ನರೇಗಾ ಸಿಬ್ಬಂದಿಗಿಲ್ಲ ವೇತನ

klr nreg story
ನರೇಗಾ ಯೋಜನೆಯಡಿ ರಸ್ತೆ ಕೆಲಸ ಮಾಡುತ್ತಿರುವು ಗ್ರಾಮೀಣ ಜನ.
Published on

ಕಿರುವಾರ ಎಸ್​. ಸುದರ್ಶನ್​ ಕೋಲಾರ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ)ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ನೌಕರರಿಗೆ ವೇತನ ಪಾವತಿ ಮಾಡಲು, ರಾಜ್ಯದಲ್ಲಿ ತಾಂತ್ರಿಕ ದೋಷ ಎದುರಾಗಿದ್ದು, ಒಟ್ಟು 5,367 ಸಿಬ್ಬಂದಿ ವೇತನವಿಲ್ಲದೆ 7&8 ತಿಂಗಳಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಯೋಜನೆಯ ಬಗ್ಗೆ ಗ್ರಾಮೀಣ ಜನತೆಗೆ ಪ್ರಚಾರ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವವರು ಕಾಯಂ ನೌಕರರಲ್ಲ. ಗುತ್ತಿಗೆಯ ಆಧಾರದಲ್ಲಿ ದುಡಿಯುತ್ತಿದ್ದಾರೆ. ನಿಗದಿಪಡಿಸಿರುವ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸುತ್ತಿದ್ದರೂ ಸರ್ಕಾರ ವೇತನವಿಲ್ಲದೆ ಕುಟುಂಬ ನಿರ್ವಹಣೆಗೂ ಪರಿತಪಿಸುತ್ತಿದ್ದಾರೆ.

ಇಂಜಿನಿಯರ್​ಗಳು, ಮಾಹಿತಿ, ಶಿಕ್ಷಣ ಮತ್ತು ಸಂವಹನ ಕಾರ್ಮಿಕರು ಮತ್ತು ಕ್ಷೇತ್ರ ಸಿಬ್ಬಂದಿ ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಸುವ ಜವಾಬ್ದಾರಿ ಹೊಂದಿದ್ದಾರೆ. ಸಿಬ್ಬಂದಿ ಉನ್ನತ ಅಧಿಕಾರಿಗಳನ್ನು ಸಂಪರ್ಕಿಸಿ ವೇತನ ಬಾಕಿ ಇರುವ ಸಂಬಂಧ ಮನವಿ ಮಾಡಿದ್ದರೂ ಕ್ರಮ ಕೈಗೊಂಡಿಲ್ಲ. ವೇತನ ಕೇಳಿದರೆ ಅಧಿಕಾರಿಗಳು ತಾಂತ್ರಿಕ ದೋಷದ ನೆಪ ಹೇಳುತ್ತಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

ಯೋಜನೆಯಡಿ ಗ್ರಾಮೀಣ ಜನರಿಗೆ ವರ್ಷಕ್ಕೆ 100 ದಿನಗಳ ಉದ್ಯೋಗ ದೊರೆಯುವಂತೆ ನೋಡಿಕೊಳ್ಳುವಲ್ಲಿ ಸಂಯೋಜಕರು ಪಾತ್ರವಹಿಸುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಮನ್ವಯದ ಕೊರತೆಯಿಂದ ಹಣ ಬಿಡುಗಡೆ ವಿಳಂಬವಾಗುತ್ತಿದೆ. ವೇತನ ವಿಳಂಬವನ್ನು ಖಂಡಿಸಿ ಸಿಬ್ಬಂದಿ ಈಗಾಗಲೇ ಹಲವು ಹೋರಾಟ ನಡೆಸಿಕೊಂಡು ಬಂದಿದ್ದು, ಈಗ ಮತ್ತೊಂದು ಹಂತದ ಹೋರಾಟಕ್ಕೆ ಸಿದ್ಧರಾಗುವ ಪರಿಸ್ಥಿತಿ ಬಂದೊದಗಿದೆ.

