ನಿಗಮ-ಮಂಡಳಿ ಲೆಕ್ಕಾಚಾರ ಶುರು: ಪ್ರಮುಖರ ಮೇಲೆ ಆಕಾಂಕ್ಷಿಗಳ ಒತ್ತಡ; ಬಜೆಟ್ ಮಂಡನೆ ಬಳಿಕ ನೇಮಕ ಪ್ರಕ್ರಿಯೆ

Vidhanasoudha
Published on

| ಶ್ರೀಕಾಂತ ಶೇಷಾದ್ರಿ ಬೆಂಗಳೂರು

ಹೊಸ ಸರ್ಕಾರ ರಚನೆಯಾಗುತ್ತಿದ್ದಂತೆ ಸಿಗಬಹುದಾದ ಅವಕಾಶಗಳನ್ನು ತಮ್ಮದಾಗಿಸಿಕೊಳ್ಳಲು ರಾಜ್ಯದುದ್ದಗಲಕ್ಕೂ ಕಾಂಗ್ರೆಸ್ ಶಾಸಕರು, ಪದಾಧಿಕಾರಿಗಳು, ಕಾರ್ಯಕರ್ತರು ತುದಿಗಾಲಲ್ಲಿ ನಿಂತಿದ್ದಾರೆ. ಆಕಾಂಕ್ಷಿಗಳು ಪಕ್ಷದ ಪ್ರಮುಖ ನಾಯಕರನ್ನು ಸುತ್ತುವರಿಯಲಾರಂಭಿಸಿದ್ದು, ಒತ್ತಡ ತರಲಾರಂಭಿಸಿದ್ದಾರೆ. ಚುನಾವಣೆಯಲ್ಲಿ ಹೆಚ್ಚಿನ ಶ್ರಮಹಾಕಿ ಪರಿಣಾಮಕಾರಿ ಫಲಿತಾಂಶ ತಂದುಕೊಟ್ಟವರು, ಚುನಾ

ವಣೆಯಲ್ಲಿ ಟಿಕೆಟ್​ಗಾಗಿ ಪ್ರಯತ್ನಿಸಿ ಕೊನೆಯ ಹಂತದಲ್ಲಿ ಮನವೊಲಿಕೆ ಪ್ರಯತ್ನದಲ್ಲಿ ಮಾತು ಕೇಳಿ ಹಿಂದೆ ಸರಿದವರು, ಪಕ್ಷದ ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು, ರಾಜ್ಯ ಪದಾಧಿಕಾರಿಗಳು, ಶಾಸಕರು ಮತ್ತು ಪರಿಷತ್ ಸದಸ್ಯರು ನಿಗಮ-ಮಂಡಳಿಗಳ ಮೇಲೆ ಕಣ್ಣಿಟ್ಟಿದ್ದಾರೆ.

ಪಕ್ಷದ ಮಾಹಿತಿ ಪ್ರಕಾರ ಜುಲೈ ಎರಡನೇ ವಾರದಲ್ಲಿ ಬಜೆಟ್ ಮಂಡನೆಯಾಗಲಿದೆ. ಅದಾದ ಬಳಿಕವಷ್ಟೇ ನಿಗಮ ಮಂಡಳಿ ನೇಮಕ ಪ್ರಕ್ರಿಯೆ ಆರಂಭವಾಗಲಿದೆ. ಅಲ್ಲದೆ, ಮೊದಲ ಎರಡೂವರೆ ವರ್ಷ ಅವಧಿಗೆ ಹಾಲಿ ಶಾಸಕರು, ಪರಿಷತ್ ಸದಸ್ಯರಿಗೆ ಅವಕಾಶ ನೀಡಲಾಗುತ್ತದೆ. ಪದಾಧಿಕಾರಿಗಳಿಗೆ ಕಡಿಮೆ ಪ್ರಾಧಾನ್ಯತೆ ನೀಡಲಾಗುತ್ತದೆ. ಎರಡನೆಯ ಅವಧಿಗೆ ಪದಾಧಿಕಾರಿಗಳು, ಪಕ್ಷ ಸಂಘಟನೆಯಲ್ಲಿ ತೊಡಗಿದ್ದವರಿಗೆ ಪೂರ್ಣ ಪ್ರಮಾಣದ ಅವಕಾಶ ನೀಡುವ ಬಗ್ಗೆ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಲೋಕಸಭಾ ಚುನಾವಣೆ ಎದುರಿಗಿರುವುದರಿಂದ ಮೊದಲ ಆದ್ಯತೆಯಲ್ಲಿ ಶಾಸಕರು ಮತ್ತು ಪರಿಷತ್ ಸದಸ್ಯರಿಗೆ ಅವಕಾಶ ನೀಡುವ ಮೂಲಕ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡಲು ಬಯಸಲಾಗಿದೆ.

