ಸರಳ-ಹೊಂದಾಣಿಕೆ ಜೀವನ ಕಲಿಸಲಿದೆ ಎನ್‌ಎಸ್‌ಎಸ್ ಶಿಬಿರ

22 gkp 001
ಶಿಬಿರದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು.
Published on

ಗೋಣಿಕೊಪ್ಪ: ಪೊನ್ನಂಪೇಟೆ ತಾಲೂಕಿನ ತೂಚಮಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಗೋಣಿಕೊಪ್ಪಲು ಕಾವೇರಿ ಪದವಿ ಪೂರ್ವ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ 2024-25ನೇ ಸಾಲಿನ ವಿಶೇಷ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭ ಆಯೋಜಿಸಲಾಗಿತ್ತು.

ಸಮಾರೋಪದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಎಸ್.ಎಸ್.ಮಾದಯ್ಯ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ಶಿಬಿರಗಳು ವಿದ್ಯಾರ್ಥಿಗಳಿಗೆ ಸರಳ ಹಾಗೂ ಹೊಂದಾಣಿಕೆಯ ಜೀವನವನ್ನು ಕಲಿಸುವುದರ ಜತೆಗೆ ಗ್ರಾಮ ಜೀವನದ ಬಗ್ಗೆ ತಿಳಿವಳಿಕೆ ಮೂಡಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ ಎಂದು ಹೇಳಿದರು.

ರಾಷ್ಟ್ರೀಯ ಸೇವಾ ಯೋಜನೆ ಶಿಬಿರದಲ್ಲಿ ಕಳೆಯುವ 7 ದಿನಗಳು ವಿದ್ಯಾರ್ಥಿಗಳಿಗೆ ವಿಶಿಷ್ಟ ಅನುಭವವನ್ನು ನೀಡುವುದರ ಜತೆಗೆ, ಸರ್ವರನ್ನು ಸಮಾನವಾಗಿ ಕಾಣುವ ಮನೋಭಾವವನ್ನು ಹುಟ್ಟುಹಾಕುತ್ತದೆ. ವಿದ್ಯಾರ್ಥಿಗಳು ಶೈಕ್ಷಣಿಕ ವಿಚಾರಗಳ ಜತೆಗೆ ಇಂಥ ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಸೇವಾ ಮನೋಭಾವನೆಯನ್ನು ಬೆಳೆಸಿಕೊಂಡು ತಮ್ಮ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಎನ್‌ಎಸ್‌ಎಸ್ ಅಧಿಕಾರಿ ವಿಪ್ರ ನೀಲಮ್ಮ ಮಾತನಾಡಿದರು. ಶಿಬಿರದಲ್ಲಿ ಭಾಗವಹಿಸಿದ್ದ ಸ್ವಯಂ ಸೇವಕರಲ್ಲಿ ಅತ್ಯುತ್ತಮ ಶಿಬಿರಾರ್ಥಿಯಾಗಿ ಆಯ್ಕೆಯಾದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ದಿವಿನ್ ವಿನೋದ್ ಮತ್ತು ವಿಪಿನ್, ವಿದ್ಯಾರ್ಥಿನಿಯರಾದ ನಿರ್ಷಿತಾ ಮತ್ತು ಜೀವಿತಾ, ಉದಯೋನ್ಮುಖ ಎನ್‌ಎಸ್‌ಎಸ್ ವಿದ್ಯಾರ್ಥಿಗಳಾಗಿ ಆಯ್ಕೆಯಾದ ಜನನಿ ಮತ್ತು ಚಂದನ ಅವರಿಗೆ ಪ್ರಶಸ್ತಿ ನೀಡಲಾಯಿತು.

ಬಲ್ಯಮಂಡೂರು ಗ್ರಾ.ಪಂ.ಉಪಾಧ್ಯಕ್ಷ ಆಲೆಮಾಡ ನವೀನ್, ಗ್ರಾ.ಪಂ.ಸದಸ್ಯ ಕೊಟ್ಟಂಗಡ ಅಯ್ಯಪ್ಪ, ಉಪಪ್ರಾಂಶುಪಾಲೆ ಎಂ.ಕೆ. ಪದ್ಮಾ, ಮುಖ್ಯ ಶಿಕ್ಷಕ ಸುಬ್ರಮಣಿ, ಎನ್‌ಎಸ್‌ಎಸ್ ಅಧಿಕಾರಿಗಳಾದ ಚೇತನ್ ಚಿಣ್ಣಪ್ಪ, ಉಪನ್ಯಾಸಕರಾದ ಕುಸುಮಾ, ಲೆಫ್ಟಿನೆಂಟ್ ಎಂ. ಅರ್.ಆಕ್ರಂ, ಗ್ರಾಮಸ್ಥರಾದ ಪುಟ್ಟಂಗಡ ದಮಯಂತಿ ಗ್ರೇಸಿ, ಪೆಮ್ಮಂಡ ಪುಷ್ಪಾ, ಮಾದಪ್ಪ, ನಾಗೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net