* ಆಯುಕ್ತರ ಹಂತದಲ್ಲೇ ಬಾಕಿ

ನರೇಗಾ ಯೋಜನೆಯನ್ನು ಗ್ರಾಮೀಣ ಪ್ರದೇಶದಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ತರಲು ಐಇಸಿ ಕೋಆರ್​ಡಿನೇಟರ್​ಗಳನ್ನು ಅರ್ಹ ಗುತ್ತಿಗೆ ಸಂಸ್ಥೆಗಳಿಂದ ನೇಮಕ ಮಾಡಿಕೊಳ್ಳಲಾಗಿದೆ. ಗ್ರಾಪಂ, ತಾಪಂ, ಜಿಪಂ ಮಟ್ಟದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯ ಹಾಜರಾತಿಯನ್ನು ಜಿಲ್ಲಾಮಟ್ಟದ ನರೇಗಾ ನೋಡಲ್​ ಅಧಿಕಾರಿ ಸಿದ್ಧಪಡಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಮೂಲಕ ಪಂಚಾಯತ್​ ಮತ್ತು ಗ್ರಾಮೀಣಾಭಿವೃದ್ಧಿ ಆಯುಕ್ತರಿಗೆ ಪ್ರತಿ ತಿಂಗಳು ಕಳುಹಿಸಿಕೊಡುತ್ತಾರೆ. ಸರ್ಕಾರದಿಂದ ಗುತ್ತಿಗೆ ಸಂಸ್ಥೆಗೂ ಬಿಡುಗಡೆಯಾಗಿಲ್ಲ. ಇದರಿಂದಾಗಿ ವೇತನ ಬಿಡುಗಡೆಯಾಗುತ್ತದೊ, ಇಲ್ಲವೊ ಎಂಬ ಆತಂಕ ಸಿಬ್ಬಂದಿಯಲ್ಲಿ ಎದುರಾಗಿದೆ. ಇದರಿಂದಾಗಿ ಕೆಲವರು ಕೆಲಸ ಬಿಡಲು ನಿರ್ಧಾರಿಸಿದ್ದಾರೆ ಎಂಬುದು ಮೂಲಗಳಿಂದ ತಿಳಿದು ಬಂದಿದೆ.

* ಎಷ್ಟು ಬಾಕಿಯಿದೆ...?

ರಾಜ್ಯದಲ್ಲಿ ಸುಮಾರು 787 ಕೋಟಿ ರೂ. ಬಿಲ್​ಗಳು ಬಾಕಿ ಇದ್ದು, ಆ ಪೈಕಿ ಒಟ್ಟು ವೇತನ ಸುಮಾರು 600 ಕೋಟಿ ರೂ. ಇದೆ. ಸುಮಾರು ಜಿಲ್ಲೆಗಳಲ್ಲಿ ಮಾವನ ದಿನಗಳಲ್ಲು ಹೆಚ್ಚಿಸುವ ಕುರಿತು ಸರ್ಕಾರವೇ ಗುರಿ ನೀಡಿದ್ದು, ಗುರಿ ಸಾಧನೆಗೆ ಒತ್ತು ನೀಡಿದ್ದಾರೆ. ವೇತನ ಬಾಕಿಯಿಂದ ಕೆಲಸಕ್ಕೆ ಹಿಂದೇಟು ಹಾಕುತ್ತಿದ್ದಾರೆ.