ಎಷ್ಟು ಮಂದಿಗೆ ಅವಕಾಶ?: ಸರ್ಕಾರದ ಅಧೀನದಲ್ಲಿ ಒಟ್ಟಾರೆ 85 ನಿಗಮಗಳಿದ್ದು, ಅಲ್ಲಿಗೆ ನೇಮಕ ಮಾಡುವ ಪೂರ್ಣ ಅಧಿಕಾರ ಸರ್ಕಾರಕ್ಕಿದೆ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ನಿರ್ದೇಶಕರನ್ನು ನೇಮಕ ಮಾಡುವ ಮೂಲಕ ಪಕ್ಷದ ಕಾರ್ಯಕರ್ತರಿಗೆ ಅವಕಾಶ ನೀಡಬಹುದಾಗಿದೆ. ಎಲ್ಲ ರಾಜಕೀಯ ಪಕ್ಷಗಳು ತಮ್ಮ ಅಧಿಕಾರದ ಸರದಿ ಬಂದಾಗ ನೇಮಕಗಳನ್ನು ಮಾಡುತ್ತವೆ. ಇನ್ನೊಂದು ಮಗ್ಗುಲಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ತಮ್ಮ ಆಪ್ತರಿಗೆ ಹೆಚ್ಚೆಚ್ಚು ಸ್ಥಾನ ಕೊಡಿಸುವ ಸಾಧ್ಯತೆ ಇರುವುದರಿಂದ ಪೈಪೋಟಿ ಏರ್ಪಡುವುದು ಸಹಜ. ಹೀಗಾಗಿ ನಿಗಮ-ಮಂಡಳಿಯ ಹಂಚಿಕೆಯಲ್ಲೂ ಹಂಚಿಕೆ ಸೂತ್ರ ರೂಪುಗೊಳ್ಳಲಿದೆ.

ಲಾಭ ನಷ್ಟದ ಲೆಕ್ಕಾಚಾರ: ಅನೇಕ ನಿಗಮ ಮಂಡಳಿಗಳು ಸೂಕ್ತ ಅನುದಾನ, ಆದಾಯ ಇಲ್ಲದೇ ಖರ್ಚಿಗೆ ಪರದಾಡುತ್ತಿವೆ. ಕೆಲವು ಶ್ರೀಮಂತವಾಗಿವೆ. ಅಧ್ಯಕ್ಷರಾದವರಿಗೆ ಮನೆ, ಕಾರು ಸೌಲಭ್ಯದ ಜತೆಗೆ ಧಾರಾಳವಾಗಿ ‘ಆತಿಥ್ಯ’ ವೆಚ್ಚ ಮಾಡುವಷ್ಟು ಅನುಕೂಲವಾಗಿವೆ. ಇಂತವುಗಳ ಸಂಖ್ಯೆ 15ಕ್ಕಿಂತ ಹೆಚ್ಚಿಲ್ಲ.

ಅನೇಕ ಮಂಡಳಿಗಳಿಗೆ ಸರ್ಕಾರ ನೀಡುವ ಅನುದಾನ ಸಾಲದೇ ಸಿಬ್ಬಂದಿ ವೇತನ, ಕಚೇರಿ ನಿರ್ವಹಣೆಗೆ ಸೀಮಿತವಾಗಿರುವವೂ ಇವೆ. ಹೀಗಾಗಿ ಮುಕ್ಕಾಲು ಪಾಲು ನಿಗಮ ಮಂಡಳಿಗಳ ಅಧಿಕಾರ ಪಡೆದವರಿಗೆ ಅಧಿಕಾರ ಸಿಕ್ಕಿದೆಯಷ್ಟೇ ಎಂದು ಖುಷಿಪಡುವ ಸ್ಥಿತಿ ಇದೆ.

ಪ್ರಾಧಿಕಾರ, ಆಯೋಗ, ಅಕಾಡೆಮಿ: ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಅಲ್ಪಸಂಖ್ಯಾತರ ಆಯೋಗ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ, ಚಲನಚಿತ್ರ ಅಕಾಡೆಮಿ, ಜವಾಹರ್ ಬಾಲಭವನ ಸೊಸೈಟಿ, ಕರ್ನಾಟಕ ಮೃಗಾಲಯ ಪ್ರಾಧಿಕಾರ, ರಾಜ್ಯ ಬಿತ್ತನೆ ಬೀಜ ಪ್ರಮಾಣ ಸಂಸ್ಥೆ, ಕನಿಷ್ಠ ವೇತನ ಸಲಹಾ ಮಂಡಳಿ.

ಸಾಮಾನ್ಯ ಲೆಕ್ಕಾಚಾರ: ಕೆಲವು ನಿಗಮ-ಮಂಡಳಿ ಹೊರತುಪಡಿಸಿದರೆ ಅಧ್ಯಕ್ಷರಾದವರಿಗೆ ಸರಾಸರಿ ವೇತನ 40,000 ರೂ. ಇರಲಿದೆ. ಶಾಸಕರಾದವರಿಗೆ ಸಂಪುಟ ದರ್ಜೆ ಸ್ಥಾನ ಮಾನ ನೀಡಿದರೆ ಮಾತ್ರ ಹೆಚ್ಚಿನ ಲಾಭ. ಅದೇ ರೀತಿ ಆತಿಥ್ಯ ವೆಚ್ಚ 16 ಸಾವಿರ ರೂ., ಪ್ರವಾಸ ಭತೆ್ಯ ಪ್ರತಿ ದಿನ 2 ಸಾವಿರ ರೂ., ಗೃಹ ಭತ್ಯೆ ಅಥವಾ ಬಾಡಿಗೆ ಒಂದು ಲಕ್ಷ ರೂ., ಸಾವಿರ ಲೀಟರ್ ಪೆಟ್ರೋಲ್ ಮತ್ತು ಒಬ್ಬ ಆಪ್ತ ಕಾರ್ಯದರ್ಶಿ, ಇಬ್ಬರು ಆಪ್ತ ಸಹಾಯಕರು, ಇಬ್ಬರು ಪರಿಚಾರಕರನ್ನು ನೇಮಕ ಮಾಡಿಕೊಳ್ಳಲು ಅವಕಾಶ ಇರಲಿದೆ.

