

ಹೈದರಾಬಾದ್: ಜ್ಯೂ.ಎನ್‌ಟಿಆರ್(NTR), ಜಾಹ್ನವಿ ಕಪೂರ್ ಮತ್ತು ಸೈಫ್ ಅಲಿಖಾನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಕೊರಟಾಲ ಶಿವ ನಿರ್ದೇಶನದ ಚಿತ್ರ 'ದೇವರ' ಭಾರಿ ನಿರೀಕ್ಷೆಗಳೊಂದಿಗೆ ಶುಕ್ರವಾರ ಬಿಡುಗಡೆಯಾಗಿದೆ. ಈ ಚಿತ್ರವು ತೆಲುಗು ರಾಜ್ಯಗಳು ಮತ್ತು ದೇಶ, ವಿದೇಶಗಳಲ್ಲಿ ಭಾರಿ ಓಪನಿಂಗ್ಸ್ ಗಳಿಸಿದೆ. ಇದರೊಂದಿಗೆ ಚಿತ್ರತಂಡ ಸಂಭ್ರಮಿಸಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ನಾಯಕ ಎನ್‌ಟಿಆರ್ ತಮ್ಮ ‘ಎಕ್ಸ್’ ಖಾತೆಯ ಮೂಲಕ ಚಿತ್ರತಂಡ ಹಾಗೂ ಅಭಿಮಾನಿಗಳನ್ನು ಉದ್ದೇಶಿಸಿ ಪೋಸ್ಟ್ ಬರೆದಿದ್ದಾರೆ.
'ದೇವರ' ಬಿಡುಗಡೆಯ ನಂತರ ಎನ್‌ಟಿಆರ್(NTR) ಮೊದಲ ಪ್ರತಿಕ್ರಿಯೆ ಇದಾಗಿದ್ದು, ಈಗ ವೈರಲ್ ಆಗುತ್ತಿದೆ.
"ನಾನು ಕಾಯುತ್ತಿದ್ದ ದಿನ ಬಂದಿದೆ. ನಿಮ್ಮ ಅದ್ಭುತ ಪ್ರತಿಕ್ರಿಯೆಗಳಿಂದ ತುಂಬಿ ತುಳುಕುತ್ತಿದೆ. ಅದ್ಭುತವಾದ ಚಿತ್ರ ಕಟ್ಟಿಕೊಟ್ಟ ಕೊರಟಾಲ ಶಿವ ಅವರಿಗೆ ವಿಶೇಷ ಅಭಿನಂದನೆಗಳು. ನನ್ನ ಸಹೋದರ ಅನಿರುಧ್, ನೀಮ್ಮ ಹಿನ್ನೆಲೆ ಸಂಗೀತದಿಂದ ಚಿತ್ರಕ್ಕೆ ಜೀವ ತುಂಬಿದ್ದೀರಿ. ನಿರ್ಮಾಪಕರಾದ ಹರಿಕೃಷ್ಣ ಕೊಸರಾಜು ಮತ್ತು ಸುಧಾಕರ್ ಮಿಕ್ಕಿಲಿನೇನಿ ಅಪಾರ ಬೆಂಬಲ ನೀಡಿದ್ದಕ್ಕೆ ವಿಶೇಷ ಧನ್ಯವಾದಗಳು. ಛಾಯಾಗ್ರಾಹಕ ರತ್ನವೇಲು, ಸಾಬು ಸಿರಿಲ್ ಮತ್ತು ಅದ್ಭುತ ಕೆಲಸ ಮಾಡಿದ ಎಲ್ಲಾ ತಂತ್ರಜ್ಞರಿಗೆ ಧನ್ಯವಾದಗಳು. ಕೊನೆಗೂ ಅಭಿಮಾನಿಗಳ ಸಂಭ್ರಮದಿಂದ ನನ್ನ ಹೃದಯ ತುಂಬಿ ಬಂದಿದೆ ಎಂದು ಬರೆದಿದ್ದಾರೆ.
ಮುಂದುವರಿದು, ನಿಮ್ಮ ಪ್ರೀತಿಗೆ ನಾನು ಸದಾ ಋಣಿ. ನೀವು ಈ ಸಿನಿಮಾವನ್ನು ನನ್ನಷ್ಟು ಎಂಜಾಯ್ ಮಾಡುತ್ತಿರುವುದನ್ನು ನೋಡಿ ಖುಷಿಯಾಯಿತು. ನಿಮಗೆ ಹೆಚ್ಚಿನ ಮನರಂಜನೆ ನೀಡುತ್ತೇನೆ ಎಂದು ಎನ್‌ಟಿಆರ್ ತಮ್ಮ ಟ್ವೀಟ್ ನಲ್ಲಿ ತಿಳಿಸಿದ್ದಾರೆ. ಇದರಿಂದ ಅಭಿಮಾನಿಗಳು ಭಾವುಕರಾಗಿ ‘ದೇವರ’ದಂತಹ ಬ್ಲಾಕ್ ಬಸ್ಟರ್ ನೀಡಿದ ನಿಮಗೆ ಧನ್ಯವಾದ ಎಂದು ಪ್ರತಿಕ್ರಿಯಿಸುತ್ತಿದ್ದಾರೆ.