* ಸ್ಪಂದನೆ ಸಿಗದಿದ್ದರೆ 7ಕ್ಕೆ ಕೆಲಸ ಬಹಿಷ್ಕಾರ

ವೇತನ ಪಾವತಿ ವಿಳಂಬ ವಿಚಾರ ಕುರಿತು ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧ್ಯಕ್ಷರು ಮತ್ತು ರಾಜ್ಯ ಪ್ರತಿನಿಧಿಗಳ ಜತೆ ಸಮಾಲೋಚನೆ ನಡೆಸಿ ನಿರ್ಧಾರ ಕೈಗೊಳ್ಳಲಾಳ್ಳಲಾಗಿದೆ. ಜು.3ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸಚಿವರ ನೇತೃತ್ವದ ಸಿಇಒಗಳ ಸಭೆಯ ಸ್ಥಳಕ್ಕೆ ರಾಜ್ಯ ನೆವಾಕ್​ ಸಂಘದ ಪ್ರತಿನಿಧಿಗಳ ನಿಯೋಗವು ಮನವಿ ಸಲ್ಲಿಸಲಾಗುವುದು. ಇದಕ್ಕೆ ಸರ್ಕಾರದಿಂದ ಸ್ಪಂದನೆ ಸಿಗದಿದ್ದರೆ ಜು.-7ರಿಂದ ಸೇವೆ ಬಹಿಷ್ಕರಿಸಿ ಪ್ರತಿಭಟನೆ ನಡೆಸಲು ರಾಜ್ಯ ಸಂಘ ತೀಮಾರ್ನಿಸಿದೆ.

ಸಿಬ್ಬಂದಿ ಕೆಲಸವೇನು?

* ಮಾಹಿತಿ, ಶಿಕ್ಷಣ ಮತ್ತು ಸಂವಹನ ಸಿಬ್ಬಂದಿಗೆ ಜಾಗೃತಿ ಮೂಡಿಸುವುದು.

* ಕಾರ್ಯಗತಗೊಳಿಸಿದ ಕೆಲಸದ ದಾಖಲೆಗಳನ್ನು ಅಪ್​ಲೋಡ್​ ಮಾಡುವುದು.

* ಬಿಲ್​ಗಳನ್ನು ಸಂಗ್ರಹಿಸುವ ಮೊದಲು ಗುಣಮಟ್ಟ ಪರಿಶೀಲಿಸುವುದು.

* ಯೋಜನೆಯಲ್ಲಿ ಸಾರ್ವಜನಿಕರು ಭಾಗವಹಿಸುವಂತೆ ಉತ್ತೇಜನ ನೀಡುವುದು.

ಕೋಟ್​...

ಯೋಜನೆಯಡಿ ಬಿಲ್​ ಪಾವತಿಗೆ ಕೇಂದ್ರ ಸರ್ಕಾರವು ಸ್ಪರ್ಶ್​ ಆ್ಯಪ್​ ಅಭಿವೃದ್ಧಿಪಡಿಸುತ್ತಿದ್ದು, ರಾಜ್ಯ ಸರ್ಕಾರವು ತಂತ್ರಾಂಶದಲ್ಲಿ ದಾಖಲು ಮಾಡಿ ಅಂತಿಮಗೊಳಿಡಿಸಿದ ಎರಡ್ಮೂರು ದಿನಗಳಲ್ಲಿ ಬಾಕಿ ವೇತನ ಪಾವತಿಯಾಗುತ್ತದೆ.

> ರಮೇಶ್​, ಉಪ ಕಾರ್ಯದರ್ಶಿ, ಜಿಪಂ ಕೋಲಾರ

ಕೋಟ್​...

ನಾವು ಸಹ ಗ್ರಾಮೀಣ ಪ್ರದೇಶದಿಂದ ಬಂದಿದ್ದೇವೆ, ಅಲ್ಲಿನ ಸಮಸ್ಯೆಗಳು ಏನು ಎಂಬುದರ ಬಗ್ಗೆ ಹತ್ತಿರದಿಂದ ಬಲ್ಲವರಾಗಿದ್ದು, ಯಾವುದೇ ರೀತಿಯ ತೊಂದರೆಯಾಗದಂತೆ ಸೇವೆ ಮಾಡಿಕೊಂಡು ಬರುತ್ತಿದ್ದೇವೆ. ವೇತನ ಬಾಕಿ ಇರುವ ಕುರಿತು ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಸಮಸ್ಯೆಗೆ ಸ್ಪಂದಿಸುತ್ತಿಲ್ಲ.

> ಹೆಸರು ಹೇಳಲು ಇಚ್ಛಿಸದ ಸಿಬ್ಬಂದಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net