ಇನ್ಮುಂದೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯುವ ಪ್ರತಿ ಕೇಂದ್ರದಲ್ಲಿ AI ಬಳಕೆ: ಎನ್​​ಟಿಎ

exams
Published on

ನವದೆಹಲಿ: ಪರೀಕ್ಷೆಯಲ್ಲಿ ಪಾರದರ್ಶಕತೆಯನ್ನು ತರಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಈಗ ಕೃತಕ ಬುದ್ಧಿಮತ್ತೆಯನ್ನು (AI) ಬಳಸುತ್ತಿದ್ದು, ಇದರ ಪ್ರಯೋಗವೂ ಯಶಸ್ವಿಯಾಗಿದೆ. ಈಗ ಪ್ರತಿ ಪರೀಕ್ಷೆಯಲ್ಲಿ ನಕಲಿ ಅಭ್ಯರ್ಥಿಗಳನ್ನು ಹಿಡಿಯಲು AI ಉಪಕರಣವನ್ನು ಬಳಸಲಾಗುವುದು. ಇತ್ತೀಚೆಗೆ, AI ಟೂಲ್ ಮೂಲಕ ನೋಯ್ಡಾ, ಕೋಲ್ಕತ್ತಾ ಮತ್ತು ರೂರ್ಕಿಯಲ್ಲಿ ಇಪಿಎಫ್‌ಒ ಸೋಶಿಯಲ್ ಸೆಕ್ಯುರಿಟಿ ಅಸಿಸ್ಟೆಂಟ್ ಪರೀಕ್ಷೆಯಲ್ಲಿ ಕಾಣಿಸಿಕೊಂಡ ಮೂವರು ನಕಲಿ ಅಭ್ಯರ್ಥಿಗಳನ್ನು ಎನ್‌ಟಿಎ ಹಿಡಿದಿದೆ.

ಎನ್‌ಟಿಎ ಪ್ರಕಾರ, ದೆಹಲಿಯ ಕೇಂದ್ರದಲ್ಲಿ ಫೇಶಿಯಲ್ ರೆಕಗ್ನಿಷನ್ ಮೆಷಿನ್ ಅನ್ನು ಪ್ರಾಯೋಗಿಕವಾಗಿ ಅಳವಡಿಸಲಾಗಿದೆ. ಅಭ್ಯರ್ಥಿಯೊಬ್ಬರು ಅದರ ಮೂಲಕ ಹಾದುಹೋದಾಗ ಅಲಾರಾಂ ಮೊಳಗಿದೆ. ಹೀಗಾಗಿ ಅವರೇ ನಿಜವಾದ ಅಭ್ಯರ್ಥಿಯೇ ಎಂಬ ಅನುಮಾನ ಅಧಿಕಾರಿಗಳಿಗೆ ಮೂಡಿದೆ. ನಂತರ ಆಧಾರ್ ಸಂಖ್ಯೆ ಮೂಲಕ ತನಿಖೆ ನಡೆಸಲಾಗಿದ್ದು, ಅದರಲ್ಲಿ ಆತನ ಚಿತ್ರ ಬಯಲಿಗೆ ಬಂದಿದೆ. ಸತ್ಯ ಹೊರಬಂದಾಗ ಅಭ್ಯರ್ಥಿಯೂ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಅಂತೆಯೇ, ಕೋಲ್ಕತ್ತಾ ಮತ್ತು ರೂರ್ಕಿಯಲ್ಲಿ ತಲಾ ಒಂದು ಪ್ರಕರಣ ಬೆಳಕಿಗೆ ಬಂದಿದ್ದು, ಅಭ್ಯರ್ಥಿಗಳ ಬದಲು ಬೇರೆಯವರು ಪರೀಕ್ಷೆಗೆ ಹಾಜರಾಗಿದ್ದರು!

ಪರೀಕ್ಷೆಯಲ್ಲಿ ಪಾರದರ್ಶಕತೆ ತರಲು ಪ್ರಯತ್ನ
ಪರೀಕ್ಷೆಯನ್ನು ಹೆಚ್ಚು ಪಾರದರ್ಶಕಗೊಳಿಸಲು ಎನ್‌ಟಿಎ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಎನ್‌ಟಿಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಕಲಿ ಅಭ್ಯರ್ಥಿಗಳನ್ನು ಹಿಡಿಯಲು AI ಉಪಕರಣಗಳನ್ನು ಬಳಸಲಾಗುತ್ತಿದೆ. ಮುಂಬರುವ ಎಲ್ಲಾ ಪರೀಕ್ಷೆಗಳಲ್ಲಿ ಇದನ್ನು ಬಳಸಲಾಗುವುದು. ನೀಟ್ ಯುಜಿ, ಜೆಇಇ ಮೇನ್ ಮತ್ತು ಸಿಯುಐಟಿ ಯುಜಿ ಬರೆಯುವ ಅಭ್ಯರ್ಥಿಗಳ ಸಂಖ್ಯೆ ಹೆಚ್ಚು. ಇದರ ಆಧಾರದ ಮೇಲೆ, AI ಉಪಕರಣಗಳ ಬಳಕೆಯನ್ನು ಪರಿಗಣಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net