

ಹೈದರಾಬಾದ್: ಎನ್ ಟಿಆರ್(NTR) ಅವರ ಬನಿರೀಕ್ಷಿತ 'ದೇವರ' ಶುಕ್ರವಾರ(ಸೆ.27) ಬಿಡುಗಡೆಯಾಗಿದೆ. ಆರು ವರ್ಷದ ಬಳಿಕ ಬಿಡುಗಡೆಯಾದ ಈ ಚಿತ್ರಕ್ಕೆ ಅಭಿಮಾನಿಗಳು ನಿರೀಕ್ಷೆಗೂ ಮೀರಿ ಪ್ರತಿಕ್ರಿಯಿಸಿದ್ದಾರೆ.
ಕೊರಟಾಲ ಶಿವ ನಿರ್ದೇಶನದ ಈ ಆಕ್ಷನ್ ಮನರಂಜನಾ ಚಿತ್ರವು ವಿಶ್ವದಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ. ಪ್ರೀ ಸೇಲ್ ಬುಕ್ಕಿಂಗ್ ನಲ್ಲಿ ಸಹ ಹಲವು ದಾಖಲೆ ಬರೆದಿತ್ತು. ಈ ಸಿನಿಮಾ ಮೊದಲ ದಿನದ ಕಲೆಕ್ಷನ್ ದಾಖಲೆ ಬರೆದಿದೆ.
'ದೇವರ' ವಿಶ್ವದಾದ್ಯಂತ ಒಟ್ಟು 172 ಕೋಟಿ (ಮೊದಲ ದಿನದ ಕಲೆಕ್ಷನ್) ಮಾಡಿದೆ. ಭಾರತದಲ್ಲಿ 70 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಆಗಿದೆ ಎನ್ನಲಾಗುತ್ತಿದೆ.
'ದೇವರ'ದಲ್ಲಿ ಎನ್‌ಟಿಆರ್‌ಗೆ ಜೋಡಿಯಾಗಿ ಜಾನ್ವಿ ಕಪೂರ್ ನಟಿಸಿದ್ದು, ಸೈಫ್ ಅಲಿ ಖಾನ್ ಖಳನಾಯಕನಾಗಿ ನಟಿಸಿದ್ದಾರೆ. ಚಿತ್ರಕ್ಕೆ ಬೆಂಬಲ ನೀಡಿದ ಪ್ರೇಕ್ಷಕರಿಗೆ ಎನ್ ಟಿಆರ್ ಧನ್ಯವಾದ ಹೇಳಿದ್ದಾರೆ.
ಅಭಿಮಾನಿಗಳ ಸಂಭ್ರಮದಿಂದ ನನ್ನ ಹೃದಯ ತುಂಬಿದೆ. ನಿಮ್ಮ ಪ್ರೀತಿ ಮತ್ತು ವಾತ್ಸಲ್ಯಕ್ಕೆ ನಾನು ಯಾವಾಗಲೂ ಋಣಿಯಾಗಿದ್ದೇನೆ. ನೀವು ನನ್ನಂತೆಯೇ ಚಿತ್ರವನ್ನು ಆನಂದಿಸುತ್ತಿರುವುದನ್ನು ನೋಡಿ ನನಗೆ ಸಂತೋಷವಾಗಿದೆ ಎಂದು ಎನ್ಟಿಆರ್ ಹೇಳಿದ್ದಾರೆ.