ಪಠ್ಯ ಪರಿಷ್ಕರಣೆ ವಿಚಾರದಲ್ಲಿ ಲೋಪ: ಕಿಮ್ಮನೆ ರತ್ನಾಕರ್ ಬೇಸರ

23 smg 1
Published on

ಶಿವಮೊಗ್ಗ: ಇಂದು ಶಿಕ್ಷಣ ಎಂಬುದೇ ಚರ್ಚಾ ವಿಷಯವಾಗಿದ್ದು ಇಂದಿನ ಸರ್ಕಾರ ಮನಸ್ಸಿಗೆ ಬಂದಂತೆ ವರ್ತಿಸುತ್ತಿದ್ದು ಪಠ್ಯ ಪರಿಷ್ಕರಣೆ ವಿಚಾರದಲ್ಲಿ ಅನೇಕ ಲೋಪಗಳನ್ನು ಎಸಗಿದೆ ಎಂದು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಬೇಸರ ವ್ಯಕ್ತಪಡಿಸಿದರು.

ಕುವೆಂಪು ರಂಗಮಂದಿರದಲ್ಲಿ ಎನ್‌ಎಸ್‌ಯುಐ (ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ) ಶಿವಮೊಗ್ಗ ಜಿಲ್ಲೆಯಿಂದ ಶನಿವಾರ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನೋಟ್‌ಬುಕ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಾಲಿ ಪಠ್ಯಕ್ರಮ ವಿಚಾರ ಎಲ್ಲ ಕಡೆ ಚರ್ಚಿತವಾಗಿದೆ. ನಾನು ಶಿಕ್ಷಣ ಸಚಿವ ಆಗಿದ್ದಾಗ ಅತ್ಯಂತ ವ್ಯವಸ್ಥಿತವಾಗಿ ಪಠ್ಯಕ್ರಮ ಪರಿಷ್ಕರಣೆ ವಿಚಾರ ನಿರ್ವಹಿಸಲಾಗಿತ್ತು. ಆದರೆ ಇಂದು ಪಠ್ಯವೂ ಹಲವು ಲೋಪಗಳನ್ನು ಒಳಗೊಂಡಿದೆ. ಇಂತಹ ಮಹತ್ತರ ವಿಚಾರಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿ ಧ್ವನಿ ಎತ್ತುವ ಕೆಲಸವನ್ನು ಮಾಡಬೇಕಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ದೇಶದ ಅಭಿವೃದ್ಧಿಯಲ್ಲಿ ಶಿಕ್ಷಣದ ಪಾತ್ರ ದೊಡ್ಡದಿದೆ. ಯುವ ಪೀಳಿಗೆ ಸುಶಿಕ್ಷಿತರಾಗುವ ಮೂಲಕ ದೇಶದ ಪ್ರಗತಿಗೆ ಕೈಜೋಡಿಸಬೇಕಿದೆ. ಶಿಕ್ಷಣ ಪಡೆಯುವುದು ದೇಶದ ಪ್ರತಿಯೊಬ್ಬ ನಾಗರಿಕನ ಹಕ್ಕು. ಅದನ್ನು ಪಡೆಯುವುದರ ಜತೆಗೆ ಸಾಧನೆಯ ಶಿಖರವನ್ನೇರಬೇಕು. ಗುರಿ ಮುಟ್ಟಿದ ಬಳಿಕ ಇತರರನ್ನೂ ಗುರಿ ಮುಟ್ಟಿಸಲು ಕೈಜೋಡಿಸಬೇಕು. ಆಗ ಮಾತ್ರ ಶಿಕ್ಷಣ ಪಡೆದದ್ದೂ ಸಾರ್ಥಕವೆನಿಸಲಿದೆ. ಶಿಕ್ಷಣದಿಂದ ಸಮಾಜ ಪರಿವರ್ತನೆ ಸಾಧ್ಯವಿದ್ದು, ಅನಿಷ್ಠಗಳನ್ನು ದೂರವಿಟ್ಟು ಪ್ರಗತಿಯೆಡೆಗೆ ಮುನ್ನೆಡೆಯಲು ಪ್ರತಿಯೊಬ್ಬರೂ ಸಂಕಲ್ಪಬದ್ಧರಾಗಬೇಕಿದೆ ಎಂದು ಹೇಳಿದರು.

ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಮಾಜಿ ಎಂಎಲ್‌ಸಿ ಆರ್.ಪ್ರಸನ್ನಕುಮಾರ್ ಮಾತನಾಡಿದರು. ಎಸ್ಸೆಸ್ಸೆಲ್ಸಿಯಲ್ಲಿ 625 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಎನ್‌ಎಸ್‌ಯುಐ ಅಧ್ಯಕ್ಷ ಕೀರ್ತಿ ಗಣೇಶ್, ಜಿಲ್ಲಾಧ್ಯಕ್ಷ ವಿಜಯ್ ಕುಮಾರ್, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀಜಿತ್, ಕೆ.ಚೇತನ್, ಸಿ.ಜಿ.ಮಧುಸೂದನ್, ಮುಖಂಡರಾದ ಎಸ್.ಪಿ.ದಿನೇಶ್, ಕಲಗೋಡು ರತ್ನಾಕರ್, ರಮೇಶ್ ಹೆಗ್ಡೆ, ವಿಜಯ್ ಕುಮಾರ್, ಯಮುನಾ ರಂಗೇಗೌಡ, ಆದರ್ಶ್, ಪ್ರಶಾಂತ್, ಹನುಮಂತು, ಮಹಮ್ಮದ್ ಆರೀಫ್, ರಾಘವೇಂದ್ರ, ಮಹಮ್ಮದ್ ನಿಹಾಲ್, ಮಲ್ಲಿಕ್, ಪೂರ್ಣೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net