾರು ಎರಡು ಮೈಲುಗಳಷ್ಟು ಅಂತರದಲ್ಲಿ್ಲ ಇವೆ. ಸಾಮಾನ್ಯವಾಗಿ ಇಂಥ ಕುಳಿಗಳನ್ನು ಗುಮ್ಮಟದ ಆಕೃತಿಯಿಂದ ಮುಚ್ಚಲಾಗುತ್ತದೆ. ಆದರೆ, ಗೋಬಿ ಮರುಭೂಮಿಯಲ್ಲಿನ ಅಣ್ವಸ್ತ್ರ ಅಡಗುದಾಣಗಳ ಅನೇಕ ಸ್ಥಳಗಳನ್ನು ಈ ರೀತಿ ಮಾಡಿಲ್ಲ. ಬೇರೆಯದ್ದೇ ಆಕೃತಿಯಲ್ಲಿ ಮರೆಮಾಚಲಾಗಿದೆ ಎಂದು ಪತ್ರಿಕೆ ವರದಿ ಮಾಡಿದೆ. ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಶತಮಾನೋತ್ಸವ ಆಚರಣೆ ಸಮಾರಂಭದಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್​ಪಿಂಗ್, ‘ನಮ್ಮನ್ನು ಪೀಡಿಸಿದವರನ್ನು ರಕ್ತಕಾರುವಂತೆ ಮಾಡುತ್ತೇವೆ’ ಎಚ್ಚರಿಕೆ ನೀಡಿದ್ದರು. ಅವರು ಈ ಹೇಳಿಕೆ ನೀಡಿದ ಕೆಲವು ದಿನದಲ್ಲೇ ಅಣ್ವಸ್ತ್ರ ಕಾರ್ಯಕ್ರಮ ವಿಸ್ತರಣೆ ಚಿತ್ರಗಳು ಉಪಗ್ರಹದಿಂದ ದೊರಕಿವೆ.

15 ಸಾವಿರ ಕಿ.ಮೀ. ದೂರ ಕ್ರಮಿಸುವ ಸಾಮರ್ಥ್ಯ

ಚೀನಾದ ಅಣ್ವಸ್ತ್ರ ಕಾರ್ಯಕ್ರಮಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಅಮೆರಿಕದ ತಜ್ಞ ಜೆಫ್ರಿ ಲಿವಿಸ್ ಪ್ರಕಾರ, ಈ ಸ್ಯಾಟಲೈಟ್ ಚಿತ್ರಗಳು ಅಣ್ವಸ್ತ್ರ ಉಗ್ರಾಣದ ನಿರ್ಮಾಣ ಬಿಟ್ಟು ಬೇರೆಯದ್ದಾಗಿರುವ ಸಾಧ್ಯವೇ ಇಲ್ಲ. ಚೀನಾದ ಐಸಿಬಿಎಂಗಳ ನಿರ್ಮಾಣ ಡಿಎಫ್-41 ಮಾದರಿಯಲ್ಲಿ ಇರುವ ಸಾಧ್ಯತೆ ಇದೆ. ಇಲ್ಲಿರುವ ಕ್ಷಿಪಣಿಗಳು ಬಹುಸಿಡಿತಲೆಗಳನ್ನು ಒಳಗೊಂಡ ಮಾರಕಾಸ್ತ್ರಗಳಾಗಿದ್ದು, 15 ಸಾವಿರ ಕಿ.ಮೀ. ದೂರವನ್ನು ಕ್ರಮಿಸುವಷ್ಟ ಸಾಮರ್ಥ್ಯ ಹೊಂದಿರುವ ಸಂಭವ ಇದೆ. ಅಂದರೆ, ಭಾರತ, ತೈವಾನ್, ಅಮೆರಿಕದ ಕೆಲವು ಭಾಗಗಳಿಗೂ ಇದು ತಲುಪಬಹುದು ಎಂದು ಜೆಫ್ರಿ ಹೇಳಿದ್ದಾರೆ. ‘ಒತ್ತಡಗಳನ್ನು ಕಡಿಮೆ ಮಾಡುವ ಪ್ರಾಯೋಗಿಕ ಉಪಕ್ರಮದಲ್ಲಿ ಚೀನಾ ನಮ್ಮೊಂದಿಗೆ ಜತೆಯಾಗಿದೆ. ಆದರೆ, ಸ್ಯಾಟಲೈಟ್​ನ ಚಿತ್ರಗಳು ಚೀನಾದಲ್ಲಿನ ಕಳವಳಕಾರಿ ಬೆಳವಣಿಗೆಯನ್ನು ಎತ್ತಿ ತೋರಿಸಿವೆ’ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೖೆಸ್ ಹೇಳಿದ್ದಾರೆ. ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್ ಕೂಡ ಚೀನಾ ಅಣ್ವಸ್ತ್ರ ಕಾರ್ಯಕ್ರಮದ ಬಗ್ಗೆ ಎಚ್ಚರವಹಿಸಬೇಕು ಎಂದು ಹೇಳಿದೆ.

ಚೀನಾದ ಅಣ್ವಸ್ತ್ರ ಕಾರ್ಯಕ್ರಮ ಹೆಚ್ಚಳವು ವಿಶೇಷವಾಗಿ ಭಾರತ ಮತ್ತು ಅಮೆರಿಕಕ್ಕೆ ಕಳವಳಕಾರಿಯಾಗಿದೆ ಮತ್ತು ಈ ನಿಟ್ಟಿನಲ್ಲಿ ಎರಡೂ ದೇಶಗಳು ಒಂದಾಗಿ ಅವಲೋಕಿಸಬೇಕಿದೆ.

| ಜೆಫ್ರಿ ಲಿವಿಸ್ ಚೀನಾದ ಅಣ್ವಸ್ತ್ರ ಕುರಿತ ಅಮೆರಿಕದ ತಜ್ಞ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net