‘ಎ’ ಕೆಟಗರಿ

ದೇವರಾಜ ಅರಸು ಹಿಂದುಳಿದ ವರ್ಗದವರ ಅಭಿವೃದ್ಧಿ ನಿಗಮ, ಕರ್ನಾಟಕ ಗೃಹಮಂಡಳಿ, ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಜಂಗಲ್ ಲಾಡ್ಜಸ್ ಆಂಡ್ ರೆಸಾರ್ಟ್ಸ್, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬಿಎಂಟಿಸಿ (ಅಧ್ಯಕ್ಷರು), ವಾಯವ್ಯ ಸಾರಿಗೆ ನಿಗಮ, ಈಶಾನ್ಯ ಸಾರಿಗೆ ನಿಗಮ, ಆಹಾರ ಮತ್ತು ನಾಗರಿಕ ಪೂರೈಕೆ ನಿಗಮ, ಕರ್ನಾಟಕ ಉಗ್ರಾಣ ನಿಗಮ, ಮೈಸೂರು ಸೇಲ್ಸ್ ಇಂಟರ್​ನ್ಯಾಷನಲ್ ಲಿಮಿಟೆಡ್, ಕೆಎಸ್​ಆರ್​ಟಿಸಿ, ಕಿಯೋನಿಕ್ಸ್, ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳು, ಕಲ್ಯಾಣ ಕರ್ನಾಟಕ ಪ್ರದೇಶಾವೃದ್ಧಿ ಮಂಡಳಿ.

‘ಬಿ’ ಕೆಟಗರಿ

ಕರಕುಶಲ ಅಭಿವೃದ್ಧಿನಿಗಮ, ಮದ್ಯಪಾನ ಸಂಯಮ ಮಂಡಳಿ, ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಕಂಠೀರವ ಸ್ಟುಡಿಯೊ ನಿಗಮ, ಕರ್ನಾಟಕ ಮಹಿಳಾ ಅಭಿವೃದ್ಧಿ ನಿಗಮ, ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ, ದೇವರಾಜ ಅರಸ್ ಟ್ರಕ್ ಟರ್ವಿುನಲ್, ಮೈಸೂರು ಎಲೆಕ್ಟ್ರಿಕಲ್ಸ್ ಲಿಮಿಟೆಡ್, ಮಾರ್ಕೆಟಿಂಗ್ ಆಂಡ್ ಕನ್ಸಲ್ಟೆನ್ಸಿ ಏಜೆನ್ಸಿ, ಹಟ್ಟಿ ಗೋಲ್ಡ್ ಮೈನ್ಸ್ ಲಿಮಿಟೆಡ್, ಕರ್ನಾಟಕ ಜವಳಿ ಅಭಿವೃದ್ಧಿ ನಿಗಮ, ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ, ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ, ಕರ್ನಾಟಕ ರೇಷ್ಮೆ ಕೈಗಾರಿಕೆ ಅಭಿವೃದ್ಧಿ ನಿಗಮ, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಮಲೆನಾಡು ಪ್ರದೇಶಾಭವೃದ್ಧಿ ಮಂಡಳಿ, ಬಯಲುಸೀಮೆ ಅಭಿವೃದ್ಧಿ ಮಂಡಳಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ.

‘ಸಿ’ ಕೆಟಗರಿ

ಕರ್ನಾಟಕ ಕಾಂಪೋಸ್ಟ್ ಅಭಿವೃದ್ಧಿ ನಿಗಮ, ತೆಂಗು ನಾರು ಅಭಿವೃದ್ಧಿ ಮಂಡಳಿ, ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ, ಅರಣ್ಯ ಅಭಿವೃದ್ಧಿ ನಿಗಮ, ಕುರಿ ಅಭಿವೃದ್ಧಿ ನಿಗಮ, ಬಂಜಾರ ಅಭಿವೃದ್ಧಿ ನಿಗಮ, ಜವಳಿ ಅಭಿವೃದ್ಧಿ ನಿಗಮ, ವಿಶ್ವಕರ್ಮ ಅಭಿವೃದ್ಧಿ ಮಂಡಳಿ, ಕೈಮಗ್ಗ ಅಭಿವೃದ್ಧಿ ನಿಗಮ, ಗೇರು ಅಭಿವೃದ್ಧಿ ನಿಗಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net