ಎನ್‌ಎಸ್‌ಕ್ಯೂ ಔಷಧ ನಿರ್ಬಂಧಕ್ಕೆ ಆ್ಯಪ್

dinesh gundu rao
Published on

ಬೆಂಗಳೂರು: ಗುಣಮಟ್ಟ ಕಡಿಮೆ ಇರುವ ಔಷಧವನ್ನು ಮಾರುಕಟ್ಟೆಯಿಂದ ಹಿಂಪಡೆಯಲು ಆಯೋಗ್ಯ ಇಲಾಖೆ ವಿಶೇಷ ಮೊಬೈಲ್ ಅಪ್ಲಿಕೇಷನ್ ಅಭಿವೃದ್ಧಿಪಡಿಸಿದ್ದು, 30 ದಿನದಲ್ಲಿ ಆಗುತ್ತಿದ್ದ ಕೆಲಸ ಕೇವಲ 2 ದಿನದಲ್ಲಿ ಮುಗಿಯಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ವಿಕಾಸಸೌಧದದಲ್ಲಿ ಮಾತನಾಡಿದ ಅವರು, ಔಷಧ ಪರೀಕ್ಷಾ ಪ್ರಯೋಗಾಲಯದಲ್ಲಿ ವಿಶ್ಲೇಷಣೆ ವೇಳೆ ಸಿಗುವ ವರದಿಯನ್ನು ಇಲಾಖೆ ಆಯುಕ್ತರು ಅಪ್ಲೀಕೇಷನ್‌ನಲ್ಲಿ ಇ-ಸಹಿ ಮಾಡಿ ಜಿಲ್ಲಾ ಸಹಾಯಕ ಔಷಧ ನಿಯಂತ್ರಕರಿಗೆ ರವಾನೆ ಮಾಡುತ್ತಾರೆ. ಅಲ್ಲಿಂದ ಖಾಸಗಿ ಔಷಧ ವಿತರಕರಿಗೆ ಕಡತ ಕಳುಹಿಸಿ, ಮೆಡಿಕಲ್ ಶಾಪ್‌ಗೆ ಕೊಟ್ಟಿರುವ ಗುಣಮಟ್ಟ ಕಡಿಮೆ ಇರುವ ಔಷಧವನ್ನು ಹಿಂಪಡೆಯುವ ವ್ಯವಸ್ಥೆ ಜಾರಿಗೆ ತರಲಾಗಿದೆ. ಮುಂದಿನ ದಿನಗಳಲ್ಲಿ ಈ ಅಪ್ಲಿಕೇಷನ್‌ಗೆ ಮೆಡಿಕಲ್ ಶಾಪ್‌ಗಳನ್ನು ಜೋಡಿಸಿ ಅವರಿಗೆ ನೇರ ಮಾಹಿತಿ ಕೊಟ್ಟು ಮಾರಾಟ ಮಾಡದಂತೆ ತಡೆಯುವ ಕೆಲಸ ಆಗಲಿದೆ ಎಂದು ದಿನೇಶ್ ಗುಂಡೂರಾವ್ ಮಾಹಿತಿ ನೀಡಿದರು.

ಈ ಮೊದಲು ಕಡಿಮೆ ಗುಣಮಟ್ಟ ಇರುವ ಔಷಧ ಹಿಂಪಡೆಯಬೇಕಾದರೆ ಕನಿಷ್ಠ 30 ದಿನಗಳು ಬೇಕಾಗಿತ್ತು. ಅಷ್ಟರಲ್ಲಿ ಬಹುತೇಕ ಔಷಧ ಮಾರಾಟ ಆಗುತ್ತಿತ್ತು. ಇದರಿಂದ ಕಳಪೆ ಔಷಧ ಹಿಂಪಡೆಯಲು ಸಾಧ್ಯವಾಗುತ್ತಿರಲಿಲ್ಲ ಎಂದರು.

ಜುಲೈನಲ್ಲಿ ಔಷಧ ಪರೀಕ್ಷಾ ಪ್ರಯೋಗಾಲಯದಲ್ಲಿ 1,433 ಔಷಧ ಮಾದರಿ ವಿಶ್ಲೇಷಣೆ ಮಾಡಿದ್ದು, ಈ ಪೈಕಿ 59 ಔಷಧ ಕಳಪೆ ಎಂದು ೋಷಣೆ ಮಾಡಿ ಹಿಂಪಡೆಯಲಾಗಿದೆ. ಅಮಲು ಔಷಧ ಮಾರಾಟ ಮಾಡುತ್ತಿದ್ದ 231 ಮೆಡಿಕಲ್ ಶಾಪ್‌ಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದರು.

406 ನೋಟಿಸ್

ಆಹಾರದ ಸುರಕ್ಷತೆ, ಗುಣಮಟ್ಟ ,ನೈರ್ಮಲ್ಯತೆ ಕುರಿತಂತೆ 1557 ಬೀದಿಬದಿ ವ್ಯಾಪಾರಸ್ಥರನ್ನು ಪರಿವೀಕ್ಷಣೆ ಮಾಡಿ, 406 ಅಂಗಡಿಗಳಿಗೆ ನೋಟಿಸ್ ನೀಡಲಾಗಿದೆ. 603 ಅಂಗನವಾಡಿ ಕೇಂದ್ರಗಳಿಗೆ 545 ಆಹಾರ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ. ಕೆಎಂಎ್ ಮತ್ತು ಖಾಸಗಿ ಕಂಪನಿಯ 175 ಹಾಲಿನ ಮಾದರಿ ಸಂಗ್ರಹಿಸಿ ವಿಶ್ಲೇಷಣೆಗಾಗಿ ರವಾನೆ ಮಾಡಿದ್ದು, ವರದಿ ಬರಬೇಕಿದೆ ಎಂದರು. ಅಡುಗೆ ಎಣ್ಣೆಯಲ್ಲಿ ಶೇ.2ಕ್ಕಿಂತ ಅಧಿಕ ಕೊಬ್ಬಿನಾಂಶ ಇದ್ದರೆ ಕ್ರಮ ತೆಗೆದುಕೊಳ್ಳುವುದಾಗಿ ಎಣ್ಣೆ ತಯಾರಿಕಾ ಘಟಕಗಳಿಗೆ ಎಚ್ಚರಿಕೆ ನೀಡಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net